ಕಾಫಿ ಬೆಳೆ ನಷ್ಟ, ಶೀಘ್ರವೇ ಸರ್ವೇ

6 gkp 01
Published on

ಸಣ್ಣುವಂಡ ಕಿಶೋರ್ ನಾಚಪ್ಪ ಗೋಣಿಕೊಪ್ಪ
ಮಳೆಗೆ ಉದುರಿದ ಕಾಫಿ ಬೀಜದ ಪ್ರಮಾಣವನ್ನು ಕಾಫಿ ಗೊಂಚಲಿನಿಂದ ನಿರ್ಧರಿಸಲು ಅವಕಾಶವಿದೆ ಎಂದು ದಕ್ಷಿಣ ಕೊಡಗು ಕಾಫಿ ಮಂಡಳಿ ವಿಸ್ತರಣಾ ವಿಭಾಗದ ಉಪನಿರ್ದೇಶಕಿ ಡಾ.ಕೆ. ಶ್ರೀದೇವಿ ಹೇಳಿದರು.

ಗೋಣಿಕೊಪ್ಪದಲ್ಲಿರುವ ದಕ್ಷಿಣ ಕೊಡಗು ಕಾಫಿ ಮಂಡಳಿ ವಿಸ್ತರಣಾ ವಿಭಾಗದ ಸಸ್ಯಕ್ಷೇತ್ರದಲ್ಲಿ ರಾಜ್ಯದ ನಂಬರ್ ೧ ಕನ್ನಡ ದಿನಪತ್ರಿಕೆ ವಿಜಯವಾಣಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಹೇಳಿದರು.

ಮಳೆ ಹೆಚ್ಚು ಬಿದ್ದಿರುವ ಪ್ರದೇಶದಲ್ಲಿ ಕಾಫಿ ಬೆಳೆ ಉದುರಿರುವ ಬಗ್ಗೆ ಸಾಕಷ್ಟು ದೂರುಗಳಿದ್ದು, ಈ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಕಂದಾಯ, ಕೃಷಿ, ತೋಟಗಾರಿಕೆ, ಕಾಫಿ ಮಂಡಳಿ ಜಂಟಿ ಪರಿಶೀಲನೆಗೆ ಜಿಲ್ಲಾಧಿಕಾರಿ ಸೂಚನೆ ಬಂದಾಗ ಸರ್ವೇ ನಡೆಸಿ ಶೇ. ೩೩ ಕ್ಕಿಂತ ಹೆಚ್ಚು ಬೆಳೆ ಉದುರಿರುವ ಬಗ್ಗೆ ವರದಿ ನೀಡಿ, ಪರಿಹಾರಕ್ಕೆ ಶಿಫಾರಸ್ಸು ಮಾಡಲಾಗುವುದೆಂದರು.

ಉದುರಿರುವ ಕಾಫಿ ಬೀಜ ನೆಲದಲ್ಲಿ ಕೊಳೆತು ಹೋಗಿದ್ದರೂ ಕೂಡ, ಕಾಫಿ ಗೊಂಚಲು ಆಧರಿಸಿ ಅಂದಾಜು ನಷ್ಟ ನಿರ್ಧರಿಸಲು ಅವಕಾಶವಿದೆ. ಕಾಫಿ ತೋಟದಲ್ಲಿ ಅಂದಾಜು ಉತ್ಪಾದನೆ ನಿರೀಕ್ಷೆ, ಇಳುವರಿ ಆಧರಿಸಿ ಕೂಡ ನಷ್ಟದ ಪ್ರಮಾಣ ತಿಳಿಸಬಹುದು. ಮರದ ಕೆಳಗೆ ಉದುರಿರುವ ಪ್ರಮಾಣದೊಂದಿಗೆ ಗೊಂಚಲು ಆಧರಿಸಿ ನೀಡುವ ವರದಿ ಕೂಡ ಮುಖ್ಯವಾಗಲಿದೆ. ಇದರಿಂದ ಬೆಳೆಗಾರರು ವಿಚಲಿತರಾಗಬಾರದೆಂದು ಮನವಿ ಮಾಡಿದರು.

