

ಸಣ್ಣುವಂಡ ಕಿಶೋರ್ ನಾಚಪ್ಪ ಗೋಣಿಕೊಪ್ಪ
ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳಾಜಿ ಗ್ರಾಮದಲ್ಲಿರುವ ಮಾನಿಲ್ ಅಯ್ಯಪ್ಪ ದೇವರು ನಂಬಿ ಪೂಜಿಸುವವರನ್ನು ಕೈಬಿಡುವುದಿಲ್ಲ. ಬೇಡಿದನ್ನು ವರದ ರೂಪದಲ್ಲಿ ನೀಡುವ ದೇವರು, ದೈವ ಸ್ಥಾನಕ್ಕೆ ತೊಡಕ್ಕಾಗುವವರನ್ನು ಕೂಡ ಬೆಂಬಿಡದೆ ಕಾಡುತ್ತದೆ. ಪ್ರಕೃತಿ ಪೋಷಣೆಯ ಹಿನ್ನೆಲೆಗೆ ಧಕ್ಕೆ ಮಾಡಿದ ಜನಪ್ರತಿನಿಧಿಗಳು ರಾಜಕೀಯವಾಗಿ ಅಂತ್ಯ ಕಂಡಿರುವ ನಿದರ್ಶನಗಳಿವೆ ಎನ್ನುತ್ತಾರೆ ಸ್ಥಳೀಯ ಭಕ್ತರು.
ದೇವರ ಭಯದಿಂದ ಅಲ್ಲಿ ಜೀವಿಸಲು ಗ್ರಾಮಸ್ಥರು ಹಿಂದಿನಿಂದಲೇ ಹಿಂದೇಟು ಹಾಕಿದ್ದರು. ಆದರೆ, ರಾಜಕೀಯ ಉದ್ದೇಶದಿಂದ ಅಮಾಯಕರಿಗೆ ವಸತಿಗೆ ಅವಕಾಶ ಮಾಡಿಕೊಟ್ಟಿರುವ ಜನಪ್ರತಿನಿಧಿಗಳು ಹೆಚ್ಚು ವರ್ಷ ರಾಜಕೀಯವಾಗಿ ಮುಂದುವರಿಯುತ್ತಿಲ್ಲ. ಇದಕ್ಕೆ ದೇವರ ಅವಕೃಪೆ ಕಾರಣ ಎನ್ನುತ್ತಾರೆ ಸ್ಥಳೀಯ ಭಕ್ತರು.
ಮುಖ್ಯರಸ್ತೆಯ ದೊಡ್ಡಮಾಡ್ ಎಂಬಲ್ಲಿ ಮಾನಿಲ್ ಅಯ್ಯಪ್ಪ ದೇವರ ಭಂಡಾರ ಸ್ಥಾನವಿದ್ದು, ಇಲ್ಲಿ ಸಾಕಷ್ಟು ಭಕ್ತರು ಬಂದು ಬೇಡು ತ್ತಾರೆ. ಹರಕೆ ತೀರಿಸುತ್ತಾರೆ. ಒಂದೊಮ್ಮೆ ಮರ ಸಾಗಿಸುವ ಲಾರಿ ಕೂಡ ಇಲ್ಲಿ ಚಲಿಸಲಾಗದೆ, ದೇವರ ಪ್ರಾರ್ಥನೆ ನಂತರ ವಾಹನ ಸುಸ್ಥಿತಿಗೆ ಬಂದ ನಿದರ್ಶನಗಳಿವೆ.
