

ಸಣ್ಣುವಂಡ ಕಿಶೋರ್ ನಾಚಪ್ಪ ಗೋಣಿಕೊಪ್ಪ
ಅರ‌್ವತೊಕ್ಲು ಗ್ರಾಮದ ೩ನೇ ವಿಭಾಗದಲ್ಲಿನ ನಿವಾಸಿಗಳು ಕಂದಾಯ ಇಲಾಖೆ ನಿರ್ಲಕ್ಷ್ಯದಿಂದ ಸರ್ಕಾರದ ಯೋಜನೆಗಳ ಸವಲತ್ತು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಂದಷ್ಟು ರಸ್ತೆ ಅಭಿವೃದ್ದಿ, ಸೋಲಾರ್ ದೀಪ, ಆಟದ ಮೈದಾನ ರಕ್ಷಣೆಗೆ ಯೋಜನೆ ರೂಪಿಸಬೇಕೆಂದು ಸ್ಥಳೀಯರು ಹೇಳುತ್ತಾರೆ.
ಕನ್ನಡದ ನಂಬರ್ ೧ ದಿನಪತ್ರಿಕೆ ವಿಜಯವಾಣಿ ಆಯೋಜಿಸಿದ್ದ ಕ್ಷೇತ್ರ ಸಂಚಾರದಲ್ಲಿ ೩ನೇ ವಿಭಾಗದ ನಿವಾಸಿಗಳು ಎದುರಿಸುತ್ತಿರುವ ಕುಂದುಕೊರತೆ ತೆರೆದಿಟ್ಟರು. ಕ್ಷೇತ್ರ ವ್ಯಾಪ್ತಿಯಲ್ಲಿ ಆಗಬೇಕಾಗಿರುವ ಕೆಲಸ ಕಾರ್ಯಗಳ ಬಗ್ಗೆ ಬೆಳಕು ಚೆಲ್ಲಿದರು. ತಮ್ಮ ಇತಿಮಿತಿ ಒಳಗೆ ಸ್ಥಳೀಯ ಜನಪ್ರತಿನಿಧಿಗಳು ಸ್ಪಂದಿಸುವ ಕೆಲಸ ಮಾಡುತ್ತಿರುವುದು ಗಮನಕ್ಕೆ ಬಂದಿದೆ.
ಕಾಡಾನೆಗಳು ಮಳೆಗಾಲದಲ್ಲಿ ಹೆಚ್ಚು ಕಾಡುತ್ತವೆ. ಆನೆ ತುಳಿತಕ್ಕೆ ವರ್ಷದ ಹಿಂದೆ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ. ೧೫ ವರ್ಷ ಗಳಿಂದ ಸಮಸ್ಯೆ ಹೆಚ್ಚಾಗಿದೆ. ಅಡಕೆ, ತೆಂಗಿನ ಮರ ನಾಶ ಮಾಡುತ್ತಿವೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ತಿತಿಮತಿ, ಮಾಯಮುಡಿ, ಬಾಳಾಜಿ ಗ್ರಾಮಗಳ ಮೂಲಕ ಇಲ್ಲಿಗೆ ಕಾಡಾನೆಗಳು ಲಗ್ಗೆ ಇಡುತ್ತವೆ. ಗೋಣಿಕೊಪ್ಪ-ಪೊನ್ನಂಪೇಟೆ ಮುಖ್ಯರಸ್ತೆ ದಾಟಿ ಸಾಗುವ ಆನೆಗಳ ನಿಯಂತ್ರಣಕ್ಕೆ ಕೀರೆ ಹೊಳೆ, ಕಾರೆಕಾಡ್ ವ್ಯಾಪ್ತಿಯಲ್ಲಿ ಸೋಲಾರ್ ಬೇಲಿ ಹಾಕುವುದರಿಂದ ಪ್ರಯೋಜನ ವಾಗಲಿದೆ. ಕಳೆದ ವರ್ಷ ಹುಲಿ, ಹಸು ಕೊಂದು ಹಾಕಿದೆ.
ಪಬ್ಲಿಕ್ ಹೌಸಿಂಗ್ ಸ್ಕೀಂ ಕಾಲನಿಯಲ್ಲಿ ಒಳಚರಂಡಿ ವ್ಯವಸ್ಥೆ ಆಗಬೇಕಿದೆ. ನೀರು ಹರಿಯಲು ಜಾಗ ಇಲ್ಲದ ಕಾರಣ ಅರ‌್ವತೊಕ್ಲು ಗ್ರಾಮ ಪಂಚಾಯಿತಿ ಮನೆ, ಮನೆಗಳಿಗೆ ಇಂಗು ಗುಂಡಿ ಯೋಜನೆ ರೂಪಿಸಿದೆ. ಆದರೆ, ಇದರ ಪ್ರಯೋಜನ ಎಲ್ಲರಿಗೂ ಸಿಕ್ಕಿಲ್ಲ.
ಗ್ರಾಮ ಪಂಚಾಯಿತಿ ವೈಯಕ್ತಿಕ ಯೋಜನೆಗಳನ್ನು ನೀಡಲು ಯೋಜನೆ ರೂಪಿಸಿದ್ದರೂ, ಕಂದಾಯ ಇಲಾಖೆಯ ಎಡವಟ್ಟುಗಳು ವೃದ್ದಾಪ್ಯ ವೇತನ ಸೇರಿದಂತೆ ಸಾಕಷ್ಟು ಯೋಜನೆ ಸಿಗಲು ಸಮಸ್ಯೆಯಾಗುತ್ತಿದೆ. ಇದನ್ನು ಯಾರ ಬಳಿ ಹೇಳಿಕೊಳ್ಳಬೇಕೆಂದು ತಿಳಿಯದೆ ನಿವಾಸಿಗಳು ಪರದಾಡುತ್ತಿದ್ದಾರೆ.
