ನ್ಯಾನೋ ಯೂರಿಯ ಗೊಬ್ಬರ ಬಳಸಿ

16 gkp 01
Published on

ಸಣ್ಣುವಂಡ ಕಿಶೋರ್ ನಾಚಪ್ಪ ಗೋಣಿಕೊಪ್ಪ
ನ್ಯಾನೋ ಯೂರಿಯ ಗೊಬ್ಬರ ಬಳಕೆಗೆ ಕೃಷಿಕರು, ಬೆಳೆಗಾರರು ಮುಂದಾಗಬೇಕೆಂದು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.

ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ರಾಜ್ಯದ ನಂಬರ್ ೧ ಕನ್ನಡ ದಿನಪತ್ರಿಕೆ ವಿಜಯವಾಣಿ ಆಯೋಜಿಸಿದ್ದ ಸಂವಾದದಲ್ಲಿ ಕೃಷಿಕರಿಗೆ ಸೂಕ್ತ ಮಾರ್ಗದರ್ಶನ ನೀಡಿದರು.

ಪ್ರಸ್ತುತ ಮಳೆ ಬಿಡುವು ನೀಡಿರುವುದರಿಂದ ಯೂರಿಯ ಗೊಬ್ಬರ ಕೂಡ ಗಿಡಕ್ಕೆ ಬೇಕಾಗಿದೆ. ಮಾರುಕಟ್ಟೆಯಲ್ಲಿ ಗೊಬ್ಬರದ ಕೊರತೆ ಎದುರಾದಲ್ಲಿ ನ್ಯಾನೋ ತಂತ್ರಜ್ಞಾನದ (ದ್ರವ ರೂಪ) ಯೂರಿಯ ಸಿಂಪಡಣೆಗೆ ಮುಂದಾಗಬಹುದೆಂದು ಸಲಹೆ ನೀಡಿದರು. ನೇರವಾಗಿ ಗಿಡಕ್ಕೆ ಗೊಬ್ಬರ ದೊರೆಯುವುದರಿಂದ ಬೆಳವಣಿಗೆ ಕೂಡ ವೇಗವಾಗಿ ನಡೆಯುತ್ತದೆ. ಸಣ್ಣ ಪ್ರಮಾಣದಲ್ಲಿ ಗೊಬ್ಬರ ನೀಡಬೇಕಿದೆ ಎಂದು ಕೆವಿಕೆ ಸಸ್ಯ ಸಂರಕ್ಷಣಾ ತಜ್ಷ ಡಾ.ಕೆ.ವಿ. ವೀರೇಂದ್ರ ಕುಮಾರ್ ಹೇಳಿದರು.

೨ನೇ ಹಂತದ ಗೊಬ್ಬರ ನೀಡಲು ಸೆಪ್ಟೆಂಬರ್ ಕೊನೆಯವರೆಗೂ ಮುಂದೂಡುವುದು ಉತ್ತಮ. ಸೆಪ್ಟೆಂಬರ್ ಕೊನೆಯವರೆಗೂ ಮುಂಗಾರು ಸಮಯವಾಗಿರು ವುದರಿಂದ ಯೂರಿಯ ನೀಡಬಹುದು. ನೆಲಕ್ಕೆ ನೇರವಾಗಿ ಹಾಕುವವರು ಯೂರಿಯ ಬದಲು ೨ ಚೀಲ ಅಮೋನಿಯಂ ಸಲ್ಫೇಟ್ ಅನ್ನು ೧ ಎಕರೆ ಕಾಫಿ ತೋಟಕ್ಕೆ ನೀಡಬಹುದು. ಇದು ಕೂಡ ಪ್ರಯೋಜನೆಕ್ಕೆ ಬರಲಿದೆ ಎಂದು ತೋಟಗಾರಿಕೆ ಬೆಳೆ ವಿಷಯ ತಜ್ಞ ಡಾ.ಬಿ. ಪ್ರಭಾಕರ್ ಹೇಳಿದರು.

