ಮಕ್ಕಳ ಭವಿಷ್ಯಕ್ಕೆ ಉತ್ತಮ ಶಿಕ್ಷಣ, ಸಂಸ್ಕಾರ ಅಗತ್ಯ

26 HRS 01
Published on

ಹಿರೀಸಾವೆ: ಹಣತೆ ಪ್ರಜ್ವಲದಿಂದ ಬೆಳಗಬೇಕೆಂದರೆ ಒಳ್ಳೆಯ ಎಣ್ಣೆ ಹಾಗೂ ಬತ್ತಿ ಎಷ್ಟು ಮುಖ್ಯವೋ, ಮಕ್ಕಳ ಉತ್ತಮ ಭವಿಷ್ಯಕ್ಕೆ ಮೌಲ್ಯಯುತ ಶಿಕ್ಷಣದ ಜತೆಗೆ ಸಂಸ್ಕಾರವೂ ಅಷ್ಟೇ ಅಗತ್ಯವಿದೆ ಎಂದು ಆದಿಚುಂಚನಗಿರಿ ಹಾಸನ ಶಾಖಾಮಠದ ಶ್ರೀ ಶಂಭುನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.


ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಕಬ್ಬಳಿ ಶ್ರೀಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ 92ನೇ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ಬಸವೇಶ್ವರಸ್ವಾಮಿ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ತಂದೆ-ತಾಯಿ ಹಾಗೂ ಗುರು-ಹಿರಿಯರಿಗೆ ಗೌರವ ತೋರದಿದ್ದಲ್ಲಿ ಕಲಿತ ವಿದ್ಯೆಯೂ ವ್ಯರ್ಥವಾಗಲಿದೆ. ಶಿಕ್ಷಣ ಕಲಿತರಷ್ಟೇ ಪ್ರಪಂಚಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯವಿಲ್ಲ. ಅಪಾರ ಜ್ಞಾನ ಸಂಪಾದನೆಯ ಜತೆಗೆ ಸಂಸ್ಕಾರ ಕಲಿಯುವುದು ಮುಖ್ಯವಾಗಲಿದೆ ಎಂದರು.
ಗರ್ಭದೊಳಗೆ ಇರುವಾಗಲೇ ತಾಯಿ ತನ್ನ ಮಗುವಿಗೆ ಜಗತ್ತಿನಲ್ಲಿ ಬದುಕಲು ಅಗತ್ಯವಿರುವಷ್ಟು ಜ್ಞಾನದ ಬೆಳಕನ್ನು ತುಂಬಿರುತ್ತಾಳೆ. ನಾವು ಅದನ್ನು ಸದ್ಬಳಕೆ ಮಾಡಿಕೊಂಡರೆ ಬದುಕಿಗೆ ದಾರಿದೀಪವಾಗಲಿದೆ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.


ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಜನ್ಮ ಪಡೆದು ಇಲ್ಲಿಗೆ ಬರುವ ಯಾರೊಬ್ಬರೂ ಈ ಭೂಮಿಯ ಮೇಲೆ ಶಾಶ್ವತವಾಗಿ ಉಳಿಯಲು ಸಾಧ್ಯವಿಲ್ಲ. ಆದರೂ ಹಣ, ಆಸ್ತಿ ಗಳಿಕೆಯ ಜತೆ ಮತ್ತೇನೋ ಪಡೆವ ಆಸೆ. ತಮ್ಮ ಸ್ವಾರ್ಥಕ್ಕಾಗಿ ಬೇರೇನೊ ಸೃಷ್ಟಿಸುವ ಹಂಬಲ. ಅಷ್ಟರಲ್ಲಿ ಸಮಯ ಸಮೀಪಿಸಿ ಯಾವುದೋ ಒಂದು ನೆಪದಲ್ಲಿ ಕಾಲದ ಮರೆಗೆ ಸರಿದು ಕಣ್ಮರೆಯಾಗುವುದೇ ಬದುಕಲ್ಲ. ಅಷ್ಟರಲ್ಲಿ ದೇವರು ಮೆಚ್ಚುವಂತಹ ಧರ್ಮ ಕಾರ್ಯಗಳನ್ನು ಕೈಗೊಂಡು ಬದುಕಿನಲ್ಲಿ ಮುಕ್ತಿ ಪಡೆಯಬೇಕು ಎಂದರು.


ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀಕ್ಷೇತ್ರ ಕಬ್ಬಳಿ ಶಾಖಾಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶಿವಲಿಂಗೇಗೌಡ, ಎನ್.ಆರ್.ರತ್ನರಾಜ್, ಮುಖ್ಯಶಿಕ್ಷಕ ಟಿ.ತಿಮ್ಮೇಗೌಡ, ಪ್ರಮುಖರಾದ ಇ.ಎಸ್.ಚಕ್ರವರ್ತಿ, ಎ.ಟಿ.ಶಿವರಾಮ್, ಧರ್ಮೇಂದ್ರ ಹಾಗೂ ಪಾಲಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net