ವಿನಾಯಕ ಸೊಸೈಟಿಗೆ ಉತ್ತಮ ಸೌಹಾರ್ದ ಸಹಕಾರಿ ಪುರಸ್ಕಾರ

27sdp1 BEST GOURAV
Published on

ಸಿದ್ದಾಪುರ: ಜಿಲ್ಲೆಯ ಪ್ರತಿಷ್ಠಿತ ಸೌಹಾರ್ದ ಸೊಸೈಟಿಯಾಗಿರುವ ಇಲ್ಲಿಯ ಶ್ರೀ ವಿನಾಯಕ ಸೌಹಾರ್ದ ಕ್ರೆಡಿಟ್ ಕೋ-ಆಪ್ ಸೊಸೈಟಿಗೆ ಬೆಂಗಳೂರಿನಲ್ಲಿ ಆ. 23ರಂದು ಜರುಗಿದ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ 23ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 2023-24ನೇ ಸಾಲಿನ ಉತ್ತಮ ಸೌಹಾರ್ದ ಸಹಕಾರಿ ಪುರಸ್ಕಾರ ನೀಡಿ ಗೌರವಿಸಿದೆ ಎಂದು ಸೊಸೈಟಿ ಅಧ್ಯಕ್ಷ ಆನಂದ ಈರಾ ನಾಯ್ಕ ಹೇಳಿದರು.

ಪಟ್ಟಣದ ಶ್ರೀ ವಿನಾಯಕ ಸೌಹಾರ್ದ ಕ್ರೆಡಿಟ್ ಕೋ-ಆಪ್ ಸೊಸೈಟಿ ಮುಖ್ಯಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಅವರು ಮಾತನಾಡಿದರು. 2004 ಅಕ್ಟೋಬರ್ 19ರಂದು 500 ಸದಸ್ಯರೊಂದಿಗೆ 5 ಲಕ್ಷ ರೂ. ಗಳೊಂದಿಗೆ ಪ್ರಾರಂಭಗೊಂಡ ಸೊಸೈಟಿ ಇಂದು 21,293 ಸದಸ್ಯರನ್ನು ಹೊಂದಿ 84 ಲಕ್ಷಕ್ಕೂ ಹೆಚ್ಚು ಶೇರು ಬಂಡವಾಳ ಹೊಂದಿದೆ. ಸಿದ್ದಾಪುರ, ಶಿರಸಿ, ಭಟ್ಕಳ, ಹೊನ್ನಾವರ, ಸಾಗರ ಮತ್ತು ಕುಮಟಾ ಸೇರಿ ಒಟ್ಟು 6 ಶಾಖೆಗಳನ್ನು ಹೊಂದಿದೆ. ಸಹಕಾರಿಯು 2023-24ನೇ ಸಾಲಿನಲ್ಲಿ 54.75 ಲಕ್ಷ ರೂ.ಗಳಷ್ಟು ನಿವ್ವಳ ಲಾಭ ಹೊಂದಿ ಸದಸ್ಯರಿಗೆ ಶೇ. 15ರಷ್ಟು ಡಿವಿಡೆಂಡ್ ವಿತರಿಸಿದೆ ಎಂದರು.