ನ್ಯಾನೋ ಯೂರಿಯ ಬಳಕೆ
ಅರ್ಧ ಲೀಟರ್ ನ್ಯಾನೋ ಯೂರಿಯಾವನ್ನು ೨೦೦ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕಿದೆ. ೧ ಎಕರೆಗೆ ಸುಮಾರು ೬೦೦ ಲೀಟರ್ ನೀರಿ ಗೆ ೧.೫ ಲೀಟರ್ ಯೂರಿಯ ಬಳಕೆ ಮಾಡಬೇಕಿದೆ. ಗಿಡಗಳು ಬೆಳಗ್ಗಿನ ಹೊತ್ತು ಹೆಚ್ಚು ಸಕ್ರಿಯವಾಗಿರುವುದರಿಂದ ಸಿಂಪಡಣೆ ಒಳ್ಳೆಯದು. ಗಿಡದ ಎಲೆಗಳಿಗೆ ತಾಗುವಂತೆ ಸಿಂಪಡಣೆ ಮಾಡಬೇಕಿದೆ. ನೆಲಕ್ಕೆ ಹಾಕುವ ಗೊಬ್ಬರಕ್ಕಿಂತ ಶೇ.೮೦ ರಷ್ಟು ಪೋಷಕಾಂಶ ಗಿಡಕ್ಕೆ ವೇಗವಾಗಿ ದೊರೆಯುವುದರಿಂದ ಹೆಚ್ಚು ಲಾಭಕರ. ಬಿಸಿಲಿಗೆ ಆವಿಯಾಗುವುದು, ನೀರಿನಲ್ಲಿ ಕೊಚ್ಚಿ ಹೋಗುವ ಗೊಬ್ಬರದ ನಷ್ಟದ ಪ್ರಮಾಣವನ್ನು ಸಿಂಪಡಣೆ ಮೂಲಕ ಉಳಿಸಬಹುದೆಂದರು.

ಕಾಫಿ ಬೆಳೆಗೆ
ಕಾಫಿ ಬೆಳೆಗೆ ಪ್ರಸ್ತುತ ಪೋಶಕಾಂಶ ಮತ್ತು ರೋಗ ನಿಯಂತ್ರಣಕ್ಕೆ ಬೇಕಾದ ಮುಂಜಾಗೃತ ಕ್ರಮ ಅಳವಡಿಸಿಕೊಳ್ಳಬೇಕಿದೆ. ೧ ಕೆ.ಜಿ. ೧೯ ಅನುಪಾತದ ಪೋಶಕಾಂಶದೊಂದಿಗೆ ೦.೫ ಕೆ.ಜಿ. ಜಿಂಕ್ ಸಲ್ಪಟ್, ೨೫೦ ಗ್ರಾಂ ಮೆಗ್ನಿಯಂ ಸಲ್ಫೆಟ್, ೧೦೦ ಗ್ರಾಂ ಬೋರಿಕ್ ಆಸಿಡ್, ೫೦ ಗ್ರಾಂ ಅಮೋನಿಯಂ ಮೊಲೈಬ್ಡೆಟ್, ೫೦ ಎಂ. ಎಲ್. ಪ್ಲಾಸೊಫಿಕ್ಸ್, ೭೦ ಎಂ. ಎಲ್. ವೆಟ್ಟಿಂಗ್ ಎಜೆಂಟ್ ೨೦೦ ಲೀಟರ್ ನೀರಿನೊಂದಿಗೆ ಸಿಂಪಡಣೆ ಮಾಡಬೇಕಿದೆ ಎಂದು ಕೆವಿಕೆ ಪ್ರಭಾರ ಮುಖ್ಯಸ್ಥ ಡಾ.ಕೆ.ಎ. ದೇವಯ್ಯ ತಿಳಿಸಿದರು.

ಮುಂಜಾಗೃತೆ
ಯೂರಿಯ ಸಿಂಪಡಣೆ ಮಾಡುವವರು ಮೊದಲು ಸಿಂಡಪಣೆ ಯಂತ್ರದ ಪೈಪ್, ಟ್ಯಾಂಕ್ ಅನ್ನು ಸೋಪು ಬಳಸಿ ತೊಳೆಯುವುದು ಉತ್ತಮ. ಬೇರೆ ರೀತಿಯ ಕಳೆ ನಾಶಕ ಬಳಸಿದ್ದರೆ ಗಿಡವನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಗೊಬ್ಬರ ಸಿಂಪಡಣೆ ಮತ್ತು ಕಳೆ ನಾಶಕ ಸಿಂಪಡಣೆ ಬಗ್ಗೆ ಹೆಚ್ಚು ಕಾಳಜಿ ವಸಿಕೊಂಡು ಮುಂದುವರಿಯಬೇಕು ಎಂಬ ಸಲಹೆ ವ್ಯಕ್ತವಾಯಿತು.

