

ಸಣ್ಣುವಂಡ ಕಿಶೋರ್ ನಾಚಪ್ಪ ಗೋಣಿಕೊಪ್ಪ
ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ಬೊಮ್ಮಾಡಿನಲ್ಲಿ ಶನಿವಾರ ಹುಲಿ ದಾಳಿಗೆ ಜೇನುಕುರುಬರ ದಾಸ ಜೀವ ಕಳೆದುಕೊಂಡಿದ್ದಾರೆ. ಈ ಘಟನೆಯಿಂದ ಭಯದ ವಾತಾವರಣ ಸೃಷ್ಟಿಯಾಗಿದೆ. ಅರಣ್ಯ ಇಲಾಖೆ ಬೇಜವಾಬ್ದಾರಿ, ಸರ್ಕಾರದ ಕಾನೂನು ನರಬಲಿಗೆ ಮೂಲ ಕಾರಣವಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ.
ಹುಲಿ ದಾಳಿಗೆ ಹಸು ಬಲಿಯಾದ ಸಂದರ್ಭ ಮುಂಜಾಗೃತ ಕ್ರಮಕ್ಕೆ ಅರಣ್ಯ ಇಲಾಖೆ ಮುಂದಾಗದಿರುವುದು ಕಾರ್ಮಿಕನ ಸಾವಿಗೆ ಕಾರಣ ಎಂಬ ಅರೋಪ ಕೇಳಿ ಬಂದಿದೆ. ಹಸುವಿನ ಕಳೇಬರ ಧಪನ ಅರಣ್ಯ ಇಲಾಖೆ ನಿರ್ವಹಿಸಬೇಕಿತ್ತು. ಹುಲಿ ಸುತ್ತಲೂ ಇರುವ ಬಗ್ಗೆ ಮುಂಜಾಗೃತೆ ವಹಿಸದೆ, ಟ್ರ್ಯಾಪ್ ಮಾಡಲು ಯೋಜನೆ ರೂಪಿಸದಿರುವುದು ಇಲಾಖೆಯ ನಿರ್ಲಕ್ಷ್ಯವಾಗಿದೆ.
ಹುಲಿ ರಾಷ್ಟ್ರೀಯ ಪ್ರಾಣಿ ಎಂಬ ಕಾರಣಕ್ಕೆ ಹುಲಿ ಸಂರಕ್ಷಣೆಗಷ್ಟೆ ನಿಯಮವಿದೆ. ಹುಲಿಯಿಂದ ಮಾನವ ಜೀವ ಹಾನಿ ಹೆಚ್ಚಾದಾಗ ಯಾವ ನಿಯಮ ಬದಲಾವಣೆ ಮಾಡಬೇಕೆಂಬ ಚಿಂತನೆಗೆ ಸರ್ಕಾರ ಮುಂದಾಗಿಲ್ಲ. ಘಟನೆ ನಡೆದ ಸಂದರ್ಭ ಇಲಾಖೆ ಹುಲಿಯನ್ನು ಟ್ರ್ಯಾಪ್ ಮಾಡಿ, ಅದರ ಚಲನವಲನ, ಮೈಮೇಲಿನ ಪಟ್ಟೆಯ ಚಹರೆ, ಗುರುತು ಸರ್ಕಾರಕ್ಕೆ ಕಳುಹಿಸಿ, ಹುಲಿ ಹಿಡಿಯಬೇಕೋ, ಕೊಲ್ಲಬೇಕೋ ಎಂಬ ನಿರ್ಧಾರ ಸರ್ಕಾರ ತೆಗದುಕೊಳ್ಳುತ್ತದೆ. ಅಲ್ಲಿಯವರೆಗೂ ಇಲಾಖೆಗೆ ಯಾವ ಸ್ವತಂತ್ರ ಕೂಡ ನಿಯಮದಲ್ಲಿ ರೂಪಿಸದಿರುವುದು ಅನಾಹುತಕ್ಕೆ ಕಾರಣವಾಗುತ್ತಿದೆ.
ಜನಪ್ರತಿನಿಧಿಗಳು, ಸಂಘಟನೆಗಳು ನೊಂದವರ ಎದುರು ಹೋರಾಟ ಮಾಡುವುದು ಪ್ರಯೋಜನವಿಲ್ಲ. ಪರಿಹಾರ ಧನ ನೊಂದ ಕುಟುಂಬಕ್ಕೆ ಬರಲಿದೆ. ಸಮಸ್ಯೆ ಮೂಲ ಅರಿತು ಹೋರಾಟ ನಡೆಸುವುದು ಸೂಕ್ತ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಈ ಬಗ್ಗೆ ವಿಜಯವಾಣಿ ಲೌಡ್‌ಸ್ಪೀಕರ್‌ಗೆ ಅಭಿಪ್ರಾಯ ಸಂಗ್ರಸಲಾಗಿದೆ.