ಕೋವಿಡ್ ಸಂಕಷ್ಟದ ಸಮಯದಲ್ಲಿ ನಿಯಮಕ್ಕೊಳಪಟ್ಟು ಸಕಾಲಿಕ ಸೇವೆ, ವಿದ್ಯಾರ್ಥಿಗಳ ಶಿಕ್ಷಣ, ರೋಗಿಗಳ ಚಿಕಿತ್ಸೆ, ದೇವಾಲಯ, ಟ್ರಸ್ಟ್ ಸಮಾಜ ಸೇವೆಗಾಗಿ ಧನ ಸಹಾಯ ನೀಡಲಾಗಿದೆ. ಅಲ್ಲದೆ, ಕಳೆದ ಬೇಸಿಗೆಯಲ್ಲಿ ಅನಾವೃಷ್ಠಿಯಿಂದಾಗಿ ನೀರಿನ ಕೊರತೆ ಉಂಟಾದಾಗ ಪಟ್ಟಣದ ನಾಗರಿಕರಿಗೆ ಎರಡು ವಾರ ಉಚಿತವಾಗಿ ಕುಡಿಯುವ ನೀರಿನ ಪೂರೈಕೆ ಮಾಡಲಾಗಿದೆ. ಸ್ವಚ್ಛತಾ ಸಪ್ತಾಹ, ಸಹಕಾರಿ ದಿನಾಚರಣೆ, ಸಿದ್ದಾಪುರದ ಮುರುಘರಾಜೇಂದ್ರ ಅಂಧ ಮಕ್ಕಳ ಶಾಲೆಗೆ ವಿವಿಧ ರೀತಿಯಲ್ಲಿ ಸಹಕಾರ ಸೇರಿ ಅನೇಕ ಸಮಾಜಮುಖಿ ಕಾರ್ಯಕ್ರಮ ನಡೆಸುತ್ತಿದೆ. ಸೊಸೈಟಿ ಆರಂಭದಿಂದ ಇಂದಿನವರೆಗೂ ಸಾಧನೆಯ ಏರುಗತಿಯಲ್ಲಿಯೇ ಸಾಗಿರುವುದನ್ನು ಗುರುತಿಸಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಘವು ಉತ್ತಮ ಸೌಹಾರ್ದ ಸಹಕಾರಿ ಪುರಸ್ಕಾರ ನೀಡಿ ಗೌರವಿಸಿದೆ ಎಂದು ತಿಳಿಸಿದರು.

ವ್ಯವಸ್ಥಾಪಕ ನಿರ್ದೇಶಕ ವಿನಾಯಕ ಆನಂದ ನಾಯ್ಕ ಮಾತನಾಡಿ, ಸಂಸ್ಥೆಯ ಏಳಿಗೆಯಲ್ಲಿ ಅಧ್ಯಕ್ಷರ ಕೊಡುಗೆ ಅಪಾರ. ಅದರಂತೆ ಆಡಳಿತ ಆಡಳಿತ ಮಂಡಳಿಯ ಸಲಹೆ-ಸೂಚನೆ, ಪ್ರಧಾನ ವ್ಯವಸ್ಥಾಪಕ ಶ್ರೀಧರ ಎಂ. ಹೆಗಡೆ, ವಿಭಾಗೀಯ ವ್ಯವಸ್ಥಾಪಕ ಪ್ರಶಾಂತ ನಾಯ್ಕ ಹಾಗೂ ಸಿಬ್ಬಂದಿ ಪ್ರಾಮಾಣಿಕ ಸೇವೆಯಿಂದ ಇಂದು ಸೊಸೈಟಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಪ್ರಧಾನ ವ್ಯವಸ್ಥಾಪಕ ಶ್ರೀಧರ ಎಂ. ಹೆಗಡೆ ಸೊಸೈಟಿಯ ವ್ಯವಹಾರಗಳ ಕುರಿತು ಮಾಹಿತಿ ನೀಡಿದರು. ಉಪಾಧ್ಯಕ್ಷ ವಿ.ಬಿ. ಶೇಟ್, ನಿರ್ದೇಶಕರಾದ ಪರಮೇಶ್ವರ ನಾಯ್ಕ, ರಾಘವೇಂದ್ರ ಪೈ, ಪ್ರೇಮಾನಂದ ಕಾಮತ್, ಮಹಾಬಲೇಶ್ವರ ಕೆ. ನಾಯ್ಕ, ಹನುಮಂತಪ್ಪ ವಡ್ಡರ್ ಇತರರು ಉಪಸ್ಥಿತರಿದ್ದರು. ಶಾಖಾ ವ್ಯವಸ್ಥಾಪಕ ಪ್ರಶಾಂತ ವಿ. ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net