೮೫೦ ವರ್ಷ ಹಿನ್ನೆಲೆ
೬೧.೭೬ ಎಕರೆ ದೇವರಕಾಡು ಪ್ರದೇಶ ಹೊಂದಿದ್ದು, ೮೫೦ ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿದೆ. ಅರಣ್ಯ ಪ್ರದೇಶದಲ್ಲಿರುವ ಅಯ್ಯಪ್ಪ ದೇವ ಕಲ್ಲಿನ ರೂಪದಲ್ಲಿದೆ. ಸುತ್ತ, ಮೇಲೆ ಯಾವುದೇ ಛಾವಣಿ ಹಾಕುವಂತಿಲ್ಲ. ಬಿಸಿಲು, ಮಳೆ, ಗಾಳಿಯನ್ನು ನಿತ್ಯ ಸ್ವೀಕರಿಸುವ ದೇವವಾಗಿರುವುದರಿಂದ ಎತ್ತರದ ಪ್ರದೇಶದಲ್ಲಿ ನೆಲೆ ನಿಂತಿದೆ. ಇದರ ಸಮೀಪ ಬೋಟೆಕಾರ ಅಯ್ಯಪ್ಪ, ಭದ್ರಕಾಳಿ ಇದೆ. ಮೂರು ಸ್ಥಾನಗಳು ಬೋಡ್‌ನಮ್ಮೆ ಆಚರಣೆಯ ಮೂಲವಾಗಿದೆ.
ಬೋಡ್‌ನಮ್ಮೆ ಮೂಲ ಸ್ಥಾನ
ಮಾಯಮುಡಿ ಬೋಡ್‌ನಮ್ಮೆ ಆಚರಣೆಯ ಮೂಲ ಸ್ಥಾನವಾಗಿದೆ. ಕುಟ್ಟ ಕರ್‌ಂಗಾಳಿ ಹಬ್ಬ ನಡೆದ ೧೫ ದಿನಗಳಲ್ಲಿ ಇಲ್ಲಿ ಹಬ್ಬ ನಡೆಸಲಾಗುತ್ತದೆ. ಕರ್‌ಂಗಾಳಿ ಹಬ್ಬದಿಂದ ಪ್ರಸಾದ ತಂದು ಇಲ್ಲಿ ಆಚರಣೆಗೆ ಚಾಲನೆ ನೀಡಲಾಗುತ್ತದೆ. ಮಾನಿಲ್ ಅಯ್ಯಪ್ಪ ಸ್ಥಾನದಲ್ಲಿ ಶನಿವಾರ ವಿಶೇಷ ಪೂಜೆ ಸಲ್ಲಿಸಿ ಹಬ್ಬದ (ನಾಪರೆ ತಾತುವೊ) ಕಟ್ಟುಪಾಡುಗಳಿಗೆ ನಡೆದುಕೊಳ್ಳುವುದಾಗಿ ಪ್ರಾರ್ಥಿಸಿ ಗ್ರಾಮದ ಭಕ್ತರು ಹಬ್ಬ ನಡೆಸಲು ಮುಂದಾಗುತ್ತಾರೆ.
ಮರ ಕಡಿಯದಂತೆ, ಪ್ರಾಣಿ ಬಲಿ ನಡೆಸದ ಹಾಗೆ ೫ ದಿನ ನಡೆದುಕೊಳ್ಳುತ್ತಾರೆ. ೫ ದಿನ ದೋಳು ಬಡಿದು ದೇವರನ್ನು ಪ್ರಾರ್ಥಿಸಲಾಗು ತ್ತದೆ. ಬಾಳಾಜಿ ಮತ್ತು ಮಾಯಮುಡಿ ಗ್ರಾಮಸ್ಥರು ಒಂದಾಗಿ ನಾಪರೆ ತಾತುವೊ ದಿನದ ೪ ನೇ ದಿನ ದೇವರ ಭಂಡಾರ, ಕಡತಲೆ, ಬೆತ್ತ ತಂದು ಇಲ್ಲಿ ಪೂಜಿಸಿ, ರಾತ್ರಿ ಮನೆ, ಮನೆಗೆ ತೆರಳಿ ದೇವರ ಹಾಡು ಹೇಳಿ ಆಚರಿಸುತ್ತಾರೆ.