**
ದಾಸ ಸಾವಿಗೆ ಅರಣ್ಯ ಇಲಾಖೆ ನೇರ ಹೊಣೆ. ಹುಲಿ ದಾಳಿಗೆ ಬಲಿಯಾಗಿದ್ದ ಹಸುವನ್ನು ಧಪನ ಮಾಡುವುದು ಅರಣ್ಯ ಇಲಾಖೆ ಕರ್ತವ್ಯ. ಹಾಡಿ ನಿವಾಸಿಗಳೇ ಕಳೇಬರ ಧಪನ ಮಾಡುವ ಸಂದರ್ಭ ಹುಲಿ ದಾಳಿ ಮಾಡಿ, ಬಲಿ ಪಡೆದುಕೊಂಡಿರುವುದು ನೋವಿನ ವಿಚಾರ. ಇದು ಅರಣ್ಯ ಇಲಾಖೆಯ ಬೇಜವಾಬ್ದಾರಿ. ಹೋರಾಟದ ಮೂಲಕ ಇಲಾಖೆ ನಿರ್ಲಕ್ಷ್ಯ ಖಂಡಿಸಲಾಗುವುದು. ಕೊಲ್ಲೀರ ಬೋಪಣ್ಣ, ರೈತ ಮುಖಂಡ, ಕುಟ್ಟಂದಿ.
**
ರಾಷ್ಟ್ರೀಯ ಪ್ರಾಣಿ ಹುಲಿ ಸೆರೆ ಯೋಜನೆಯ ನಿಯಮದಲ್ಲಿ ಸರ್ಕಾರ ಆಮೂಲಾಗ್ರ ಬದಲಾವಣೆ ಮಾಡಬೇಕಿದೆ. ಜಿಲ್ಲೆಯಲ್ಲಿ ಕಳೆದ ೨ ವರ್ಷಗಳಿಂದ ೭-೮ ಜನರ ಜೀವ ನಷ್ಟವಾಗಿದೆ. ಜನಪ್ರತಿನಿಧಿಗಳು ಶಾಸನ ಸಭೆಯಲ್ಲಿ ಇದೇ ವಿಚಾರ ಇಟ್ಟುಕೊಂಡು ನಿಯಮ ಬದಲಾಯಿಸಲು ಮುಂದಾಗಬೇಕು. ಈ ಬಗ್ಗೆ ಚಿಂತನೆ ನಡೆಯಲಿದೆ. ಮಾಚಿಮಾಡ ಎಂ. ರವೀಂದ್ರ, ಬಿಜೆಪಿ ಮಾಜಿ ಅಧ್ಯಕ್ಷ, ಬೆಕ್ಕೆಸೊಡ್ಲೂರು.
**
ಹುಲಿ ದಾಳಿಗೆ ಬೆಳಗ್ಗೆ ಹಸು ಸಾಗೀಡಾದಾಗ ಅರಣ್ಯ ಇಲಾಖಾಧಿಕಾರಿಗಳು ಬಂದಿದ್ದರು. ಆದರೆ, ಧಪನ ಮಾಡುವಾಗಿ ಜನರಿಗೆ ರಕ್ಷಣೆ ನೀಡಲಿಲ್ಲ. ಇದು ಜೀವ ಬಲಿಗೆ ಕಾರಣವಾಗಿದೆ. ತುಂಬಾ ಬೇಸರದ ವಿಚಾರ. ವೈ.ಎಂ. ಪ್ರಕಾಶ್, ಗಿರಿಜನ ಮುಖಂಡ, ಕಾನೂರು.
