ಜಿಡಿಪಿ 4.9ಕ್ಕೆ ಸೀಮಿತ ಒಳ್ಳೆಯ ಬೆಳವಣಿಗೆ

mysore
Published on

ಮೈಸೂರು: ಮೈಸೂರು ಸ್ವದೇಶಿ ಜಾಗರಣ ಮಂಚ್ ವತಿಯಿಂದ ‘ವಿಕಸಿತ ಭಾರತಕ್ಕಾಗಿ ಕೇಂದ್ರ ಬಜೆಟ್-2025’ ಬಗ್ಗೆ ಸಂವಾದ ಕಾರ್ಯಕ್ರಮ ನಗರದಲ್ಲಿ ಇತ್ತೀಚಿಗೆ ಆಯೋಜಿಸಲಾಗಿತ್ತು.


ಅರ್ಥಶಾಸ್ತಜ್ಞ, ಸ್ವದೇಶಿ ಜಾಗರಣ ಮಂಚ್ ರಾಷ್ಟ್ರೀಯ ಸಮಿತಿ ಸದಸ್ಯ ಪ್ರೊ.ಬಿ.ಎಂ.ಕುಮಾರಸ್ವಾಮಿ ಮಾತನಾಡಿ, ಬಜೆಟ್ ಎಂದರೆ ಸರ್ಕಾರದ ಆಯವ್ಯಯದ ಅಂದಾಜು ಪತ್ರ. ಆಯ-ವ್ಯಯದ ಅಂತರ ಕಡಿಮೆ ಆಗಬೇಕು. ಆದಾಯದಲ್ಲಿ ಸಾಲದ ಅಂಶ ಕಡಿಮೆ ಇರಬೇಕು. ಸರ್ಕಾರಿ ಸಾಲ ಆದಾಯವಲ್ಲ ಎಂದರು.


ಈ ಬಾರಿಯ ಬಜೆಟ್‌ನಲ್ಲಿ ವಿತ್ತೀಯ ಕೊರತೆ 16.14 ಲಕ್ಷ ಕೋಟಿ ರೂ. ಇದೆ. ಅಂದರೆ ನಮ್ಮ ಜಿಡಿಪಿಯ ಪ್ರತಿಶತ 4.9ಕ್ಕೆ ಸೀಮಿತಗೊಳಿಸಲಾಗಿರುವುದು ಒಳ್ಳೆಯ ಲಕ್ಷಣ. ಬಂಡವಾಳ ವೆಚ್ಚ ಎಂದರೆ ಅಭಿವೃದ್ಧಿ ವೆಚ್ಚ ಕಳೆದ ವರ್ಷ 9.5 ಲಕ್ಷ ಕೋಟಿ ರೂ. ಇದ್ದುದ್ದನ್ನು ಈ ಬಾರಿ 11.11 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.


ಉದ್ಯೋಗ ಸೃಷ್ಟಿ ಹಾಗೂ ಕೌಶಲಾಭಿವೃದ್ಧಿಗೆ ಬಗ್ಗೆ ಸ್ವದೇಶಿ ಜಾಗರಣ ಮಂಚ್ ಹಲವು ವರ್ಷಗಳಿಂದ ಆಗ್ರಹಿಸಿತ್ತು. ಈ ವರ್ಷ ಬಜೆಟ್‌ನಲ್ಲಿ ಈ ಬಗ್ಗೆ 3 ಲಕ್ಷ ಕೋಟಿ ರೂ. ಒದಗಿಸಿ, ಅತಿ ಹೆಚ್ಚಿನ ಆದ್ಯತೆ ನೀಡಲಾಗಿದೆ. 3 ಉದ್ಯೋಗ ಸಂಬಂಧಿ ಉತ್ತೇಜಕ ಯೋಜನೆಗಳನ್ನು ಆರಂಭಿಸಲಾಗಿದೆ ಎಂದರು.


ಸ್ಕೀಂ 1ರಲ್ಲಿ ಅಧಿಕೃತ ವಲಯಗಳಲ್ಲಿ ಹೊಸದಾಗಿ ಉದ್ಯೋಗ ಪಡೆದು, ಕಾರ್ಮಿಕ ಭವಿಷ್ಯ ನಿಧಿ ಕಚೇರಿಯಲ್ಲಿ ನೋಂದಾಯಿಸಿ ಕೊಂಡವರಿಗೆ 3 ಕಂತುಗಳಲ್ಲಿ 1 ತಿಂಗಳ ಸಂಬಳ ನೀಡಲಾಗುತ್ತದೆ. ಸ್ಕೀಂ 2ನಲ್ಲಿ ಯಾವುದಾದರೂ ಉದ್ಯಮ ಈ ಹಿಂದೆ ತನ್ನಲ್ಲಿದ್ದ ಉದ್ಯೋಗಿಗಳ ಶೇ.25 ಅಥವಾ 50 ಉದ್ಯೋಗಗಳನ್ನು ಈ ವರ್ಷ ಹೊಸದಾಗಿ ಒದಗಿಸಿದ್ದರೆ, ಅಂತಹ ಕಂಪನಿಗೆ ಈ ಉದ್ಯೋಗಿಗಳ ಮಾಸಿಕ ಸಂಬಳದ ಶೇ.72ರಷ್ಟನ್ನು 4 ವರ್ಷಗಳವರೆಗೆ ನೀಡಲಾಗುವುದು. ಸ್ಕೀಂ 3ಯಲ್ಲಿ 1 ಲಕ್ಷ ರೂ. ವೇತನದ ಮಿತಿಗೆ ಒಳಪಟ್ಟು ಯಾವುದೇ ವಲಯದಲ್ಲಿ ಹೆಚ್ಚುವರಿಯಾಗಿ ಉದ್ಯೋಗ ಸೃಷ್ಟಿಯಾದಲ್ಲಿ ಉದ್ಯೋಗದಾತರು ನೀಡಬೇಕಾದ ಇಪಿಎಫ್ ಕೊಡುಗೆಗೆ ಪ್ರತಿ ಉದ್ಯೋಗಿಗೆ ತಿಂಗಳಿಗೆ 3000 ರೂ.ನಂತೆ 3 ವರ್ಷದವರೆಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.


