

ಸಣ್ಣುವಂಡ ಕಿಶೋರ್ ನಾಚಪ್ಪ ಗೋಣಿಕೊಪ್ಪ
ಗೋಣಿಕೊಪ್ಪ ಪಟ್ಟಣದಲ್ಲಿ ಪಾದಚಾರಿಗಳು ರಸ್ತೆ ದಾಟಲು ವಿಶೇಷ ನಿಯಮ ರೂಪಿಸಬೇಕೆಂದು ಸ್ಥಳೀಯರು ಒತ್ತಾಯಿಸಿದರು. ಮಂಗಳವಾರ ಸಿಲ್ವರ್ ಸ್ಕೈ ಹೋಟೆಲ್ ಸಭಾಂಗಣದಲ್ಲಿ ಕನ್ನಡದ ನಂಬರ್ ೧ ದಿನಪತ್ರಿಕೆ ವಿಜಯವಾಣಿ ಆಯೋಜಿಸಿದ್ದ ಸಂವಾದದ ಪಾದಚಾರಿಗಳ ಸಂಕಷ್ಟ ಅನಾವರಣಗೊಂಡಿತು.
ಪಟ್ಟಣದಲ್ಲಿ ದ್ವಿಮುಖ ಸಂಚಾರ ಅವಕಾಶ ಮಾಡಿರುವುದು ಸ್ವಾಗತರ್ಹ. ರಸ್ತೆ ಎರಡು ಕಡೆಗಳಿಂದ ವಾಹನಗಳು ಸಂಚರಿಸುವಾಗ ರಸ್ತೆ ದಾಟಲು ವಿದ್ಯಾರ್ಥಿಗಳು, ಹಿರಿಯ ನಾಗರಿಕರು ತೊಂದರೆ ಪಡುತ್ತಿದ್ದಾರೆ. ವಾಹನ ಚಾಲಕರು ಪಾದಚಾರಿಗಳ ಬಗ್ಗೆ ಕಾಳಜಿ ತೋರುತ್ತಿಲ್ಲ. ಪೊಲೀಸ್ ಇಲಾಖೆ ಈ ಬಗ್ಗೆ ವಿಶೇಷ ನಿಯಮ ರೂಪಿಸಬೇಕು. ಸ್ಥಳೀಯ ಗ್ರಾಮ ಪಂಚಾಯಿತಿ ಕೂಡ ಇಲಾಖೆ ಲಿಖಿತ ಪತ್ರದ ಮೂಲಕ ಗಮನ ಸೆಳೆಯಬೇಕೆಂದು ಒತ್ತಾಯಿಸಿದರು.
ಗೋಣಿಕೊಪ್ಪ ಬಸ್ ನಿಲ್ದಾಣ, ಉಮಾಮಹೇಶ್ವರಿ ದೇವಸ್ಥಾನ ಸಮೀಪದ ಬೈಪಾಸ್ ರಸ್ತೆ ತಿರುವು, ಪೊನ್ನಂಪೇಟೆ ರಸ್ತೆ ಜಂಕ್ಷನ್ ಸೇರಿ ದಂತೆ ಪ್ರಮುಖ ಐದಾರು ಕಡೆ ಪಾದಚಾರಿಗಳು ರಸ್ತೆ ದಾಟಲು ವಿಶೇಷ ನಿಯಮ ರೂಪಿಸಬೇಕಿದೆ. ಏಕಮುಖ ಸಂಚಾರ ನಿಯಮ ಇದ್ದಾಗ, ಒಂದು ಕಡೆ ಮಾತ್ರ ವಾಹನ ಸಂಚರಿಸುತ್ತಿತ್ತು. ಎರಡು ಕಡೆಗಳಿಂದ ಏಕಾಏಕಿ ವಾಹನ ಸಂಚಾರ ಹಿರಿಯರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು.
ಸ್ಥಳೀಯ ವೈದ್ಯರು ರಸ್ತೆ ದಾಟಲು ಸಮಸ್ಯೆ ಅನುಭವಿಸುತ್ತಿದ್ದಾರೆ. ಆಸ್ಪತ್ರೆ, ಬ್ಯಾಂಕ್‌ಗೆ ಬರುವ ಹಿರಿಯರು ವಾಹನ ನಿಲುಗ ೆಮಾಡಿ ಮತ್ತೊಂದು ಬದಿಗೆ ತೆರಳಲು ಕಾಯುವ ಪರಿಸ್ಥಿತಿ ಇದೆ. ಅಂತರಾಜ್ಯ ಹೆದ್ದಾರಿ ಆಗಿರುವುದರಿಂದ ಕೇರಳ ರಾಜ್ಯದಲ್ಲಿರುವ ವಿಮಾನ ನಿಲ್ದಾಣಕ್ಕೆ ಇದೇ ಮಾರ್ಗದಲ್ಲಿ ವಾಹನ ಸಂಚರಿಸುತ್ತದೆ.