**
ಹುಲಿ ತೋಟದಲ್ಲಿ ಉಳಿದುಕೊಂಡಿರುವ ಬಗ್ಗೆ ಮಾಹಿತಿ ಇಲ್ಲದೆ, ಸಾವು ಸಂಭವಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಇದ್ದಿದ್ದರೂ ಘಟನೆ
ನಡೆಯುತ್ತಿತ್ತು. ಅವರ ಬಳಿ ಪಟಾಕಿ ಕೂಡ ಇರುವುದಿಲ್ಲ. ಕೋವಿ ಇದ್ದರೂ ಗುಂಡು ಹೊಡೆಯಲು ಅಧಿಕಾರ ಇಲ್ಲ. ಹೀಗಾದರೆ ಮನುಷ್ಯರ ಜೀವ ಉಳಿಸುವುದು ಹೇಗೆ. ಧಪನ ಮಾಡುವಾಗ ಕಾರ್ಯಾಚರಣೆ ಇಡೀ ತಂಡ ಇರಬೇಕಿತಷ್ಟೆ. ಜೇನುಕುರುಬರ ಎಸ್. ರವಿ, ಬೊಮ್ಮಾಡು ಹಾಡಿ ನಿವಾಸಿ.
**
ಪತಿ ಮತ್ತು ಮಗ ಒಟ್ಟಾಗಿ ದುಡಿದು ಮನೆ ನಿರ್ವಸುತ್ತಿದ್ದೆವು. ಹುಲಿಯಿಂದಾಗಿ ಮನೆ ಆಧಾರ ಸ್ತಂಭ ಕಳೆದುಕೊಂಡಿದ್ದೇವೆ. ಇಂತಹ ಘಟನೆ ನಡೆಯದ ಹಾಗೇ ಎಚ್ಚರಿಕೆ ವಹಿಸಬೇಕಿದೆ. ಜೇನುಕುರುಬರ ಕಾವೇರಿ ಕೃಷ್ಣ,, ಮೃತ ದಾಸ ಪತ್ನಿ.
**
ಅರಣ್ಯ ಇಲಾಖೆ ಬೇಜವಾಬ್ದಾರಿಯಿಂದ ಜೀವ ಹಾನಿಯಾಗಿದೆ. ಕರ್ತವ್ಯ ನಿಭಾಯಿಸುವಲ್ಲಿ ಇಲಾಖೆಗಳು ಜವಾಬ್ದಾರಿ ಹೊತ್ತುಕೊಳ್ಳಬೇಕು. ಈ ಸಾವು ಬೇಸರ ಮೂಡಿಸಿದೆ. ಇಂತಹ ಘಟನೆ ಮುಂದೆ ನಡೆಯದಂತೆ ಎಚ್ಚರ ವಹಿಸಬೇಕಿದೆ. ಮಲ್ಲಮಾಡ ಡಿ. ರಶ್ಮಿ, ಅಧ್ಯಕ್ಷೆ, ಕಾನೂರು ಗ್ರಾಪಂ.
**
ಹುಲಿ ಚಲನವಲನ ಪತ್ತೆ ಮಾಡಲಾಗುತ್ತಿದೆ. ರಾತ್ರಿ ಬಂದು ಹಗಲು ಅರಣ್ಯಕ್ಕೆ ತೆರಳುತ್ತಿದ್ದು, ಗುರುತು ಪತ್ತೆಹಚ್ಚಲಾಗಿದೆ. ಮೂರ‌್ನಾಲ್ಕು ದಿನದಲ್ಲಿ ಅನುಮತಿ ಪಡೆದು ಹುಲಿ ಸೆರೆ ಹಿಡಿಯಲಾಗುವುದು. ಈಗಾಗಲೇ ೨.೫ ಲಕ್ಷ ರೂ. ಪರಿಹಾರ ನೀಡಲಾಗಿದ್ದು, ೫ ಲಕ್ಷ ರೂ. ಪರಿಹಾರ ಶೀಘ್ರದಲ್ಲಿ ವಿತರಿಸಲಾಗುವುದು. ಎಸ್.ಎನ್. ನಿರಂಜನ್ ಮೂರ್ತಿ, ಮುಖ್ಯ ಸಂರಕ್ಷಣಾಧಿಕಾರಿ, ಕೊಡಗು ವೃತ್ತ.
**
ಅರಣ್ಯ ಇಲಾಖೆ ಎಚ್ಚರಿಕೆಯಿಂದ ಜವಾಬ್ದಾರಿ ನಿಭಾಯಿಸಬೇಕಿದೆ. ಹಾಡಿ ಜನರಿಗೂ ರಕ್ಷಣೆ ನೀಡಬೇಕು. ಜೀವಹಾನಿ ಅವರ ಕುಟುಂಬಕ್ಕೆ ದೊಡ್ಡ ನಷ್ಟ. ಇಲಾಖೆ ನಿರ್ಲಕ್ಷ್ಯ ಮರುಕಳಿಸಬಾರದು. ಜಿ. ರಘುನಾಥ್, ವರ್ತಕ, ಗೋಣಿಕೊಪ್ಪ.