ಸತ್ಕಾರ್ಯಗಳೇ ಮನುಷ್ಯನನ್ನು ರಕ್ಷಿಸುತ್ತವೆ

CTD 28 Homa mla
Published on

ಚಿತ್ರದುರ್ಗ: ಸತ್ಕಾರ್ಯ, ಪರೋಪಕಾರ ಗುಣಗಳು ಮನುಷ್ಯನನ್ನು ಸದಾ ರಕ್ಷಿಸುತ್ತವೆ. ಆದ್ದರಿಂದ ಬದುಕಿನುದ್ದಕ್ಕೂ ಧರ್ಮ ಮಾರ್ಗದಲ್ಲಿ ಸಾಗಬೇಕು ಎಂದು ಜಗಳೂರಿನ ಕಣ್ವಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಹೊಳಲ್ಕೆರೆ ರಸ್ತೆ ಹೌಸಿಂಗ್ ಬೋರ್ಡ್ ಕಾಲನಿಯ ಸಂಕಷ್ಟಹರ ಸಿದ್ಧಿ ವಿನಾಯಕಸ್ವಾಮಿ ದೇಗುಲ ಆವರಣದಲ್ಲಿ ಸೋಮವಾರ ನಡೆದ ಪಂಚಮುಖಿ ಆಂಜನೇಯಸ್ವಾಮಿ ಮೂರ್ತಿ ಪ್ರತಿಷ್ಠಾಪನಾ, ಕಳಶ ಸ್ಥಾಪನಾ ಮಹೋತ್ಸವದ ಧರ್ಮ ಸಭೆಯ ನೇತೃತ್ವವಹಿಸಿ ಅವರು ಮಾತನಾಡಿದರು.

ದೇವರು ಇದ್ದಾನೆ ಎಂಬ ಜಾಗೃತ ಮನಸ್ಸು ಅಧರ್ಮ, ಅನ್ಯಾಯ, ಅಕ್ರಮದಿಂದ ದೂರವಿರುವಂತೆ ಬಡಿದ್ದೆಬ್ಬಿಸುತ್ತದೆ. ಇದನ್ನು ಮೀರಿ ತಪ್ಪು ಮಾಡಿದ ದುಷ್ಟರು ಭಗವಂತನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇವರಡೂ ಸದಾ ನೆನಪಿನಲ್ಲಿರಬೇಕು. ಮಾಡಿದ ಉಪಕಾರವಾಗಲಿ, ಬೇರೆಯವರಿಂದಾದ ಅಪಕಾರವಾಗಲಿ ಮರೆಯುವುದೇ ಚತುರ್ವೇದದ ಸಾರವಾಗಿದೆ ಎಂದು ವಿವರಿಸಿದರು.

ಭಾರತ ವಿಶ್ವಕ್ಕೆ ಗುರುವಾಗಿ ಮೆರೆದ ದೇಶ. ಇಂತಹ ಭರತಖಂಡದಲ್ಲಿ ಜನಿಸಿದ ಪ್ರತಿಯೊಬ್ಬರೂ ಭಾಗ್ಯವಂತರು. ಇಲ್ಲಿನ ಅಧ್ಯಾತ್ಮಕ್ಕೆ ಭವ್ಯ ಪರಂಪರೆ ಇದೆ. ಸಂಸ್ಕೃತಿ, ಸಂಸ್ಕಾರ ನಮ್ಮನ್ನು ಸನ್ಮಾರ್ಗದಲ್ಲಿ ಮುನ್ನಡೆಸಲು ಸಹಕಾರಿಯಾಗಿವೆ. ಯಾರೇ ಪುಣ್ಯ ಕಾರ್ಯಗಳಲ್ಲಿ ತೊಡಗಲಿ ಅದು ಪರಮಾತ್ಮನ ಅಂತರಂಗದಲ್ಲಿ ಠೇವಣಿ ಇದ್ದಂತೆ. ಕಷ್ಟ ಕಾಲದಲ್ಲಿ ಖಂಡಿತ ಇದು ರಕ್ಷಣೆಗೆ ನಿಲ್ಲಲಿದೆ ಎಂದರು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಉದ್ಘಾಟಿಸಿ ಮಾತನಾಡಿ, ಭಾರತ 140 ಕೋಟಿ ಜನಸಂಖ್ಯೆ ಹೊಂದಿದೆ. ವಿವಿಧತೆಯಲ್ಲಿ ಏಕತೆಯೊಂದಿಗೆ ಶಾಂತಿ, ಸಹಬಾಳ್ವೆಯಿಂದ ಸಾಗುತ್ತಿದೆ ಎಂದರೆ ಅದಕ್ಕೆ ಧಾರ್ಮಿಕ ಕೇಂದ್ರಗಳು, ಸಂತರು, ಮಹನೀಯರು, ಧರ್ಮ ಗುರುಗಳ ಮಾರ್ಗದರ್ಶನ ಕಾರಣ ಎಂದು ಹೇಳಿದರು.