ಕಲ್ತೋಡು ಚೆಪ್ಪುಡೀರ ಕಾರ್ಯಪ್ಪ ಎಂಬುವವರು ದೇವರನ್ನು ಆಹ್ವಾನಿಸಿಕೊಂಡು ಉಪಹಾರ ನೀಡುತ್ತಿದ್ದರು. ೫ ನೇ ದಿನ ನಡೆಯುವ ದೇವರ ಕುದುರೆ ಹಬ್ಬಕ್ಕೆ ಎಲ್ಲರೂ ಬರುವಂತೆ ಆಹ್ವಾನಿಸುತ್ತಾರೆ. ಒಡ್ಡಕಳಿ, ಚೂಳೆ ಕಳಿ ಮೂಲಕ ದೇವರಿಗೆ ಕುಶಿ ನೀಡಲಾಗುತ್ತದೆ.
ದೇವರ ದೋಳ್ ಬಡಿದುಕೊಂಡು ಹಾಡಿನ ಮೂಲಕ ದೇವರನ್ನು ಹೊಗಳುವ ಆಚರಣೆ ಮಾಡಲಾಗುತ್ತದೆ. ಗುರುವಾರ ಸಾಯಂಕಾಲ ಮೇಕಲ್‌ಮನೆಯಿಂದ ಪಣಿಕರ ಜನಾಂಗದ ಕುಕ್ಕೆಮುಡಿ ಹೊತ್ತು, ಬೆತ್ತದಿಂದ ತಯ್ಯರಿಸಿದ ಕುದುರೆ ಹೊತ್ತು ಆಚರಣೆಯ ಮೂಲ ಸಣ್ಣುವಂಡ ಕುಟುಂಬದ ಬಲ್ಯಮನೆಯ ಆವರಣದಿಂದ ಕುದುರೆಯೊಂದಿಗೆ ತೆರಳುವ ಆಚರಣೆ ಇದೆ. ಇಲ್ಲಿ ಪೂಜೆ ಸಲ್ಲಿಸಿ ಹಬ್ಬಕ್ಕೆ ತೆರೆ ಎಳೆಯಲಾಗುತ್ತದೆ. ಸ್ಥಾನದ ಸಮೀಪವಿರುದ ಬೋಟೆಕಾರ ಅಯ್ಯಪ್ಪನಿಗೆ ಮಣ್ಣಿನಿಂದ ತಯ್ಯರಿಸಿದ ನಾಯಿಯ ರೂಪವನ್ನು ಅರ್ಪಿಸಲಾಗುತ್ತದೆ. ಭದ್ರಕಾಳಿ ಸ್ಥಾನಕ್ಕೆ ಪ್ರಸಾದ ಅರ್ಪಣೆ ಮಾಡಲಾಗುತ್ತದೆ.
ಸಾಕು ಪ್ರಾಣಿ ರಕ್ಷಕ
ಗ್ರಾಮದಲ್ಲಿ ಸಾಕು ಪ್ರಾಣಿಗಳ ರಕ್ಷಕನಾಗಿ ಮಾನಿಲ್ ಅಯ್ಯಪ್ಪ ಮತ್ತು ಬೋಟೆಕಾರ ಅಯ್ಯಪ್ಪ ಕೃಪೆ ತೋರುತ್ತಿದೆ. ಹಿಂದಿನಿಂದಲೂ ಸಾಕು ಪ್ರಾಣಿಗಳಾದ ನಾಯಿ, ಜಾನುವಾರು, ಹಂದಿ, ಕೋಳಿ ಇಂತವುಗಳನ್ನು ಕಾಪಾಡುತ್ತಾ ಬರುತ್ತಿದೆ. ಪ್ರಾಣಿಗಳಿಗೆ ರೋಗ ರುಜಿನ ಹೆಚ್ಚಾದಾಗ, ಕಾಣೆಯಾದಾಗ ಹರಕೆ ಮಾಡಿಕೊಂಡು, ಮಣ್ಣಿನ ರೂಪದ ನಾಯಿಯನ್ನು ಇಲ್ಲಿ ಅರ್ಪಣೆ ಮಾಡಲಾಗುತ್ತದೆ. ಅರಣ್ಯದಲ್ಲಿ ಬಿಸಿಲು, ಮಳೆ, ಗಾಳಿಯೊಂದಿಗೆ ನೆಲೆಸಿರುವ ದೈವ ಕೂಡ ಮಣ್ಣಿನ ರೂಪದ ಹರಕೆ ಸ್ವೀಕರಿಸುತ್ತದೆ.
