

ಗುಬ್ಬಿ: ವಿದ್ಯಾರ್ಥಿಗಳು ಎರಡು ಗಂಟೆ ಆಸಕ್ತಿಯಿಂದ ವಿದ್ಯಾಭ್ಯಾಸ ಮಾಡಿದರೆ ಭವಿಷ್ಯದಲ್ಲಿ ಅವರ ಜೀವನದ ಓಟವನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಜಿ.ಪ್ರಭು ತಿಳಿಸಿದರು.
ತಾಲೂಕಿನ ನಿಟ್ಟೂರು ಹೋಬಳಿಯ ಬಾಗೂರು ಗೇಟ್ನಲ್ಲಿರುವ ಎಸ್ಜಿಎಸ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ನಲ್ಲಿ ಹಮ್ಮಿಕೊಂಡಿದ್ದ ನಿಟ್ಟೂರು ಹೋಬಳಿ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಓದುವ ಸಂದರ್ಭದಲ್ಲಿ ಚೆನ್ನಾಗಿ ಕಲಿತಲ್ಲಿ ಅವರ ಬದುಕೇ ಬದಲಾಗುತ್ತದೆ. ಆಟ ಆಡುವಾಗ ಗೆಲುವು ಪಡೆಯಬೇಕು ಎಂದು ಆಟವಾಡಿದರೆ ಖಂಡಿತ ಯಶಸ್ಸು ಲಭಿಸುತ್ತದೆ. ಯುವಕರು ಈ ದೇಶದ ಆಸ್ತಿ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ಸರಾಸರಿ ಯುವಕರ ವಯಸ್ಸು 27 ಎಂದು ಗುರುತಿಸಿದ್ದು, ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಈ ದೇಶದಲ್ಲಿದ್ದಾರೆ. ಯುವಕರಿಗೆ ದೊಡ್ಡಮಟ್ಟದ ಅವಕಾಶಗಳು ಭಾರತದಲಿದ್ದು, ಅದನ್ನು ಸದುಪಯೋಗಿಸಿ ಎಂದರು.
ಬೆಟ್ಟದಹಳ್ಳಿಯ ಶ್ರೀ ಚಂದ್ರಶೇಖರಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ದೈಹಿಕ ಮತ್ತು ಮಾನಸಿಕ ಇವೆರಡು ಕೂಡ ಬಹಳ ಮುಖ್ಯವಾಗಿದ್ದು, ವಿದ್ಯಾರ್ಥಿ ಜೀವನದಲ್ಲಿ ಈ ಎರಡನ್ನು ಸರಿಯಾಗಿ ಬಳಸಿಕೊಂಡರೆ ಅವರ ಇಡೀ ಬದುಕಿನಲ್ಲಿ ಯಶಸ್ಸು ಸಿಗುತ್ತದೆ. ಪ್ರತಿಯೊಬ್ಬರೂ ಕೂಡ ಈ ದೇಶದ ಸಂಸತಿ, ಸಂಸ್ಕಾರ, ಸಂಪ್ರದಾಯಗಳನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜು ಮಾತನಾಡಿ, ಕಳೆದ ವರ್ಷದಲ್ಲಿ ನಮ್ಮ ತಾಲೂಕಿನ ಕ್ರೀಡಾಪಟುಗಳು ರಾಜ್ಯಮಟ್ಟದಲ್ಲಿ ಹಾಗೂ ಪ್ರಾದೇಶಿಕ ಮಟ್ಟದಲ್ಲಿ ಗೆಲ್ಲುವ ಮೂಲಕ ತಾಲೂಕಿಗೆ ಉತ್ತಮ ಹೆಸರು ತಂದಿದ್ದರು. ಅದೇ ರೀತಿಯಲ್ಲಿ ಶೈಕ್ಷಣಿಕವಾಗಿ ಕೂಡ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 600ಕ್ಕೂ ಹೆಚ್ಚು ಅಂಕವನ್ನು ಗಳಿಸಿದ ಸಂಖ್ಯೆಯೇ ಅತಿ ದೊಡ್ಡದಿದೆ ಎಂದು ತಿಳಿಸಿದರು.
ಶಾಲೆಯ ಆಡಳಿತ ಅಧಿಕಾರಿ ಸುರೇಶ್, ಮಠದ ಕಾರ್ಯದರ್ಶಿ ನಿರಂಜನಮೂರ್ತಿ, ಟಿಪಿಒ ರಮೇಶ್, ನಿಟ್ಟೂರು ಗ್ರಾಪಂ ಅಧ್ಯಕ್ಷ ಮಂಗಳಾಗೌರಮ್ಮ, ಸದಸ್ಯರಾದ ನಳಿನಾಕ್ಷಿ, ಮಲ್ಲಿಕಾರ್ಜುನಸ್ವಾಮಿ ಸೇರಿ ತಾಲೂಕಿನ ಎಲ್ಲ ದೈಹಿಕ ಶಿಕ್ಷಕರು, ಮುಖ್ಯ ಶಿಕ್ಷಕರು, ಕ್ರೀಡಾಪಟುಗಳು ಇದ್ದರು.