ವಿದ್ಯುತ್ ಚಿತಾಗಾರ ಸೌಕರ್ಯ ಕಲ್ಪಿಸಿ

24 gkp 01
Published on

ಸಣ್ಣುವಂಡ ಕಿಶೋರ್ ನಾಚಪ್ಪ ಗೋಣಿಕೊಪ್ಪ

ಗೋಣಿಕೊಪ್ಪ ಹಿಂದೂ ರುದ್ರಭೂಮಿಯಲ್ಲಿ ವಿದ್ಯುತ್ ಚಿತಾಗಾರ ಸೌಕರ್ಯ ಕಲ್ಪಿಸಲು ಯೋಜನೆ ರೂಪಿಸುವಂತಾಗಲಿ ಎಂದು ಸಮಾಜ ಸೇವಕರು ಒತ್ತಾಯಿಸಿದರು.

ಗೋಣಿಕೊಪ್ಪ ಸಿಲ್ವರ್ ಸ್ಕೈ ಹೋಟೆಲ್ ಸಭಾಂಗಣದಲ್ಲಿ ಕನ್ನಡದ ನಂಬರ್ ೧ ದಿನಪತ್ರಿಕೆ ವಿಜಯವಾಣಿ ಆಯೋಜಿಸಿದ್ದ ಸಂವಾದದಲ್ಲಿ ಈ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಿದರು.

ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ಬಹುತೇಕ ಗ್ರಾಮಸ್ಥರು ಈ ಸ್ಮಶಾನವನ್ನು ಅವಲಂಬಿಸಿದ್ದಾರೆ. ಪ್ರಸ್ತುತ ಸೌದೆಯಿಂದ ಶವ ಸುಡುವ ಕಾರ್ಯ ನಡೆಯುತ್ತಿರುವುದರಿಂದ ಸಮಯ, ಕಾರ್ಮಿಕರ ಕೊರತೆ, ಸೌದೆ ಸಂಪನ್ಮೂಲಗಳ ಅಭಾವ ಕಾಡುತ್ತಿದೆ. ವಿದ್ಯುತ್ ಚಾಲಿತ ಚಿತಾಗಾರ ಅವಶ್ಯ. ಇದಕ್ಕಾಗಿ ರುದ್ರಭೂಮಿ ನಿರ್ವಹಣಾ ಸಮಿತಿ ರಚಿಸಿಕೊಂಡು ಅಭಿವೃದ್ಧಿ ಹಾಗೂ ಜನ ಸೇವೆಗೆ ತೊಡಗಿಕೊಳ್ಳಲು ಯೋಜನೆ ರೂಪಿಸಬೇಕು ಎಂಬು ಅಭಿಪ್ರಾಯ ವ್ಯಕ್ತವಾಯಿತು.

ರುದ್ರಭೂಮಿ ಸುತ್ತಲೂ ಹೆಚ್ಚು ಜನವಸತಿ ಪ್ರದೇಶವಾಗುತ್ತಿರುವುದರಿಂದ ಶವ ಸುಡುವುದು ಕೂಡ ಮಾಲಿನ್ಯಕ್ಕೆ ಕಾರಣವಾಗಬಹುದು. ಒಂದೇ ದಿನ ೩-೪ ಶವ ಅಂತ್ಯಕ್ರಿಯೆ ನಡೆಸುವ ಅನಿವಾರ್ಯ ಸಂದರ್ಭ ಅಂತ್ಯ ಸಂಸ್ಕಾರದಲ್ಲಿ ಲೋಪವಾಗದಂತೆ ಎಚ್ಚರ ವಹಿಸಲು ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಿದೆ ಎಂದು ಹೇಳಿದರು. ಪ್ರಸ್ತುತ ಸೌದೆ ಕೂಡ ದುಬಾರಿಯಾಗುತ್ತಿರುವುದರಿಂದ ವಿದ್ಯುತ್ ಅವಲಂಬನೆ ಸೂಕ್ತ. ಗ್ಯಾಸ್ ಚಾಲಿತ ಯಂತ್ರ ಶಾಶ್ವತ ಪರಿಹಾರ ನೀಡುವುದಿಲ್ಲ ಎಂದು ತಿಳಿಸಿದರು.