ಮುಂಗಾರು ಹಂತದಲ್ಲಿರುವುದರಿಂದ ನಿರ್ಧರಿಸಲು ಸಮಯದ ಅವಕಾಶ ಬೇಕಿದೆ. ಗಿಡದ ಕೆಳಗೆ ನೀರು ಸಾಕಷ್ಟು ಸಮಯ ನಿಂತಾಗ ಬೇರುಗಳಲ್ಲಿ ಉಸಿರಾಟಕ್ಕೆ ತೊಡಕುವುಂಟಾಗಿ ಕಾಫಿ ಉದುರುತ್ತದೆ. ಇದಕ್ಕೆ ಯೂರಿಯಾ ಗೊಬ್ಬರ ಬಳಕೆಗೆ ಸಲಹೆ ನೀಡಲಾಗಿದೆ. ತಿಂಗಳಿಗೊಮ್ಮೆ ಕಾಫಿ ಬೆಳೆಗಾರರಿಗೆ ಸಲಹೆ, ಮಾರ್ಗದರ್ಶನ ನೀಡುತ್ತಿದೆ ಎಂದರು.

ಶ್ರೀಮಂಗಲ, ಸಿದ್ದಾಪುರ, ವಿರಾಜಪೇಟೆ, ಬಾಳೆಲೆ ವ್ಯಾಪ್ತಿಯಲ್ಲಿದ್ದ ಕಿರಿಯ ಸಂಪರ್ಕಾಧಿಕಾರಿ ಕೇಂದ್ರಗಳನ್ನು ದಕ್ಷಿಣ ಕೊಡಗು ಸ್ತರಣಾ ಕೇಂದ್ರವಾಗಿ ಮಾರ್ಪಡಿಸಿ ಸೇವೆ ಒದಗಿಸಲಾಗುತ್ತಿದೆ. ವಿಸ್ತರಣಾ ವಿಭಾಗವನ್ನು ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರವಾಗಿ ಪರಿವರ್ತಿಸಲು ಯೋಜನೆ ಇದೆ. ಒಂದೇ ಸ್ಥಳದಲ್ಲಿ ಸಾಕಷ್ಟು ಪ್ರಯೋಜನಗಳು ಕಾಫಿ ಬೆಳೆಗಾರರಿಗೆ ದೊರೆಯಲಿದೆ. ಪ್ರಸ್ತುತ ತಂತ್ರಜ್ಞಾನದ ಮಾಹಿತಿ, ಪ್ರಾತ್ಯಾಕ್ಷಿಕೆ, ಸ್ವಾವಲಂಬಿ ಮಳೆಗೆ ಸಾಕಷ್ಟು ತರಬೇತಿ, ಕಾಫಿ ಗಿಡದ ಮರುನಾಟಿಗೆ ಸಹಾಯಧನ, ನೀರಾವರಿಗೆ ಬಾವಿ. ಕೆರೆ, ನೀರೆತ್ತುವ ಯಂತ್ರ, ಸಲಕರಣೆ ಪ್ರಯೋಜನ ಪಡೆದುಕೊಳ್ಳಬಹುದೆಂದರು.

ದಕ್ಷಿಣ ಕೊಡಗು ಭಾಗದಲ್ಲಿ ೫೨,೫೯೫ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯುತ್ತಿದೆ. ೫೦,೦೫೭ ಹೆಕ್ಟೇರ್ ಪ್ರದೇಶದಲ್ಲಿ ರೋಬಸ್ಟಾ, ೨,೫೩೮ ಹೆಕ್ಟೇರ್ ಪ್ರದೇಶದಲ್ಲಿ ಅರೆಬಿಕಾ ಕಾಫಿ ಬೆಳೆಯಲಾಗುತ್ತಿದೆ. ಕಳೆದ ವರ್ಷ ೭೦,೧೮೭ ಮೆಟ್ರಿಕ್ ಟನ್ ಕಾಫಿ ಉತ್ಪಾದಿಸಲಾಗಿತ್ತು. ಪ್ರಸ್ತುತ ವರ್ಷ ಹೂ ಮಳೆ, ಬ್ಯಾಕಿಂಗ್, ಉತ್ತಮ ಮಳೆ ಆರಂಭದ ಹಂತದಲ್ಲಿ ದೊರೆತ್ತಿರುವುದರಿಂದ ೭ ಸಾವಿರ ಮೆಟ್ರಿಕ್ ಟನ್ ಹೆಚ್ಚು ಉತ್ಪಾದನೆಯಾಗುವ ನಿರೀಕ್ಷೆ ಹೊಂದಿದ್ದೇವೆ. ಅತೀವೃಷ್ಟಿಯಿಂದ ನಷ್ಟವಾಗಿರುವ ಪ್ರಮಾಣ ಕೂಡ ಅರಿವಾಗಲಿದೆ ಎಂದರು.

