ವಿಕಸಿತ ಭಾರತಕ್ಕಾಗಿ ಪ್ರತಿ ಮಗುವಿಗೆ ಉತ್ತಮ ಶಿಕ್ಷಣ

22 vikram 10
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಕನಸು ನನಸಾಗಿಸಲು ದೇಶದ ಪ್ರತಿ ಮಗುವಿಗೆ ಉತ್ತಮ ಶಿಕ್ಷಣ ನೀಡಲು ವಿವಿಧ ಯೋಜನೆ ರೂಪಿಸಲಾಗಿದೆ. ಅದರಂತೆ ಜಿಲ್ಲೆಯಲ್ಲಿ ಶಾಲಾ ಕೊಠಡಿಗಳನ್ನು ನಿರ್ಮಿಸುವುದರ ಜತೆಗೆ ಈಗಾಗಲೇ ಅನೇಕ ಶಾಲೆಗಳಿಗೆ ಸ್ಮಾರ್ಟ್​ ಬೋರ್ಡ್​ ಹಾಗೂ ಸ್ಮಾರ್ಟ್​ ಕ್ಲಾಸ್​ಗಳ ನೆರವು ನೀಡಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಎನ್​ಟಿಪಿಸಿ ಕಂಪನಿಯ ಸಿಎಸ್​ಆರ್​ ಚಟುವಟಿಕೆಯಲ್ಲಿ 54 ಲಕ್ಷ ರೂ. ವೆಚ್ಚದಲ್ಲಿ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ವಿವಿಧ ಕಂಪನಿಗಳ ಸಿಎಸ್​ಆರ್​ ಅಡಿ 150ಕ್ಕಿಂತ ಹೆಚ್ಚು ಶಾಲಾ ಕೊಠಡಿಗಳನ್ನು ನಿರ್ಮಿಸಿ ಶಾಲೆಗಳ ಅಭಿವೃದ್ಧಿ ಮಾಡಲಾಗಿದೆ. ಡೆಸ್ಕ್​ಗಳನ್ನು ವಿತರಿಸಲಾಗಿದೆ. ಬಸವರಾಜ ಬೊಮ್ಮಾಯಿ ಸರ್ಕಾರವಿದ್ದಾಗ ಎರಡು ಶಾಲಾ ಕೊಠಡಿಗಳನ್ನು 28 ಲಕ್ಷ ರೂ. ವೆಚ್ಚದಲ್ಲಿ ವಿವೇಕ ಯೋಜನೆ ಅಡಿ ಮಂಜೂರು ಮಾಡಿಸಲಾಗಿದೆ ಎಂದರು.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಜಿಲ್ಲೆಗೆ 50,000 ಡೆಸ್ಕ್​ಗಳ ಅಗತ್ಯವಿದೆ. ಈಗಾಗಲೇ 20,000 ಡೆಸ್ಕ್​ಗಳನ್ನು ಪೂರೈಸಿದ್ದೇನೆ. ಉಳಿದವುಗಳನ್ನು 3 ವರ್ಷಗಳಲ್ಲಿ ಪೂರೈಸುವ ಗುರಿ ಹೊಂದಿದ್ದೇನೆ. ಇದರೊಂದಿಗೆ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲದೆ, ಪದವಿ ಪೂರ್ವ ಬಾಲಕ, ಬಾಲಕಿಯರ ಕಾಲೇಜುಗಳಿಗೂ ಸ್ಮಾರ್ಟ್​ ಕ್ಲಾಸ್​ಗಳನ್ನು ಪೂರೈಸುವುದರ ಜತೆಗೆ ಅತ್ಯಾಧುನಿಕ ಗುಣಮಟ್ಟದ ಶೌಚಾಗೃಹ ನಿರ್ಮಿಸುವ ಗುರಿ ಇದೆ. 2025ರೊಳಗೆ ಈ ಎಲ್ಲ ಗುರಿ ತಲುಪಲು ಬೇಕಾದ ಯೋಜನೆ ರೂಪಿಸಲಾಗಿದೆ ಎಂದರು.

ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ, ನಿಂಗಪ್ಪ ಸುತಗಟ್ಟಿ, ಶಂಕರ ಕೊಮಾರ ದೇಸಾಯಿ, ಪ್ರಮುಖರಾದ ಭೀಮಣ್ಣ ರಾಮದುರ್ಗ, ಸಹದೇವ ಹಾವೇರಿ, ಗುರುನಾಥಗೌಡ, ಸವಿತಾ ಅಮರಶೆಟ್ಟಿ, ಬಸವರಾಜ ತಂಬಾಕದ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net