ಕೊಳೆ ರೋಗ ಮುಕ್ತಿ
ಕಾಫಿ, ಕರಿಮೆಣಸು, ಅಡಕೆ, ಶುಂಟಿ ಬೆಳೆ ಬಿಸಿಲಿಗೆ ಕೊಳೆ ರೋಗ ಉಲ್ಭಣಗೊಳ್ಳುವ ಸಾಧ್ಯತೆ ಹೆಚ್ಚಿರುವುದರಿಂದ ಬೆಳೆಗಾರರು ಸೂಕ್ತ ತಯಾರಿ ಮಾಡಿಕೊಳ್ಳಬೇಕಿದೆ. ಕರಿಮೆಣಸಿಗೆ ನೀರಿನಲ್ಲಿ ಕರಗುವ ೧೯ ಅನುಪಾತದ ದ್ರವ ರೂಪದ ಗೊಬ್ಬರ, ೧ ಕೆ.ಜಿ. ಪೆಪ್ಪರ್ ಸ್ಪೆಷಲ್, ೨೦೦ ಲೀಟರ್‌ನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕೆಂದರು.

ಭತ್ತ ನಾಟಿ ಸಂದರ್ಭ ಭೂಮಿಗೆ ನೆರವಾಗಿ ಹಾಕುವ ಗೊಬ್ಬರ ಬಳಕೆ ಮಾಡುವುದು ಸೂಕ್ತ. ಈಗ ನ್ಯಾನೊ ಯೂರಿಯಾ ಸಿಂಡಪಣೆ ಮಾಡಬೇಕಿದೆ. ಅಡಕೆಗೆ ಬೋಡೋ ದ್ರಾವಣ, ೩-೫ ಎಂ.ಎಲ್ ಬಯೋಫೈಟ್ ಅನ್ನು ೨೦೦ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕಿದೆ. ಶುಂಟಿಗೆ ಜಿಂಜರ್ ಸ್ಪೆಷಲ್ ಅನ್ನು ೧೯ ಅನುಪಾತದ ಗೊಬ್ಬರ ನೀಡಬಹುದೆಂದು ಸಲಹೆ ನೀಡಿದರು.

**
ಪ್ರಸ್ತುತ ಕಾಫಿ ಬೆಳೆಗೆ ಯೂರಿಯ ಗೊಬ್ಬರ ನೀಡುವುದು ಸೂಕ್ತ. ನೆಲಕ್ಕೆ ಹಾಕುವ ಯೂರಿಯ ಲಭ್ಯವಿದ್ದಲ್ಲಿ ಎಕರೆಗೆ ೧ ಚೀಲ (೫೦ ಕೆ.ಜಿ) ನೀಡಬಹುದು. ನ್ಯಾನೋ ಯೂರಿಯಾ ಸಿಂಪಡಣೆ ರೂಪದಲ್ಲಿ ನೀಡಲು ಮುಂದಾಗಬೇಕಿದೆ. ಮಳೆಯಿಂದ ಗೊಬ್ಬರ ಹಾಕಲು ಆಗದವರು ಅವಶ್ಯಕತೆಗೆ ತಕ್ಕಂತೆ ರಂಜಕ, ಪೊಟಾಷ್ ನೀಡಬಹುದು. ಡಾ. ಕೆ. ಎ. ದೇವಯ್ಯ, ಪ್ರಭಾರ ಮುಖ್ಯಸ್ಥರು, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ.

