

ಗೋಣಿಕೊಪ್ಪ: ಕೊಡವ ಹಾಗೂ ಕೊಡವ ಭಾಷಿಕ ಜನಾಂಗ ಇಗ್ಗುತಪ್ಪ ದೇವರ ಪುತ್ತರಿ ದೇವ ಕಟ್ಟ್ ತಪ್ಪದೆ ಪಾಲನೆ ಮಾಡಬೇಕು ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಕರೆ ನೀಡಿದರು.
ಭಾನುವಾರ ಪೊನ್ನಂಪೇಟೆ ತಾಲೂಕಿನ ಕುಂದಾ ಸಮೀಪದ ಬೊಟ್ಟಿಯತ್ ಮೂಂದ್ ನಾಡ್, ಕುತ್ತ್ ನಾಡ್ ಹಾಗೂ ಬೇರಳಿ ನಾಡ್‌ಗೆ ಸೇರಿದ ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್‌ನ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿವರ್ಷ ಪುತ್ತರಿ ನಮ್ಮೆಗೆ ಹದಿನೈದು ದಿವಸ ಮುಂಚಿತವಾಗಿ ಅಮಾವಾಸ್ಯೆಯ ದಿನದಂದು ಇಗ್ಗುತಪ್ಪ ದೇವರ ಮೂಲಸ್ಥಾನವಾದ ಮಲ್ಮ ಬೆಟ್ಟದಲ್ಲಿ ತಕ್ಕಮುಖ್ಯಸ್ಥರು ಸೇರಿ ಪುತ್ತರಿ ಹಬ್ಬದ ದೇವ ಕಟ್ಟ್ ಅನ್ನು ಹಾಕಲಾಗುತ್ತದೆ. ಈ ಕಟ್ಟುಪಾಡುಗಳನ್ನು ಜಿಲ್ಲೆಯ ಜನರು ಸರಿಯಾಗಿ ಪಾಲನೆ ಮಾಡುತ್ತಿಲ್ಲ. ಇದು ಕೆಲವರ ಬದುಕಿನಲ್ಲಿ ವ್ಯತ್ಯಾಸವಾಗಲು ಕಾರಣವಾಗಿದೆ ಎಂದು ಅಭಿಪ್ರಾಯಿಸಿದರು.
ಮೂಂದ್ ನಾಡ್ ವತಿಯಿಂದ ಸಾಧಕರ ಸನ್ಮಾನ ಸ್ವೀಕರಿಸಿ ಮಾತನಾಡಿದ, ಗೋಣಿಕೊಪ್ಪ ಕಾವೇರಿ ಕಾಲೇಜಿನ ಸಹಯಕ ಪ್ರಾಧ್ಯಾಪಕಿ ಡಾ.ಮುಲ್ಲೇಂಗಡ ರೇವತಿ ಪೂವಯ್ಯ ಮಾತನಾಡಿ, ನಮ್ಮ ಪದ್ಧತಿ, ಸಂಸ್ಕೃತಿ, ಭಾಷೆ, ಮಂದ್, ಮುಂದ್ ಉಳಿದರೆ ಮಾತ್ರ ಕೊಡವಾಮೆ ಉಳಿವು ಸಾಧ್ಯ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೂರು ನಾಡಿನ ತಕ್ಕಮುಖ್ಯಸ್ಥ ಅಡ್ಡಂಡ ಪ್ರಕಾಶ್ ಕುಶಾಲಪ್ಪ, ಕೈಮುಡಿಕೆ ಮಂದ್ ಎನ್ನುವುದು ಕೊಡಗಿನಲ್ಲಿ ಪ್ರಸಿದ್ಧಿ ಪಡೆದಿರುವ ಮಂದ್ ಆಗಿದ್ದು, ಸೇನಾ ಮಹಾದಂಡನಾಯಕನಾಗಿದ್ದ ಫೀಲ್ಡ್ ಮಾರ್ಷಲ್ ಕೊಡಂದೇರ ಕಾರ್ಯಪ್ಪ ಅವರು ಕೋಲು ಹೊಡೆದ ಖ್ಯಾತಿಯನ್ನು ಹೊಂದಿದೆ ಎಂದರು.
ವೇದಿಕೆಯಲ್ಲಿ ಕುತ್ತ್‌ನಾಡ್ ತಕ್ಕ ಪಂದಿಮಾಡ ಅಚ್ಚಪ್ಪ, ಬೇರಳಿನಾಡ್ ತಕ್ಕ ಮಳವಂಡ ಭುವೇಶ್, ಗೌರವ ಕಾರ್ಯದರ್ಶಿ ನಾಳಿಯಮ್ಮನ ಉಮೇಶ್ ಕೇಚಮಯ್ಯ, ಸಹಕಾರ್ಯದರ್ಶಿ ಅಪ್ಪಂಡೇರಂಡ ಮನು ಮೋಹನ್ ಸೇರಿದಂತೆ ಮೂರು ನಾಡಿನ ಊರು ತಕ್ಕರು ಉಪಸ್ಥಿತರಿದ್ದರು.