ಗೋಣಿಕೊಪ್ಪ ಪಿಡಿಒ ಅಮಾನತು

Published on

ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕು ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ ಅವರು ಶಿಷ್ಟಾಚಾರ ಉಲ್ಲಂಘಿಸಿದ ಆರೋಪ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದಾರೆ.

ಗೋಣಿಕೊಪ್ಪಲು ಗ್ರಾಪಂ ವ್ಯಾಪ್ತಿಯಲ್ಲಿ ಕಳೆದ ಜೂನ್ 16ರಂದು ಆಯೋಜಿಸಿದ್ದ ನೂತನ ಕಸದ ತಡೆಗೋಡೆ ಉದ್ಘಾಟನಾ ಕಾರ್ಯಕ್ರಮ ಆಹ್ವಾನ ಪತ್ರಿಕೆಯಲ್ಲಿ ಎಂಎಲ್ಸಿ ಸುಜಾ ಕುಶಾಲಪ್ಪ ಅವರ ಹೆಸರನ್ನು ಮುದ್ರಿಸದೆ ಹಾಗೂ ಅವರನ್ನು ಕಾರ್ಯಕ್ರಮಕ್ಕೂ ಆಹ್ವಾನಿಸದೆ ಕಡೆಗಣಿಸಲಾಗಿತ್ತು. ಶಿಷ್ಟಾಚಾರ ಉಲ್ಲಂಘಿಸಿರುವ ಪಿಡಿಒ ವಿರುದ್ಧ ಕ್ರಮ ವಹಿಸಬೇಕು ಎಂದು ಸುಜಾ ಕುಶಾಲಪ್ಪ ಅವರು ಕರ್ನಾಟಕ ವಿಧಾನ ಪರಿಷತ್ತಿನ ಹಕ್ಕು ಬಾಧ್ಯತಾ ಸಮಿತಿಗೆ ದೂರು ನೀಡಿದ್ದರು.

ಅ.7ರಂದು ನಡೆದ ಸಮಿತಿ ಸಭೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ ಕುರಿತು ಚರ್ಚಿಸಿ, ಪಿಡಿಒ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಇದರ ಅನ್ವಯ ಅ.14ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಅಭಿವೃದ್ಧಿ ಇಲಾಖೆಯ ಪೀಠಾಧಿಪತಿ ಶಿವಕುಮಾರ್ ಅವರು ಪಿಡಿಒ ತಿಮ್ಮಯ್ಯ ಅವರನ್ನು 1957ರ ನಿಯಮ 10(8). (2) (ಎ ) ಅನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ, ದೋಷಾರೋಪಣ ಪಟ್ಟಿ ಜಾರಿಗೊಳಿಸಿ ಇಲಾಖಾ ವಿಚಾರಣೆ ನಡೆಸಿ ಕರ್ನಾಟಕ ವಿಧಾನ ಪರಿಷತ್‌ನ ಹಕ್ಕು ಬಾಧ್ಯತಾ ಸಮಿತಿಗೆ ಮಾಹಿತಿ ಒದಗಿಸಿ ಅದರ ಪ್ರತಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಕೊಡಗು ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಕಳುಹಿಸಲಾದ ಆದೇಶದಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net