ತಕ್ಕನ ಜವಬ್ದಾರಿ
ಅಯ್ಯಪ್ಪನ ವಾಹನ ಕುದುರೆಯನ್ನು ಬೊಟ್ಟ ಕುರುಬರು ಬೆತ್ತದಲ್ಲಿ ತಯ್ಯರಿಸಿ ಆಚರಣೆಗೆ ಸಹಕಾರ ನೀಡುತ್ತಾರೆ. ಬೊಟ್ಟ ಕುರುಬರಿಗೆ ಕುದುರೆ ತಕ್ಕನ ಸ್ಥಾನ, ಅಮ್ಮಕೊಡವ ಜನಾಂಗದ ಬಲ್ಯಂಡ ಕುಟುಂಬ ಭಂಡಾರ ತಕ್ಕರಾಗಿ, ಅಪಟ್ಟೀರ ಕುಟುಂಬ ದೇವ ತಕ್ಕರಾಗಿ, ಸಣ್ಣುವಂಡ ಕುಟುಂಬ ಊರ್‌ತಕ್ಕರಾಗಿ ದೇವರ ಆಚರಣೆ ಮಾಡುತ್ತಾರೆ.
ಹುಲಿ, ಜೇನು ಪ್ರತ್ಯಕ್ಷ
ಹಬ್ಬ ಆಚರಿಸದೆ ಕಡೆಗಣಿಸಿದ ಕಾಲದಲ್ಲಿ ಹುಲಿ, ಜೇನು ಪ್ರತ್ಯಕ್ಷಗೊಂಡು ಗ್ರಾಮಸ್ಥರನ್ನು ಎಚ್ಚರಿಸಿದೆ ಎಂಬ ನಂಬಿಕೆ ಸ್ಥಳಿಯರಲ್ಲಿದೆ. ೪೦ ವರ್ಷದ ಹಿಂದೆ ಕಾರಣಾಂತರದಿಂದ ಬೋಡ್ ನಮ್ಮೆ ಆಚರಣೆ ಸ್ಥಗಿತಗೊಂಡಿತ್ತು. ಈ ಸಮಯದಲ್ಲಿ ಮಾಯಮುಡಿ ಗ್ರಾಮದ ಅಂಬಲದಲ್ಲಿ ಹುಲಿ ಕಾಣಿಸಿಕೊಂಡಿತ್ತು. ಹೆಜ್ಜೇನು ಕೂಡ ಹೆಚ್ಚಾಗಿ ಕಾಣಿಸಿಕೊಂಡು ಭಯ ಮೂಡಿಸಿತ್ತು. ನಂತರದ ವರ್ಷಗಳಲ್ಲಿ ಹಬ್ಬ ಆಚರಣೆ ನಡೆಯುತ್ತಾ ಬರುತ್ತಿದೆ.
ವರ್ಷಕೊಮ್ಮೆ ಪೂಜೆ
ಹಬ್ಬದ ಹಿನ್ನೆಲೆ ಇರುವುದರಿಂದ ವರ್ಷಕೊಮ್ಮೆ ಇಲ್ಲಿ ಐದು ದಿನ ಪೂಜೆ ನಡೆಸಲಾಗುತ್ತದೆ. ಹಬ್ಬ ಆಚರಣೆಯ ಭಕ್ತರು ಇಲ್ಲಿ ಪಾಲ್ಗೊಳ್ಳುತ್ತಾರೆ. ಹಾಲು, ಹಣ್ಣು ನೀಡಲಾಗುತ್ತದೆ. ಹಿಂದೆ ದಟ್ಟ ಕಾಡು, ನೀರು, ಜಿಗಣೆ ಹೆಚ್ಚಿದ್ದ ಕಾರಣ ನಡೆಯುತ್ತಿದ್ದ ವಾರ್ಷಿಕ ಪೂಜೆ ಮುಂದುವರಿದಿದೆ. ಪುತ್ತರಿಗೆ ಕದಿರು ಹಾಕುವ ಆಚರಣೆ ಮಾಡಲಾಗುತ್ತಿದೆ.