ಸಾಮಾಜಿಕ ಕಾರ್ಯಕರ್ತ ಪಿ. ಎಸ್. ಶರತ್‌ಕಾಂತ್ ಮಾತನಾಡಿ, ಕರೊನಾ ಸಂದರ್ಭ ಒಂದೇ ಕುಟುಂಬದ ಇಬ್ಬರನ್ನೂ ಒಂದೇ ಸಮಯದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಶವ ಮುಟ್ಟಲು ಹಿಂದೇಟು ಹಾಕುತ್ತಿದ್ದ ಸಮಯದಲ್ಲಿ ಒಟ್ಟಿಗೆ ಅಂತ್ಯಕ್ರಿಯೆ ನಡೆಸು ವುದು ಕೂಡ ಕಷ್ಟದ ಕಾರ್ಯ. ಸೇವೆ ಮುಖ್ಯವಾಗಿತ್ತು. ಆದರೆ, ಅಂತಹ ಘಟನೆ ಮುಂದೆ ನಡೆಯದಂತೆ ಎಚ್ಚರ ವಹಿಸಬೇಕಿದೆ ಎಂದರು.

ಸಾಮಾಜಿಕ ಕಾರ್ಯಕರ್ತ ಕಳ್ಳಿಕಂಡ ನವಿನ್ ಪೊನ್ನಪ್ಪ ಮಾತನಾಡಿ, ರುದ್ರಭೂಮಿ ಅವಲಂಬಿಸುತ್ತಿರುವ ಗ್ರಾಮ ಪಂಚಾಯಿತಿಗಳ ಮೂಲಕ ಅನುದಾನ ಪಡೆದುಕೊಂಡು ಯೋಜನೆ ರೂಪಿಸಬಹುದಾಗಿದೆ. ಕೆಲಸ, ದುಡಿಮೆಯಲ್ಲಿ ತೊಡಗಿಕೊಳ್ಳುತ್ತಿರುವ ಯುವಕರು ಇತ್ತೀಚಿನ ದಿನಗಳಲ್ಲಿ ಶವ ಸಂಸ್ಕಾರದಲ್ಲಿ ಭಾಗಿಯಾಗಲು ಹಿಂದೇಟು ಹಾಕುತ್ತಿರುವುದು ಕಾಣಬಹುದಾಗಿದೆ. ಆದ್ದರಿಂದ ಕಡಿಮೆ ಜನರು ಅಂತ್ಯಕ್ರಿಯೆ ನಡೆಸುವಂತಾಗಬೇಕೆಂದರು.

ಅಭಿವೃದ್ದಿ, ಜನಸೇವೆ ದೃಷ್ಠಿಯಿಂದ ಎಲ್ಲರೂ ಒಂದಾಗಿ ತೊಡಗಿಕೊಳ್ಳಬೇಕಿದೆ ಎಂದು ವರ್ತಕ ವಿ. ಸುಬ್ರಮಣಿ ಹೇಳಿದರು. ಕೋವಿಡ್ ಸಾಕಷ್ಟು ಪಾಠ ಕಲಿಸಿದೆ. ಅಂತ್ಯ ಸಂಸ್ಕಾರ ನಡೆಸಲು ಸಾಮಾಜಿಕ ಕಾರ್ಯಕರ್ತರು ತೊಡಗಿಕೊಂಡ ಕಾರಣ ಕುಟುಂಬದ ಸದಸ್ಯರುಗಳು ನಿಟ್ಟುಸಿರು ಬಿಡುವಂತಾಗಿತ್ತು. ಮತ್ತಷ್ಟು ಅಭಿವೃದ್ಧಿ ಪಡಿಸುವುದು ಅನಿವಾರ್ಯವಾಗಿದೆ ಎಂದು ಸಮಾಜ ಸೇವಕ ಬಿ.ಎ. ಸುರೇಶ್ ರೈ ಹೇಳಿದರು.