ಸಹಾಯಕ ಸಂಶೋಧಕ ಡಾ.ಜೆ. ಚೇತನ್ ಮಾತನಾಡಿ, ಕಾಫಿ ಗಿಡದ ಮುಖ್ಯ ಕಾಂಡದಿಂದ ಬರುವ ಕಂಬ ಚಿಗುರು ಮೂಲಕ ಸಸ್ಯಾಭಿವೃದ್ದಿ ಪಡಿಸಲು ಯೋಜನೆ ರೂಪಿಸಲಾಗಿದೆ. ವೇಗವಾಗಿ ಸಸ್ಯದ ಬೆಳವಣಿಗೆ ಕಾಣುತ್ತಿದೆ. ಬೇಗ ಫಸಲು ಪಡೆಯಲು ಕೂಡ ಅವಕಾಶ ಹೆಚ್ಚಿದೆ. ಕ್ಲೋನ್ ನರ್ಸರಿ ಮೂಲಕ ಪ್ರಾಯೋಗಿಕ ಹಂತ ಅನುಷ್ಠಾನ ಮಾಡಲಾಗುತ್ತಿದ್ದು, ಮತ್ತಷ್ಟು ಬೆಳೆಗಾರರಿಗೆ ತಂತ್ರಜ್ಞಾನ ತಿಳಿಸಲಾಗುವುದು. ಹೆಚ್ಚು ದಟ್ಟಪುಷ್ಟವಾಗಿರುವ ಗಿಡಗಳಿಂದ ಕಂಬ ಚಿಗುರು ತಂತ್ರಜ್ಞಾನ ಹೆಚ್ಚು ಪ್ರಯೋಜನಕ್ಕೆ ಬರುವ ನಿರೀಕ್ಷೆ ಇದೆ ಎಂದು ಹೇಳಿದರು.

ಸಹಾಯಕ ಸಂಶೋಧಕ ಡಾ. ಎಸ್. ಎ ನಡಾಫ್ ಮಾತನಾಡಿ, ಕಾಫಿ ಬೆಳೆಗ ಬಳಸುತ್ತಿರುವ ಗೊಬ್ಬರದ ಪ್ರಮಾಣ ಮಣ್ಣಿಗೆ ಎಷ್ಟು ಅಘಾತಕಾರಿ ಎಂಬುದನ್ನು ಪತ್ತೆ ಹಚ್ಚಲು ಕೇಂದ್ರದಲ್ಲಿ ಮಣ್ಣು ಪರೀಕ್ಷಾ ಘಟಕವನ್ನು ಕಾಫಿ ಬೆಳೆಗಾರರು ಬಳಸಿಕೊಳ್ಳಬೇಕಿದೆ. ರಸಸಾರ, ಹುಳಿ ಅಂಶ ಅರಿತುಕೊಂಡು ಎನ್‌ಪಿಕೆ ನೀಡಬೇಕಿದೆ. ಮಣ್ಣು ಪರೀಕ್ಷಿಸಿ ಮಣ್ಣಿನಲ್ಲಿರುವ ಆರ್ಗನಿಕ್ ಕಾರ್ಬನ್ ಅಂಶ, ಪೋಶಕಾಂಶ ಅರಿತು ಗೊಬ್ಬರ ನೀಡಲು ಸಲಹೆ ನೀಡುತ್ತಿದ್ದೇವೆ. ಗಿಡದ ಅಗತ್ಯಕ್ಕಿಂತ ಹೆಚ್ಚು ಗೊಬ್ಬರ ಬಳಕೆ ಮಣ್ಣು ಮತ್ತಷ್ಟು ಹುಳಿ ಬರಲು ಬೆಳೆಗಾರರು ಅವಕಾಶ ಮಾಡಿಕೊಡಬಾರದೆಂದರು.

