ಉತ್ತಮ ಆರೋಗ್ಯಕ್ಕೆ ಆಯುರ್ವೇದ ಸೂಕ್ತ

7LNG02
Published on

ಲಿಂಗಸುಗೂರು: ಭಾರತೀಯ ಸನಾತನ ಪರಂಪರೆಯಲ್ಲಿ ಋಷಿ-ಮುನಿಗಳು ಬಳಸುತ್ತಿದ್ದ ಆಯುರ್ವೇದ ಪದ್ಧತಿ ರೂಢಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ವಿಭಾಗೀಯ ಅಧ್ಯಕ್ಷ ಶರಣು ಜಿ.ಗದ್ದುಗೆ ಹೇಳಿದರು.

ಪಟ್ಟಣದ ಶಾದಿಮಹಲ್‌ನಲ್ಲಿ ಹೂ-ಅಲ್ ಶಿಫಾ ವನೌಷಧ ಆಯುರ್ವೇದ ವೈದ್ಯ ಪರಿಷತ್‌ನಿಂದ ಹಮ್ಮಿಕೊಂಡಿದ್ದ ಮೃಗಶಿರ ಉಚಿತ ಮಾತ್ರೆ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನಮ್ಮ ಪೂರ್ವಜರು ಬಳಸುತ್ತಿದ್ದ ಆಯುರ್ವೇದ ಪದ್ಧತಿ, ಸಾವಯವ ಆಹಾರ ಸೇವನೆ ಹಾಗೂ ಮನೆ ಮದ್ದುಗಳು ಉಪಯುಕ್ತವಾಗಿವೆ ಎಂದರು.

ಪಾಶ್ಚಿಮಾತ್ಯ ಸಂಸ್ಕೃತಿ ವ್ಯಾಮೋಹದಿಂದ ಯುವ ಜನಾಂಗ ದಾರಿ ತಪ್ಪುತ್ತಿದ್ದು, ತರಕಾರಿ, ಹಣ್ಣು, ದವಸ-ಧಾನ್ಯ ಕಲುಷಿತವಾಗಿವೆ. ದೇಶದ ಸನಾತನ ಪರಂಪರೆ, ಸಂಸ್ಕೃತಿ ಉಳಿಸಿ ಬೆಳೆಸಲು ಆದ್ಯತೆ ನೀಡಬೇಕು. ಜಾನುವಾರು ರಕ್ಷಣೆ ಮತ್ತು ಹೈನುಗಾರಿಕೆಗೆ ಒತ್ತು ನೀಡಬೇಕಿದೆ. ಮೃಗಶಿರ ಮಾತ್ರೆ ವಿತರಣೆ ಕಾರ್ಯಕ್ರಮ ಆಯೋಜನೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು. ಪ್ರಮುಖರಾದ ಕಾಶಿಂಸಾಬ, ವಾಹೀದ್ ಖುರೇಷಿ, ಮಲ್ಲನಗೌಡ ಪಾಟೀಲ್, ಸಂಜೀವಪ್ಪ ಹುನಕುಂಟಿ, ನಿಸಾರುದ್ದೀನ್, ಶರಣಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net