**
ನೆಲಕ್ಕೆ ಹಾಕುವ ಯೂರಿಯ ಗೊಬ್ಬರ ದೊರೆಯದಿದ್ದಲ್ಲಿ ನ್ಯಾನೋ ಯೂರಿಯ ಬಳಕೆಗೆ ಮುಂದಾಗಬೇಕು. ವೇಗವಾಗಿ ಗಿಡ ಎಳೆಯುವುದ ರಿಂದ ಗಿಡಕ್ಕೂ ಕೂಡ ಪ್ರಯೋಜನಕ್ಕೆ ಬರುತ್ತದೆ. ಲಾಭ ಕೂಡ ಹೆಚ್ಚಿದೆ. ಬಿಸಿಲು ಬಂದಿರುವುದರಿಂದ ಕಾಫಿ, ಕರಿಮೆಣಸು, ಶುಂಟಿ ಬೆಳೆಗಳಿಗೆ ಕೊಳೆ ರೋಗ ಹರಡಬಹುದು. ಡಾ.ಬಿ. ಪ್ರಭಾಕರ್, ತೋಟಗಾರಿಕೆ ಬೆಳೆ ವಿಷಯ ತಜ್ಞರು, ಕೆವಿಕೆ, ಗೋಣಿಕೊಪ್ಪ.

**
ಮಳೆ ನಿಂತಿರುವುದರಿಂದ ಕೊಳೆ ರೋಗ ನಿಯಂತ್ರಣಕ್ಕೂ ಸಿಂಪಡಣೆ ಮಾರ್ಗ ಕಂಡುಕೊಳ್ಳಬೇಕಿದೆ. ಪೋಶಕಾಂಶವನ್ನು ಗಿಡಕ್ಕೆ ವೇಗವಾಗಿ ದೊರೆಯಲು ಸಿಂಪಡಣೆ ಮಾರ್ಗ ಉತ್ತಮ. ದ್ರವ ರೂಪದ ಯೂರಿಯಾ ಜತೆ ಅಂಟು ದ್ರಾವಣ ಸೇರಿಸಿ, ಪ್ರೊಪ್ರೆಕೊನೊಜೆಲ್ ಶಿಲೀಂಧ್ರ ನಾಶಕವಾಗಿ ನೀಡಬಹುದು. ಇದರಿಂದ ಪೋಶಕಾಂಶದ ಜತೆ, ರೋಗ ನಿಯಂತ್ರಿಸಲು ಅವಕಾಶವಿದೆ. ಡಾ. ಕೆ.ವಿ. ವೀರೇಂದ್ರಕುಮಾರ್, ಸಸ್ಯ ಸಂರಕ್ಷಣಾ ತಜ್ಷರು, ಕೆವಿಕೆ, ಗೋಣಿಕೊಪ್ಪ.

**
ಆಗಸ್ಟ್ ೨೨ ರವರೆಗೂ ಮಳೆ ಮುನ್ಸೂಚನೆ ಇಲ್ಲ. ಒಂದೊಂದು ಕಡೆ ೧೦-೨೦ ಸೆಂಟ್ಸ್‌ಮಳೆ ಬೀಳಬಹುದು. ಇದು ಬೆಳೆಗಳಿಗೆ ಸಿಂಪಡಣೆಗೆ ಸೂಕ್ತ ಕಾಲ. ನ್ಯಾನೋ ತಮತ್ರಜ್ಞಾನದ ಯೂರಿಯ ಸಿಂಪಡಿಸಿ ೨ ಗಂಟೆ ಕಾಲ ಮಳೆ ಬೀಳಬಾರದು. ಇದಕ್ಕೆ ಪೂರಕ ಸಿದ್ಧತೆ ಮಾಡಿಕೊಂಡು ಸಿಂಪಡಣೆ ಮಾಡಬಹುದು. ಉಳಿದಂತೆ ಕಾಫಿ, ಅಡಿಕೆ, ಶುಂಟಿ ಬೆಳೆಗೂ ಕೊಳೆ ರೋಗ ಕಾಡಿದರೆ, ಔಷಧ ಸಿಂಪಡಣೆಗೂ ಮುಂದಿನ ೬ ದಿನ ಗಳು ಪೂರಕವಾಗಿದೆ. ಡಾ.ಎಂ.ಎನ್. ಹರೀಶ್, ತಜ್ಞರು, ಕೃಷಿ ಹವಾಮಾನ ಘಟಕ, ಕೆವಿಕೆ, ಗೋಣಿಕೊಪ್ಪ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net