

ಗೋಣಿಕೊಪ್ಪ: ಇಲ್ಲಿನ ಕಾವೇರಿ ಕಾಲೇಜು ಆವರಣದಲ್ಲಿರುವ ಫೀ.ಮಾ.ಕೊಡಂದೇರ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಜೋಡಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಫೀ.ಮಾ.ಕೆ.ಎಂ.ಕಾರ್ಯಪ್ಪ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಫೀ.ಮಾ.ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಸೇನಾಧಿಕಾರಿಗಳು, ಎನ್‌ಸಿಸಿ ಕೆಡೆಟ್‌ಗಳು, ಅಧಿಕಾರಿಗಳು, ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಂಡು ಕಾರ್ಯಪ್ಪ ಅವರನ್ನು ಸ್ಮರಿಸಿದರು. ಕಾರ್ಯಪ್ಪ ಅವರ ಶ್ರದ್ಧೆ, ಬದ್ಧತೆ, ದೇಶಪ್ರೇಮ, ಸಮಯಪ್ರಜ್ಞೆ ಯುವ ಸಮೂಹ ಮೈಗೂಡಿಸಿಕೊಳ್ಳಬೇಕು ಎಂದು ಸಂದೇಶ ಸಾರಲಾಯಿತು.
ನಿವೃತ್ತ ಸೇನಾಧಿಕಾರಿ ಮೇ.ಜ.ಕುಪ್ಪಂಡ ನಂಜಪ್ಪ ಅವರು ಜೋಡಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ಫೀ. ಮಾ. ಕಾರ್ಯಪ್ಪ ಫೋರಂ ಉಪಾಧ್ಯಕ್ಷ ಮಾಚಿಮಾಡ ರವೀಂದ್ರ, ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಚೆರಿಯಪಂಡ ಉತ್ತಪ್ಪ, ಪ್ರಾಂಶುಪಾಲರಾದ ಕೆ.ವಿ.ಕುಸುಮಾಧರ್, ಸಣ್ಣುವಂಡ ಎಸ್.ಮಾದಯ್ಯ, ಕೊಡಂದೇರ ಕುಟುಂಬ ಅಧ್ಯಕ್ಷ ಕೊಡಂದೇರ ಸುಬ್ಬಯ್ಯ, ಪ್ರಮುಖರಾದ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಕಳ್ಳಿಚಂಡ ರಾಬಿನ್, ಚೆಕ್ಕೇರ ಮನು ಕಾವೇರಪ್ಪ, ಅನೀಶ್ ಮಾದಪ್ಪ, ಕೊಣಿಯಂಡ ಬೋಜಮ್ಮ, ಕೊಂಗಂಡ ನಂಜಪ್ಪ, ಗಣಪತಿ ಪಾಲ್ಗೊಂಡು ನಮನ ಸಲ್ಲಿಸಿದರು.
ನಂತರ ನಿವೃತ್ತ ಸೇನಾಧಿಕಾರಿ ಮೇ.ಜ.ಕುಪ್ಪಂಡ ನಂಜಪ್ಪ ಮಾತನಾಡಿ, ದೇಶದಲ್ಲಿ ಎನ್‌ಸಿಸಿ ಕೆಡೆಟ್‌ಗಳು ಶಿಸ್ತನ್ನು ರೂಢಿಸಿಕೊಳ್ಳುವ ಮೂಲಕ ಸೈನಿಕರಾಗಿ ಹೊರಹೊಮ್ಮಬೇಕು. ಭೂಸೇನೆ, ವಾಯುಸೇನೆ, ನೌಕಾಪಡೆಗಳಲ್ಲಿ ಸಾಕಷ್ಟು ಅವಕಾಶಗಳಿವೆ. ಸೇನೆಯನ್ನು ಮುನ್ನಡೆಸಲು ಹಿಂದಿ ಜತೆಗೆ ಇಂಗ್ಲಿಷ್ ಭಾಷೆ ಬಹಳ ಮುಖ್ಯ. ಧನಾತ್ಮಕ ಚಿಂತನೆಯೊಂದಿಗೆ ಯುವಕರು ಸೇನೆಗೆ ಸೇರಲು ಮುಂದಾಗಬೇಕು. ಈ ವಿಷಯದಲ್ಲಿ ಕೆ.ಎಂ.ಕಾರ್ಯಪ್ಪ ಎಲ್ಲರಿಗೂ ಮಾದರಿ ಎಂದರು.