ಹಳೆಯ ಕಾಫಿ ತೋಟದಲ್ಲಿ ಮರುನಾಟಿ ಯೋಜನೆಗೆ ೧೦೬ ಬೆಳೆಗಾರರು, ಬಾವಿ, ಕೆರೆ, ನೀರೆತ್ತುವ ಸಲಕರಣೆ ಒಳಗೊಂಡಿರುವ ನೀರಾವರಿ ಯೋಜನೆಗೆ ೨೬೭ ಬೆಳೆಗಾರರು ಹೆಸರು ನೋಂದಾಯಿಸಿಕೊಂಡಿದ್ದು, ಅವರಿಗೆ ಪ್ರೋತ್ಸಾಹ ಧನ ಕೂಡ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

**
ಪೊನ್ನಂಪೇಟೆ, ವಿರಾಜಪೇಟೆ ತಾಲೂಕು ವ್ಯಾಪ್ತಿಯ ಬೆಳೆಗಾರರಿಗೆ ಅನುಕೂಲವಾಗುವಂತೆ ಗೋಣಿಕೊಪ್ಪದಲ್ಲಿ ವಿಸ್ತರಣೆ, ಅಭಿವೃದ್ಧಿ ಯೋಜನೆ ಮೂಲಕ ಸಲಹೆ, ತಂತ್ರಜ್ಞಾನ ನೀಡಲಾಗುತ್ತಿದೆ. ಗುಣಮಟ್ಟದ ನರ್ಸರಿ ಬೀಜ, ನೂತನ ಕ್ಲೋನ್‌ಡ್ ನರ್ಸರಿ ತಂತ್ರಜ್ಞಾನ ಪರಿಚಯಿಸಲು ಪ್ರಾಯೋಗಿಕವಾಗಿ ತೊಡಗಿಕೊಂಡಿದ್ದೇವೆ. ಒಂದೇ ಕೇಂದ್ರದ ಮೂಲಕ ಹಂತ ಹಂತವಾಗಿ ತಂತ್ರಜ್ಞಾನ ನೀಡಲು ಕಾಫಿ ಮಂಡಳಿ ಮುಂದಾಗಿದೆ. ಡಾ.ಕೆ.ಶ್ರೀದೇವಿ, ಉಪನಿರ್ದೆಶಕರು, ಕಾಫಿ ಮಂಡಳಿ, ದಕ್ಷಿಣ ಕೊಡಗು.

**
ಕಂಬ ಚಿಗುರು ಬಳಸಿಕೊಂಡು ಸಸ್ಯಾಭಿವೃದ್ದಿ ಪಡಿಸುವ ನೂತನ ತಂತ್ರಜ್ಞಾನ ಪ್ರಾಯೋಗಿಕ ಹಂತದಲ್ಲಿದೆ. ಬೀಜದ ತಂತ್ರಜ್ಞಾನಕ್ಕಿಂತ ಕಡಿಮೆ ಸಮಯದಲ್ಲಿ ಗಿಡದ ಬೆಳವಣಿಗೆ, ಇಳುವರಿ ಪಡೆಯಲು ತಂತ್ರಜ್ಞಾನ ಪೂರಕವಾಗಿದೆ. ಇಂತಹ ತಂತ್ರಜ್ಞಾನ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ. ಡಾ.ಜೆ. ಚೇತನ್, ಸಹಾಯಕ ಸಂಶೋಧಕರು.
**
ಕಾಫಿ ಬೆಳೆಗೆ ಮಣ್ಣಿನ ಸಮತೋಲನ ಕಾಪಾಡಿಕೊಳ್ಳುವುದು ಮುಖ್ಯ. ಮಣ್ಣು ಪರೀಕ್ಷೆ ಮೂಲಕ ರಸಸಾರ, ಫಾಸ್ಪರಸ್, ಆರ್ಗನಿಕ್ ಕಾರ್ಬನ್ ಅಂಶದ ಪ್ರಮಾಣ ರೈತರಿಗೆ ತಿಳಿಸಿಕೊಡಲಾಗುವುದು. ಇದು ಮಣ್ಣಿನ ಆರೋಗ್ಯ ಮತ್ತು ಮಣ್ಣಿನಲ್ಲಿನ ಹುಳಿ ಅಂಶ ನಿಯಂತ್ರಣದಲ್ಲಿಡಲು ಸಹಾಯವಾಗಲಿದೆ. ಡಾ.ಎಸ್.ಎ. ನಡಾಫ್, ಸಹಾಯಕ ಸಂಶೋಧಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net