

ಗೋಣಿಕೊಪ್ಪ: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಎನ್‌ಎಸ್‌ಎಸ್ ದಿನವನ್ನು ನಾಗರಹೊಳೆಯ ಗಿರಿಜನರ ನಾಣಚ್ಚಿಗದ್ದೆ ಹಾಡಿಯಲ್ಲಿ ಆಚರಿಸಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಸಂಕೇತ್ ಪೂವಯ್ಯ, ಸರ್ಕಾರ ರಚನೆಯಾಗುವ ಮೊದಲೇ ಹಾಡಿ ಜನರು ಕಾಡಿನಲ್ಲಿ ವಾಸವಾಗಿದ್ದಾರೆ. ಅವರನ್ನು ನಾಡಿಗೆ ಕರೆತರುವ ಸರ್ಕಾರದ ನೀತಿ ಸರಿಯಲ್ಲ. ಅವರಿಗೆ ಇರುವ ಜಾಗದಲ್ಲೇ ಹಕ್ಕು ಪತ್ರ ನೀಡಿ ಮೂಲಸೌಲಭ್ಯಗಳನ್ನು ಒದಗಿಸಬೇಕು ಎಂದರು.
ಹಾಡಿಯ ಅಧ್ಯಕ್ಷ ಕಾಳ, ಗಿರಿಜನ ಸಮಗ್ರ ಅಭಿವೃದ್ಧಿ ಕಲಾ ಸಂಸ್ಥೆ ಅಧ್ಯಕ್ಷ ಜೆ.ಬಿ. ರಮೇಶ್, ನಾಲ್ಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೆ.ಎಂ. ಸೋಮಯ್ಯ, ಕಾಲೇಜು ಎನ್‌ಎಸ್‌ಎಸ್ ಅಧಿಕಾರಿ ಎಂ.ಎನ್ ವನಿತ್ ಕುಮಾರ್, ಎನ್.ಪಿ.ರೀತಾ ಇದ್ದರು.
ಇದೇ ಸಂದರ್ಭ ಹಾಡಿ ಜನರ ಸಮಸ್ಯೆ ಅರಿಯಲು ಗ್ರಾಮ ಸಮೀಕ್ಷೆ ನಡೆಸಲಾಯಿತು. ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ ಅಡಿಯಲ್ಲಿ ಹಾಡಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್‌ಗಳನ್ನು ಹೆಕ್ಕಿ ತೆಗೆಯಲಾಯಿತು.