ಏಕಮುಖ ಸಂಚಾರ ನಿಯಮ ಇದ್ದಾಗ ಉಮಾಮಹೇಶ್ವರಿ ದೇವಸ್ಥಾನದ ಸಮೀಪದ ಬೈಪಾಸ್ ರಸ್ತೆಯ ತಿರುವಿನಲ್ಲಿ ಪೊಲೀಸರನ್ನು ನಿಯೋಜಿಸಲಾಗುತ್ತಿತ್ತು. ಪೊಲೀಸರು ವಿದ್ಯಾರ್ಥಿಗಳನ್ನು ರಸ್ತೆ ದಾಟಿಸುವ ಮಹತ್ಕಾರ್ಯ ಮಾಡುತ್ತಿದ್ದರು. ಈಗ ದ್ವಿಮುಖ ಸಂಚಾರ ಇರುವುದರಿಂದ ಪೊಲೀಸ್ ಸಿಬ್ಬಂದಿ ನಿಯೋಜಿಸುತ್ತಿಲ್ಲ. ಇದು ಅಪಾಯಕ್ಕೆ ಕಾರಣವಾಗಬಾರದೆಂದು ವರ್ತಕ ಕಳ್ಳಿಕಂಡ ಬಬ್ಬು ಪೊನ್ನಪ್ಪ ಹೇಳಿದರು.
ಪಟ್ಟಣದ ಮುಖ್ಯರಸ್ತೆ ಬದಿಯ ಚರಂಡಿಗೆ ಸ್ಲ್ಯಾಬ್ ನಿರ್ಮಿಸಿ ಪಾದಚಾರಿಗಳಿಗೆ ನಡೆದಾಡಲು ಅವಕಾಶ ಮಾಡಿಕೊಡಲಾಗುವುದು. ಸೂಚನ ಫಲಕ ಹಾಕಲು ಯೋಜನೆ ರೂಪಿಸಲಾಗುವುದು. ವಾಹನಗಳಲ್ಲಿ ಅಗತ್ಯವಸ್ತು ಮಾರಾಟ ನಿಯಂತ್ರಿಸಬೇಕು. ವಾಹನ ದಟ್ಟಣೆಗೆ ಅವಕಾಶ ಮಾಡಿಕೊಡಬಾರದು. ಪೊನ್ನಂಪೇಟೆ ರಸ್ತೆ ಬದಿ ವಾಹನ ನಿಲ್ಲಿಸಿಕೊಂಡು ಮಾರಾಟ ಮಾಡುತ್ತಿದ್ದ ವಾಹನಗಳನ್ನು ತೆರವುಗೊಳಿಸಲಾಗಿದೆ ಎಂದು ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನ್ನಕಮನೆ ಸೌಮ್ಯ ಬಾಲು ತಿಳಿಸಿದರು.
ಸಾಮಾಜಿಕ ಕಾರ್ಯಕರ್ತ ಎಂ.ಎಸ್. ಸುಬ್ರಮಣಿ ಮಾತನಾಡಿ, ಪಾದಚಾರಿಗಳ ಸಮಸ್ಯೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ವಾಹನ ಚಾಲಕರು ಪಾದಚಾರಿಗಳು ರಸ್ತೆ ದಾಟಲು ಅವಕಾಶ ನೀಡುತ್ತಿಲ್ಲ. ಪಾದಚಾರಿಗಳನ್ನು ಬೈಯುವವರು ಕೂಡ ಇದ್ದಾರೆ. ಆಟೋ ಚಾಲಕರು ಸುಮ್ಮನೆ ಪಟ್ಟಣದಲ್ಲಿ ಸುತ್ತಾಡುವುದು ಹೆಚ್ಚಾಗುತ್ತಿದೆ. ಸೋಲಾರ್ ದೀಪ ಇರುವ ಸೂಚನಾ ಫಲಕ, ಧ್ವನಿವರ್ಧಕ ಮೂಲಕ ಸಾರ್ವಜನಿಕರು, ಸವಾರರು, ಚಾಲಕರಿಗೆ ಅರಿವು ಮೂಡಿಸಬೇಕು. ಪೊಲೀಸರು ಕೂಡ ಪ್ರಯೋಗಕ್ಕೆ ಮುಂದಾಗಬೇಕು. ನಿಗದಿತ ಸಮಯದಲ್ಲಿ ರಸ್ತೆ ದಾಟಲು ಅವಕಾಶ ನೀಡಬೇಕೆಂದರು. ಪಾಲಿಬೆಟ್ಟ ರಸ್ತೆ ಬದಿ ಗುಜರಿ ವ್ಯಾಪಾರಿ ವಸ್ತುಗಳನ್ನು ಸುರಿದಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ರೋಗ ಹರಡಲು ಕಾರಣವಾಗುತ್ತಿದೆ ಎಂದರು.