ಕೌಶಲಾಭಿವೃದ್ಧಿಗಾಗಿ 1000 ಕೈಗಾರಿಕಾ ತರಬೇತಿ ಸಂಸ್ಥೆ ಉನ್ನತೀಕರಿಸಿ, ಅವುಗಳಲ್ಲಿ ಆಧುನಿಕ ಕೈಗಾರಿಕೆಗಳಿಗೆ ಅಗತ್ಯವಾದ ವಿವಿಧ ಕೌಶಲ ಕಲಿಸಲಾಗುವುದು. ಅಲ್ಲದೇ, ದೇಶದ 500 ಅತ್ಯುನ್ನತ ಕಂಪನಿಗಳಲ್ಲಿ ಯುವಕರಿಗೆ ಮಾಹೆಯಾನ 5000 ರೂ. ಸ್ಟೈಪೆಂಡ್ ನೀಡಿ, ಕೆಲಸದ ತರಬೇತಿ ಕೊಡಿಸಲಾಗುವುದು ಎಂದು ತಿಳಿಸಿದರು.


ಇದಲ್ಲದೆ ಈ ಬಾರಿಯ ಬಜೆಟ್‌ನಲ್ಲಿ ದೇಶದ ಉದ್ಯೋಗ ಸೃಷ್ಟಿಯಲ್ಲಿ ಅಧಿಕ ಕೊಡುಗೆ ನೀಡುವ ಅತಿಸಣ್ಣ, ಸಣ್ಣ, ಮಧ್ಯಮ ಗಾತ್ರದ ಉದ್ಯಮ(ಎಂಎಸ್‌ಎಂಇ)ಗಳಿಗೆ ನೀಡುವ ಸಾಲದ ಮಿತಿ ಹೆಚ್ಚಿಸಲಾಗಿದೆ. ಅವುಗಳಿಗೆ ಮಾರುಕಟ್ಟೆ ಒದಗಿಸಲು ಇ-ಕಾಮರ್ಸ್ ಹಬ್ ಸ್ಥಾಪಿಸಲಾಗುವುದು.

ವಿವಿಧೆಡೆ ಸಣ್ಣ ಕೈಗಾರಿಕೆ ಅಭಿವೃದ್ಧಿ ಬ್ಯಾಂಕ್‌ನ 24 ಶಾಖೆ ತೆರೆದು, ಸಣ್ಣ ಕೈಗಾರಿಕಾ ಗುಂಪುಗಳಿಗೆ ನೆರವು ನೀಡಲಾಗುವುದು. ಈ ಕೈಗಾರಿಕೆಗಳ ಉತ್ಪನ್ನಗಳ ರಫ್ತನ್ನು ಹೆಚ್ಚಿಸಲು 2020ರಲ್ಲಿ ಕೇಂದ್ರ ಸರ್ಕಾರ ನೀಡಲಾರಂಭಿಸಿದ್ದ ಉತ್ಪಾದನೆ ಜತೆಗೂಡಿಸಿದ ಪ್ರೋತ್ಸಾಹ ಯೋಜನೆಯಡಿ ನೀಡಲು ಈ ಬಾರಿ 12,496 ಕೋಟಿ ರೂ. ನೀಡಲಾಗಿದೆ. ಹೀಗೆ ಈ ಬಾರಿಯ ಕೇಂದ್ರ ಬಜೆಟ್ ವಿಕಸಿತ ಭಾರತದತ್ತ ಇಟ್ಟ ಒಂದು ದಿಟ್ಟ ಹೆಜ್ಜೆಯಾಗಿದೆ ಎಂದು ಅಭಿಪ್ರಾಯಿಸಿದರು.


ಸ್ವಾವಲಂಬಿ ಭಾರತ ಅಭಿಯಾನದ ಕ್ಷೇತ್ರೀಯ ಸಂಯೋಜಕ ಎನ್. ಆರ್. ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net