ಗ್ರಾಮ ಆಳುವ ದೈವ
ಮಾಯಮುಡಿ ಬೋಡ್‌ನಮ್ಮೆ ಆಚರಣೆಗೆ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ೧೯೯೫ ರಿಂದ ಗ್ರಾಮದ ಅಭಿವೃದ್ದಿಯಲ್ಲಿಯೂ ೨ ದಶಕಗಳಿಂದ ತೊಡಗಿಕೊಂಡಿದೆ. ನಿರಂತರ ಚಟುವಟಿಕೆ, ಬೇರೆ ಬೇರೆ ಹಬ್ಬಗಳ ಆಚರಣೆ, ಗ್ರಾಮದ ಸಮಸ್ಯೆ ಪರಿಹಾರಕ್ಕೆ ಹೋರಾಟ ನಡೆಸುತ್ತಿದೆ. ೧೯೯೭ ರಲ್ಲಿ ಮಾನಿಲ್ ಅಯ್ಯಪ್ಪ ಹೆಸರಿನಲ್ಲಿ ಯುವಕ ಸಂಘ ಅಸ್ತಿತ್ವಕ್ಕೆ ತಂದು ರಾಷ್ಟ್ರೀಯ ಹಬ್ಬಗಳ ಆಚರಣೆ, ಯುವ ಸಮೂಹದ ಚಟುವಟಿಕೆ ಕಾರ್ಯ ನಡೆಸುತ್ತಿದೆ. ಕ್ರೀಡಾಕೂಟ, ಹಬ್ಬ, ಆಚರಣೆ ಒಂದಾಗಿ ನಡೆಸುವಂತಾಗಿದೆ. ಗ್ರಾಮದ ಮುಖ್ಯ ರಸ್ತೆ ಅಭಿವೃದ್ಧಿ, ಚರಂಡಿ, ಮೂಲಭೂತ ಸೌಕರ್ಯ ಪಡೆಯುವಲ್ಲಿ ಸಫಲವಾಗಿದೆ. ದೇವರ ಹೆಸರಿನ ಸಂಘ ಗ್ರಾಮವನ್ನು ಆಳುವಷ್ಟು ಕೃಪೆ ತೋರಿದೆ. ಮಾನಿಲ್ ಅಯ್ಯಪ್ಪ ಭಯ, ಭಕ್ತಿ ಹೆಚ್ಚಿಸಿದೆ. ಆಡಳಿತ ವ್ಯವಸ್ಥೆಯಲ್ಲೂ ಸ್ಪಂದನೆ ಇದೆ.
**
ಧಾರ್ಮಿಕ ಹಿನ್ನೆಲೆಗೆ ಧಕ್ಕೆಯಾಗದಂತೆ ಪೂಜೆ, ಹಬ್ಬ ಆಚರಿಸಲಾಗುತ್ತಿದೆ. ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಮೂಲಕ ಗ್ರಾಮಸ್ಥರು ದೇವರ ಆಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಗ್ರಾಮದ ಅಭಿವೃದ್ದಿಗೂ ಕೃಪೆ ತೋರುತ್ತಿದೆ. ಹಬ್ಬದ ರೂಪದಲ್ಲಿ ಗ್ರಾಮಸ್ಥರನ್ನು ಒಂದಾಗಿಸುತ್ತಿದೆ. ಸಣ್ಣುವಂಡ ವಿನು ವಿಶ್ವನಾಥ್, ಅಧ್ಯಕ್ಷರು, ಮಾನಿಲ್ ಅಯ್ಯಪ್ಪ ಸೇವಾ ಸಮಿತಿ, ಮಾಯಮುಡಿ.