ಉತ್ತಮ ಆಹಾರ-ವಿಹಾರದಿಂದ ಸದೃಢ ಆರೋಗ್ಯ

sdm
ಧಾರವಾಡ ತಾಲೂಕಿನ ಯಾದವಾಡ ಗ್ರಾಮದೇವಿ ದೇವಸ್ಥಾನದ ಸಭಾ ಭವನದಲ್ಲಿ ಸತ್ತೂರಿನ ಎಸ್‌ಡಿಂ ವೈದ್ಯಕೀಯ ಮಹಾವಿದ್ಯಾಲಯ ಏರ್ಪಡಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಗಳಗಿ, ಪಿಡಿಒ ಆರ್.ಜಿ. ಚೆಲವಾದಿ ಉದ್ಘಾಟಿಸಿದರು. ನಾಗೇಶ ಅಜ್ಜವಾಡಿಮಠ, ಶ್ರುತಿ ವೈ., ಮಡಿವಾಳಪ್ಪ ದಿಂಡಲಕೊಪ್ಪ ಇತರರಿದ್ದರು.
Published on

ಉಪ್ಪಿನಬೆಟಗೇರಿ: ಮನುಷ್ಯನಿಗೆ ದೈಹಿಕ ಶಕ್ತಿಯ ಜತೆಗೆ ಮಾನಸಿಕ ಆರೋಗ್ಯದ ಶಕ್ತಿಯೂ ಅತೀ ಮುಖ್ಯವಾಗಿದೆ ಎಂದು ಧಾರವಾಡ ಮಾನಸಿಕ ಶುಶ್ರೂಷಾ ಆರೋಗ್ಯ ವಿಭಾಗದ ಉಪನ್ಯಾಸಕ ನಾಗೇಶ ಅಜ್ಜವಾಡಿಮಠ ಹೇಳಿದರು.

ಯಾದವಾಡ ಗ್ರಾಮದ ಶ್ರೀ ಗ್ರಾಮದೇವಿ ದೇವಸ್ಥಾನದ ಸಭಾ ಭವನದಲ್ಲಿ ಶುಕ್ರವಾರ ಸತ್ತೂರಿನ ಶ್ರೀ ಮಂಜುನಾಥೇಶ್ವರ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗ, ಮಾನಸಿಕ ಆರೋಗ್ಯ ಶುಶ್ರೂಷಾ ವಿಭಾಗ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದೊಂದಿಗೆ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ಅವರು ಉಪನ್ಯಾಸ ನೀಡಿದರು.

‘ಮನುಷ್ಯ ದೈಹಿಕ, ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ಒಳ್ಳೆಯ ಆಹಾರ, ನಿಯಮಿತ ಅಹಾರ ಸೇವನೆ, ವಾಯುವಿಹಾರ, ಜತೆಗೆ ಉದಾತ್ತ ವಿಚಾರ ಮಾಡಬೇಕು. ಅಂದಾಗ ಆತನ ಮನಸು ಶಾಂತವಾಗಿರುವುದರ ಜತೆಗೆ ಸಮಾಜವೂ ಸುಂದರವಾಗಿರುತ್ತದೆ’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ ಗಳಗಿ ಮಾತನಾಡಿ, ನಾಗರಿಕರು ದುಶ್ಚಟಗಳಿಗೆ ಆಸ್ಪದ ಕೊಡದೆ, ದೈಹಿಕವಾಗಿ ಸದೃಢರಾಗಲು ಪೌಷ್ಟಿಕಾಂಶಯುಕ್ತ ಅಹಾರ ಸೇವನೆ ಮಾಡಬೇಕು. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಧಾರ್ಮಿಕ ಚಿಂತನೆ ಹಾಗೂ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು.

ಪಿಡಿಒ ಆರ್.ಜಿ. ಚಲವಾದಿ, ಗ್ರಾಪಂ ಸದಸ್ಯ ಮಡಿವಾಳಪ್ಪ ದಿಂಡಲಕೊಪ್ಪ ಮಾತನಾಡಿದರು. ಎಸ್‌ಡಿಎಂ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮಾನಸಿಕ ಆರೋಗ್ಯದ ಕುರಿತು ಕಿರುನಾಟಕ ಪ್ರದರ್ಶಿಸಿದರು. ಉಪನ್ಯಾಸಕಿ ಶ್ರುತಿ ವೈ, ವೈದ್ಯರಾದ ತಿಲಕ ಜೋಶಿ, ಮಲ್ಲಿಕಾರ್ಜುನ ಪಿ, ಕಾರ್ಯದರ್ಶಿ ಶಿವಾನಂದ ಕುರಗುಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net