ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯಿಂದ ಉತ್ತಮ ಸೌಲಭ್ಯ ಲಭ್ಯ

29.2
ಹೊಳೆನರಸೀಪುರದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಯಲ್ಲಿ ಯೋಜನಾಧಿಕಾರಿ ಸೂರ್ಯನಾರಾಯಣ ಅವರು ನಿರಂತರ ಮಾಸಿಕ ಸಂಚಿಕೆಯನ್ನು ಸದಸ್ಯರಿಗೆ ವಿತರಿಸಿದರು. ಶಾಖಾ ವ್ಯವಸ್ಥಾಪಕಿ ಪುಷ್ಪಾ ಇತರರು ಇದ್ದರು.
Published on

ಹೊಳೆನರಸೀಪುರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಂಘದ ಸದಸ್ಯರಿಗೆ ಹಾಗೂ ಜನರಿಗೆ ಉತ್ತಮ ಸೇವೆ ಹಾಗೂ ಸೌಲಭ್ಯ ನೀಡಲಾಗುತ್ತಿದೆ ಎಂದು ತಾಲೂಕು ಯೋಜನಾಧಿಕಾರಿ ಸೂರ್ಯನಾರಾಯಣ ಹೇಳಿದರು.

ಪಟ್ಟಣದ ಯೋಜನಾ ಕಚೇರಿಯಲ್ಲಿ ಮಂಗಳವಾರ ಸದಸ್ಯರಿಗೆ ನಿರಂತರ ಮಾಸ ಪತ್ರಿಕೆ ವಿತರಿಸಿ ಮಾತನಾಡಿ, ತಾಲೂಕಿನಲ್ಲಿ 2450 ಸ್ವಸಹಾಯ ಸಂಘಗಳಿದ್ದು 19,720 ಸದಸ್ಯರಿದ್ದಾರೆ. 2023-24 ನೇ ಸಾಲಿನಲ್ಲಿ ಸದಸ್ಯರಿಗೆ 30 ಕೋಟಿ ರೂ. ಸಾಲ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

ನಮ್ಮ ಊರು ನಮ್ಮ ಕೆರೆ ಯೋಜನೆಯಡಿ 2022-23ನೇ ಸಾಲಿನಲ್ಲಿ ಹಿರಿತಳಾಲು, ಗೆಜ್ಜಿಗನಹಳ್ಳಿ ಕೆರೆಯನ್ನು ಅಭಿವೃದ್ಧಿಪಡಿಸಲಾಗಿದೆ. 2023-24ನೇ ಸಾಲಿನಲ್ಲಿ 10.24 ಎಕರೆ ವಿಸ್ತೀರ್ಣದ ಆಲಗೌಡನಹಳ್ಳಿ ಕೆರೆಯ ಸುಮಾರು 7 ಎಕರೆ ಪ್ರದೇಶದಲ್ಲಿ ಹೂಳು ತುಂಬಿದ್ದು 7.55 ಲಕ್ಷ ರೂ. ವೆಚ್ಚದಲ್ಲಿ ಹೂಳೆತ್ತಿಸಲಾಗಿದೆ. ಅಲ್ಲದೆ ಸ್ವಾಸ್ಥೃ ಸಂಕಲ್ಪ ಯೋಜನೆಯಡಿ ದುಶ್ಚಟ ಬಿಡಿಸುವ ಕಾರ್ಯಕ್ರಮ, ತಂಬಾಕು ಸೇರಿದಂತೆ ಮಾದಕ ವಸ್ತುಗಳ ಸೇವಿಸುವ ಚಟ ಬಿಡಿಸಲು ಮಾರ್ಗದರ್ಶನ ಕಾರ್ಯಕ್ರಮ, ಜ್ಞಾನ ದೀಪ ಯೋಜನೆಯಡಿ ಶಿಕ್ಷಕರ ಕೊರತೆ ಇರುವ 7 ಶಾಲೆಗಳಿಗೆ ಯೋಜನೆಯಿಂದ ಗೌರವ ಧನ ನೀಡಿ ಶಿಕ್ಷಕರನ್ನು ನೇಮಿಸಿದೆ. ಜನ ಮಂಗಳ ಯೋಜನೆಯಡಿ ಅಸಹಾಯಕರಿಗೆ ಹಾಸಿಗೆ, ದಿಂಬು, ಕೋಲುಗಳನ್ನು ನೀಡಿದೆ ಎಂದರು.

ಸುಜ್ಞಾನ ಶಿಷ್ಯ ವೇತದಡಿ ಯೋಜನೆಯ ಸದಸ್ಯರ 313 ಬಡ ಮಕ್ಕಳಿಗೆ ಪ್ರತಿ ತಿಂಗಳೂ 1 ಸಾವಿರ ರೂ.ಶಿಷ್ಯ ವೇತನ ನೀಡಲಾಗುತ್ತಿದೆ. ಸ್ಥಳೀಯ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಕ್ರಮ ಆಯೋಜಿಸಿ ಜನರಿಗೆ ಉಪಯಕ್ತ ಸೇವೆಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು. ಶಾಖಾ ವ್ಯವಸ್ಥಾಪಕಿ ಪುಷ್ಪಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net