**
ಒಮ್ಮೊಮ್ಮೆ ಒಂದೊಂದು ಪರಿಸ್ಥಿತಿಯಿಂದ ನೋವು ತರುತ್ತದೆ. ಹೆಣ ಸುಡಲು ಸೌದೆಗೆ ಬೇಕಾದ ಹಣ ನೀಡಲು ಕೂಡ ಸಾವು ಸಂಭವಿಸಿದ ಕುಟುಂಬಕ್ಕೆ ಆಗುವುದಿಲ್ಲ. ಆ ಕ್ಷಣದಲ್ಲಿ ಬೇರೆಯವರ ಸಹಾಯ ಪಡೆಯುತ್ತಾರೆ. ಇದರಿಂದಾಗಿ ಹೆಚ್ಚು ಖರ್ಚು ಆಗದಂತೆ ನೋಡಿಕೊಳ್ಳಲು ವಿದ್ಯುತ್ ಚಿತಾಗಾರ ಅವಶ್ಯ. ಪಿ.ಎಸ್. ಶರತ್‌ಕಾಂತ್, ಸಾಮಾಜಿಕ ಕಾರ್ಯಕರ್ತ, ಗೋಣಿಕೊಪ್ಪ.

**
ಮಳೆಗಾಲದಲ್ಲಿ ಹೆಣ ಸುಡಲು ಸೌದೆ ಸಿಗುವುದಿಲ್ಲ. ಇದು ಕೂಡ ದೊಡ್ಡ ಸಮಸ್ಯೆ. ಇದರಿಂದಾಗಿ ವಿದ್ಯುತ್ ಚಾಲಿತ ಯಂತ್ರಗಳ ಅವಲಂಬನೆ ಒಳ್ಳೆಯದು. ಜನರು ಕೈಜೋಡಿಸಿದರೆ ವಿದ್ಯುತ್ ಸಂಪರ್ಕ ಪಡೆದುಕೊಂಡು ಮುಂದುವರಿಯಲು ಅವಕಾಶವಿದೆ. ವಿ. ಸುಬ್ರಮಣಿ, ವರ್ತಕ, ಗೋಣಿಕೊಪ್ಪ.

**
ಗೋಣಿಕೊಪ್ಪ, ಅರ‌್ವತೊಕ್ಲು, ಹಾತೂರು, ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳು ಹೆಚ್ಚಾಗಿ ಹಿಂದು ರುದ್ರಭೂಮಿ ಯಲ್ಲಿ ಶವ ಅಂತ್ಯ ಸಂಸ್ಕಾರ ನಡೆಸಲು ಅವಲಂಬಿಸಿದ್ದಾರೆ. ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿರುವುದರಿಂದ ಸುಲಭವಾಗಿ ಸಾರ್ವಜನಿಕರಿಗೆ ಪ್ರಯೋಜನವಾಗುವಂತ ಯೋಜನೆ ಅವಶ್ಯ. ವಿದ್ಯುತ್ ಚಿತಾಗಾರ ಅವಶ್ಯ. ಕಳ್ಳಿಕಂಡ ನವೀನ್ ಪೊನ್ನಪ್ಪ, ಸಾಮಾಜಿಕ ಕಾರ್ಯಕರ್ತ, ಅರ‌್ವತೊಕ್ಲು.

**
ಶವ ಸುಡಲು ಸದ್ಯದ ಪರಿಸ್ಥಿತಿಯಲ್ಲಿ ಸೌದೆ ಅಭಾವ ಕಾಡುತ್ತಿಲ್ಲ. ಶವ ಸಂಸ್ಕಾರ ಸಂದರ್ಭ ನಿರ್ವಹಣೆ ಮಾಡಲು ಯುವ ಜನತೆ ತೊಡಗಿಕೊಳ್ಳುತ್ತಿರುವುದು ಕಡಿಮೆಯಾಗುತ್ತಿದೆ. ಸೌದೆ ಸಂಪನ್ಮೂಲ ಕೊರತೆ ಕಾಡುವ ಮುನ್ನ ಚಿತಾಗಾರವನ್ನು ವಿದ್ಯುತ್ ಚಾಲಿತವಾಗಿ ಪರಿವರ್ತಿಸಿಕೊಳ್ಳುವುದರಿಂದ ಭವಿಷ್ಯದಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಬಹುದು. ಬಿ.ಎ. ಸುರೇಶ್ ರೈ, ಸಮಾಜ ಸೇವಕರು, ಗೋಣಿಕೊಪ್ಪ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net