

ಸಿದ್ದಾಪುರ: ನಾವು ಕಂಡ ಕನಸು ನನಸಾಗಬೇಕಾದರೆ ಹಾಗೂ ಗುರಿ ಮುಟ್ಟಬೇಕಾದರೆ ಎಲ್ಲರೂ ಆರೋಗ್ಯವಂತರಾಗಿರಬೇಕು ಎಂದು ಶಾಸಕ ಭೀಮಣ್ಣ ಟಿ. ನಾಯ್ಕ ಹೇಳಿದರು.
ಪಟ್ಟಣದ ಬಾಲಿಕೊಪ್ಪ ಎಂಎಚ್ಪಿಎಸ್ ಶಾಲೆಯಲ್ಲಿ ಆಧಾರ್ ಸಂಸ್ಥೆಯವರು ಮಂಗಳೂರಿನ ಒಮೇಗಾ ಆಸ್ಪತ್ರೆ ಹಾಗೂ ಮಂಗಳೂರು ಹಾರ್ಟ್ ಸ್ಕಾ್ಯನ್ ಫೌಂಡೇಷನ್ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ದಿ. ಡಿ.ಎನ್. ಶೇಟ್ ಸ್ಮರಣಾರ್ಥ ಆಯೋಜಿಸಿದ್ದ ಬೃಹತ್ ಉಚಿತ ಹೃದಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಆಹಾರ ಪದ್ಧತಿ, ಜೀವನಶೈಲಿಯಿಂದ ಕಡಿಮೆ ವಯಸ್ಸಿನಲ್ಲಿಯೇ ಹೃದಯ ಸಂಬಂಧಿತ ಕಾಯಿಲೆ ಸೇರಿ ಅನೇಕ ರೋಗಗಳಿಗೆ ಯುವಕರು ಬಲಿಯಾಗುತ್ತಿದ್ದಾರೆ. ನಾವು ಆರೋಗ್ಯವಂತರಾಗಿದ್ದರೂ ಇಂದಿನ ದಿನಗಳಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿಯಿದೆ ಎಂದರು.
ಹಿರಿಯ ಹೃದ್ರೋಗ ತಜ್ಞ ಕೆ. ಮುಕುಂದ್ ಮಾತನಾಡಿ, ಹೃದಯಾಘಾತ ಸಂಭವಿಸಲು ಕಾರಣಗಳು ಅದಕ್ಕಿರುವ ಮುಂಜಾಗ್ರತೆ ಪರೀಕ್ಷೆಗಳು ಹಾಗೂ ಮಂಗಳೂರು ಒಮೇಗಾ ಆಸ್ಪತ್ರೆಯಲ್ಲಿ ಇದಕ್ಕಿರುವ ಅತ್ಯಾಧುನಿಕ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಆಧಾರ್ ಸಂಸ್ಥೆ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ಅಧ್ಯಕ್ಷತೆ ವಹಿಸಿದ್ದರು.
ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ಶಸ್ತ್ರಚಿಕಿತ್ಸಾ ತಜ್ಞ ಡಾ. ಅಮಿತ್ ಕಿರಣ್, ಡಾ. ಅಭಿಜಿತ್ ಪಾಟೀಲ, ಪಪಂ ಸದಸ್ಯ ನಂದನ್ ಬೋರಕರ್, ಆಧಾರ್ ಸಂಸ್ಥೆ ಉಪಾಧ್ಯಕ್ಷ ಬೈಜು ಜೋಸೆಫ್, ಶಿಬಿರದ ಸಂಯೋಜಕ ಧರ್ಮ ಅಂಬಿಗ, ಮಂಗಳೂರು ಒಮೇಗಾ ಆಸ್ಪತ್ರೆ ಎಚ್.ಆರ್. ನಾಗರಾಜ ಟಿ. ಮಂಗಳೂರು ಹಾರ್ಟ್ ಸ್ಕಾ್ಯನ್ ಫೌಂಡೇಷನ್ ಪಿಆರ್ಒ ಬಾಲಕೃಷ್ಣ ಮುಟ್ಟಂ, ಶಾಲಾ ಮುಖ್ಯಾಧ್ಯಾಪಕ ಅರ್ಜುನ ಚವ್ಹಾಣ, ಇತರರು ಉಪಸ್ಥಿತರಿದ್ದರು. ಸುರೇಶ ಮಡಿವಾಳ ಕಡಕೇರಿ, ಪುಷ್ಪಲತಾ ನಾಯ್ಕ, ಪ್ರಶಾಂತ ಶೇಟ್ ಕಾರ್ಯಕ್ರಮ ನಿರ್ವಹಿಸಿದರು.