**
ಉಮಾಮಹೇಶ್ವರಿ ದೇವಸ್ಥಾನ ಸಮೀಪದ ಬೈಪಾಸ್ ರಸ್ತೆ ತಿರುವಿನಲ್ಲಿ ೪ ಕಡೆಗಳಿಂದ ವಾಹನಗಳು ಬಂದು ಸೇರುವುದರಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ರಸ್ತೆ ದಾಟಲು ಕಷ್ಟ ಪಡುತ್ತಿದ್ದಾರೆ. ಏಕಮುಖ ಸಂಚಾರ ಇದ್ದಾಗ ಪೊಲೀಸರು ಮಕ್ಕಳನ್ನು ರಸ್ತೆ ದಾಟಿಸುತ್ತಿದ್ದರು. ಪೊಲೀಸರ ಸೇವೆ ಮಕ್ಕಳಿಗೆ ದೊರೆಯುವಂತೆ ಆಗಲಿ. ಕಳ್ಳಿಕಂಡ ಬಬ್ಬು ಪೊನ್ನಪ್ಪ, ವ್ಯಾಪಾರಿ, ಗೋಣಿಕೊಪ್ಪ.
**
ಗೋಣಿಕೊಪ್ಪದಲ್ಲಿ ಪಾದಚಾರಿಗಳು ರಸ್ತೆ ದಾಟಲು ಪಡುತ್ತಿರುವ ಸಮಸ್ಯೆ ವಿಜಯವಾಣಿ ಸಂವಾದದಿಂದ ಅರಿವಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ಚರ್ಚಿಸಿ ಪೊಲೀಸ್ ಇಲಾಖೆ ಸಹಕಾರದಲ್ಲಿ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮನ್ನಕಮನೆ ಸೌಮ್ಯ ಬಾಲು, ಅಧ್ಯಕ್ಷೆ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ.
**
ಪ್ರತಿನಿತ್ಯ ಬೆಳಗ್ಗೆ ೧೦ ಗಂಟೆ ಮತ್ತು ಸಂಜೆ ೪ ಗಂಟೆಗೆ ಹೆಚ್ಚು ತೊಂದರೆಯಾಗುತ್ತಿದೆ. ಈ ಸಮಯದಲ್ಲಿ ಪೊಲೀಸ್ ಇಲಾಖೆ ಹೆಚ್ಚು ಜಾಗೃತರಾಗಬೇಕಿದೆ. ಬಸ್ ನಿಲ್ದಾಣ, ಮುಖ್ಯ ಜಂಕ್ಷನ್‌ಗಳಲ್ಲಿ ಜನರಿಗೆ ಓಡಾಡಲು ಅವಕಾಶ ಮಾಡಿಕೊಡಬೇಕು. ಜಿ.ಪಿ. ಸ್ವಾಮಿ, ಪಿಗ್ಮಿ ಉದ್ಯೋಗಿ.
**
ಪೆಡೆಸ್ಟ್ರೈನ್ ಲೈಟ್ ಬಳಕೆ ಬಗ್ಗೆ ಪೊಲೀಸ್ ಇಲಾಖೆ ಯೋಜನೆ ರೂಪಿಸಬಹುದು. ಪಾದಚಾರಿಗಳು ರಸ್ತೆ ದಾಟಲು ಬರುವ ಬಣ್ಣದ ದೀಪ, ಸೂಚನೆ ಅರಿತು ಚಾಲಕರು ನಿಲ್ಲಿಸಬಹುದು. ಇದು ಹೆಚ್ಚು ಪ್ರಯೋಜನಕಾರಿ. ಎಂ.ಎಸ್. ಸುಬ್ರಮಣಿ, ಸಾಮಾಜಿಕ ಕಾರ್ಯಕರ್ತ, ಗೋಣಿಕೊಪ್ಪ.