

ಕುರುಗೋಡು: ಬಯಲು ರೂಪ ಮಾಡುವಾತ ಅನುಭವಿ, ರೂಪ ಬಯಲು ಮಾಡುವಾತ ಲಿಂಗಾನುಭವಿ. ಕಲ್ಲು, ಮಣ್ಣಿನಿಂದ ಕಟ್ಟಿದರೆ ಮಠವಾಗದು. ಆತ್ಮಾನುಭಾವ ಸಂಧಾನವಾದಾಗ ಮಾತ್ರ ಮಠವಾಗುತ್ತದೆ ಎಂದು ಎಮ್ಮಿಗನೂರು ಹಂಪಿ ಸಾವಿರ ದೇವರ ಮಠದ ಶ್ರೀ ವಾಮದೇವ ಮಹಾಂತ ಶಿವಾಚಾರ್ಯರು ಹೇಳಿದರು.
ಎಮ್ಮಿಗನೂರು ಹಂಪಿ ಸಾವಿರ ದೇವರ ಮಠದಲ್ಲಿ ಆಯೋಜಿಸಿದ್ದ ಶ್ರೀ ವಾಮದೇವ ಮಹಾಂತ ಶಿವಾಚಾರ್ಯರ ಜನ್ಮದಿನೋತ್ಸವ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಶೌಚಕ್ಕೂ, ಆಚಮನಕ್ಕೂ ಬಳಸುವ ಜಲ ಒಂದೇ. ಆದರೆ, ಅವುಗಳ ಕಾರ್ಯ ಬೇರೆ. ಸಂಸ್ಕಾರ ಇದ್ದಲ್ಲಿ ಗೌರವ ತಾನಾಗಿಯೇ ದೊರೆಯುತ್ತದೆ ಎಂದರು.
ಅಡಂಬರ ಬಿಟ್ಟು ಉತ್ತಮ ನಡೆ, ನುಡಿಗಳಿಂದ ಶ್ರೇಷ್ಠತೆ ಪಡೆಯಬೇಕು. ಗಿಡದ ಹೂ, ಹಣ್ಣು, ಎಲೆಯಲ್ಲಿ ಜೀವ ಇಲ್ಲ. ಯಾರಿಗೂ ಕಾಣದ ಬೇರುಗಳಲ್ಲಿದೆ. ಹೀಗಾಗಿ ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ, ವಿಚಾರದಲ್ಲಿ ಉದಾಸೀನ, ಚಿತ್ತದಲ್ಲಿ ನಿರಾಪೇಕ್ಷೆ, ಭಾವದಲ್ಲಿ ದಿಗಂಬರ, ಜ್ಞಾನದಲ್ಲಿ ಪರಮಾನಂದ ನೆಲೆಯಾದರೆ ಹುಟ್ಟು ಸಾರ್ಥಕವಾತ್ತದೆ ಎಂದು ತಿಳಿಸಿದರು.
ಸಿಂಧನೂರಿನ ಸೋಮನಾಥ ಶಿವಾಚಾರ್ಯರು ಮಾತನಾಡಿ, ಗುರುವಿನ ಒಡನಾಟ ಮತ್ತು ಉಪದೇಶ ಪಾಲಿಸುವ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಬೇಕು ಎಂದು ಹೇಳಿದರು.
ಗೊರೇಬಾಳದ ಚನ್ನಪ್ಪ ತಾತ, ಎಚ್.ವೀರಾಪುರದ ಜಡೇಶ ತಾತ, ಪ್ರಮುಖರಾದ ಚಂದ್ರಶೇಖರ್ ಗೌಡ, ಮಸೀದಿಪುರದ ಸಿದ್ರಾಮನಗೌಡ, ಕೆ.ಎಂ.ಹೇಮಯ್ಯಸ್ವಾಮಿ, ಕುರೇಕುಪ್ಪ ಶರಣಪ್ಪ, ಬಾದನಹಟ್ಟಿ ತಿಮ್ಮಪ್ಪ, ಬಿ.ಸದಾಶಿವಪ್ಪ, ಶಿವನೇಗೌಡರ ರಾಮಪ್ಪ ಇತರರಿದ್ದರು.