ಸಿದ್ಧಿವಿನಾಯಕ ಸ್ವಾಮಿ ದೇಗುಲ ಸದ್ಭಕ್ತರ ನಿಷ್ಕಲ್ಮಶ ಭಕ್ತಿ, ಸೇವೆಯಿಂದಾಗಿ ಸತತ ಎರಡು ದಶಕಗಳಿಂದಲೂ ಸಾಕಷ್ಟು ಅಭಿವದ್ಧಿ ಸಾಧಿಸುತ್ತ ಬಂದಿದೆ. ಇದೊಂದು ದೊಡ್ಡ ಧಾರ್ಮಿಕ ಕೇಂದ್ರವಾಗಬೇಕು. ಜತೆಗೆ ಕೋಟೆನಗರಿಯಲ್ಲೂ ಕಣ್ವಕುಪ್ಪೆ ಗವಿಮಠದ ಶಾಖಾ ಮಠವಾಗಬೇಕು ಎಂದು ಆಶಿಸಿದರು.

ನಗರಾಭಿವದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ.ಸುರೇಶ್, ಸದಸ್ಯೆ ಎ.ರೇಖಾ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಸದಸ್ಯರಾದ ಭಾಗ್ಯಮ್ಮ, ವೆಂಕಟೇಶ್, ಶ್ರೀನಿವಾಸ್, ಅನುರಾಧ, ಬೆನಕನ ಬಳಗದ ಅಧ್ಯಕ್ಷ ಗುರುಮೂರ್ತಿ, ಮಹಿಳಾ ಸಮಿತಿ ಅಧ್ಯಕ್ಷೆ ಪಾರ್ವತಮ್ಮ ಮಹದೇವಪ್ಪ ಇತರರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ನೂತನ ಆಂಜನೇಯಸ್ವಾಮಿ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿತು. ಪಂಚಾಮೃತ ಅಭಿಷೇಕ, ಗಣ, ಶ್ರೀರಾಮ ತಾರಕ ಹಾಗೂ ಜಯಾ ಹೋಮ ಪೂರ್ಣಾಹುತಿ ಸೇರಿ ವಿವಿಧ ಪೂಜಾ ಸೇವೆಗಳು ಜರುಗಿದವು. ನಂತರ ನೆರೆದಿದ್ದ ಭಕ್ತರಿಗೆ ಮಹಾಮಂಗಳಾರತಿ, ಪ್ರಸಾದ ವಿತರಿಸಲಾಯಿತು.

ಕೋಟ್ 

ಸಂಪತ್ತು, ಅಧಿಕಾರ, ಸುಖೀ ಜೀವನ ಲಭಿಸಿದೆ ಎಂದು ಹಿಗ್ಗದೇ, ಕಷ್ಟ, ದುಃಖ ಎದುರಾಗುತ್ತಲೇ ಇವೆ ಎಂದು ಕುಗ್ಗದೇ, ಎರಡನ್ನೂ ಸಮನಾಗಿ ಸ್ವೀಕರಿಸಿ ಭಗವಂತನ ಧ್ಯಾನದಲ್ಲಿ ಮುಳುಗುವವನೇ ನಿಜ ಭಕ್ತ.

ಶ್ರೀನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net