ಅನುಗ್ರಹ ಯುವಕ ಸಂಘದ ಕಟ್ಟಡ ಎದುರು ಇರುವ ಆಟದ ಮೈದಾನ ಯುವ ಸಮೂಹದ ಮಾನಸಿಕ ಮತ್ತು ದೈಹಿಕ ಸಾಮಥ್ಯ ಕಾಪಾಡಿಕೊಳ್ಳಲು ಇರುವ ಏಕೈಕ ಮೈದಾನವಾಗಿದೆ. ಈ ಮೈದಾನ ರಕ್ಷಿಸಲು ಗ್ರಾಮ ಪಂಚಾಯಿತಿ ವಿಶೇಷ ಯೋಜನೆ ರೂಪಿಸಬೇಕಾ ಗಿದೆ. ಕಾರೆಕಾಡು ಗಿರಿಜನ ಕಾಲನಿಗೆ ವಿದ್ಯುತ್ ನಿರಂತರವಾಗಿ ಕಲ್ಪಿಸಬೇಕಿದೆ. ಆನೆ ಹಾವಳಿ ಹೆಚ್ಚಿರುವ ಕಾರಣ ಗ್ರಾಮ ಪಂಚಾಯಿತಿ ಹೆಚ್ಚಿನ ವಿದ್ಯುತ್ ದೀಪ, ಗುಣಮಟ್ಟದ ಸೋಲಾರ್ ದೀಪ ಅಳವಡಿಸಬೇಕಿದೆ.
**
ಪಿಎಚ್‌ಎಸ್ ಕಾಲನಿ, ಕಾರೆಕಾಡ್ ಬಸವೇಶ್ವರ ದೇವಸ್ಥಾನ ರಸ್ತೆ, ಸ್ಮಶಾನ ಸಮೀಪದ ರಸ್ತೆಗಳು ಮತ್ತಷ್ಟು ಅಭಿವೃದ್ದಿಗೊಳಿಸಬೇಕಿದೆ. ಪಿಎಚ್‌ಎಸ್ ಕಾಲನಿ ಸಮೀಪ ನ್ಯಾಯಬೆಲೆ ಅಂಗಡಿಗೆ ಸರ್ಕಾರ ಅವಕಾಶ ನೀಡಿದರೆ ಸ್ಥಳಿಯರಿಗೆ ಹೆಚ್ಚು ಪ್ರಯೋಜನವಾಗುತ್ತದೆ. ಅಜ್ಜಿಕುಟ್ಟೀರ ಸಜನ್ ಚಂಗಪ್ಪ, ಗ್ರಾ. ಪಂ. ಸದಸ್ಯರು.
**
ಮನೆ ನಿವೇಶನಕ್ಕೆ ಸಾಕಷ್ಟು ಅರ್ಜಿ ಬಂದಿದೆ. ಅವರಿಗೆ ನಿವೇಶನ ಕಲ್ಪಿಸಲು ನಮ್ಮ ಭಾಗದ ಸದಸ್ಯರು ಒಂದಾಗಿ ಪ್ರಯತ್ನಿಸುತ್ತಿದ್ದೇವೆ. ಇದರಿಂದ ನಮಗೂ ಸ್ಪಂದಿಸಿದ ಕುಷಿ ದೊರೆಯಲಿದೆ. ಜಮ್ಮಡ ದಮಯಂತಿ ಕುಶಾಲಪ್ಪ, ಗ್ರಾಮ ಪಂಚಾಯಿತಿ ಸದಸ್ಯರು.
**
ಬೀದಿ ದೀಪ ಇದ್ದರೂ ರಾತ್ರಿ ಕಾಡಾನೆಗಳ ಚಲನವಲನ ಅರಿಯಲು ಸೋಲಾರ್ ದೀಪ ಕೂಡ ಹೆಚ್ಚು ಪ್ರಯೋಜನಕ್ಕೆ ಬರುತ್ತದೆ. ವಿದ್ಯುತ್ ಇಲ್ಲದ ಸಮಯದಲ್ಲಿ ಸೋಲಾರ್ ದೀಪ ಅವಶ್ಯ. ಶರಿಫಾ ಇಬ್ರಾಹಿಂ, ಗ್ರಾ. ಪಂ. ಸದಸ್ಯರು.
**
ಬಿಪಿಎಲ್ ಕಾರ್ಡ್ ಇದ್ದರೂ ಮೀಸಲಾತಿ ಇಲ್ಲದೆ ಶೌಚಗೃಹ ದುರಸ್ತಿಗೆ ಅನುದಾನ ದೊರೆಯುತ್ತಿಲ್ಲ. ಅತಿವೃಷ್ಟಿಯಿಂದ ಮನೆಯ ಒಂದು ಭಾಗ ಕುಸಿದರೂ ಸಂಪೂರ್ಣ ಹಾನಿಯಾಗಿಲ್ಲ ಎಂದು ಪರಿಹಾರ ಕೂಡ ನೀಡಿಲ್ಲ. ಸಾಮಾನ್ಯ ವರ್ಗಕ್ಕೂ ಸರ್ಕಾರದ ಸವಲತ್ತು ದೊರಯುವಂತಾಗಬೇಕು. ಕೆ.ಕೆ. ಸುಬ್ರಮಣಿ, ಪಿಎಚ್‌ಎಸ್ ಕಾಲನಿ ನಿವಾಸಿ.
**
ವೃದ್ದಾಪ್ಯ ವೇತನ ನೀಡಲು ಕಂದಾಯ ಇಲಾಖೆ ಕಾಳಜಿ ವಹಿಸುತ್ತಿಲ್ಲ. ೫ ಬಾರಿ ಅರ್ಜಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಯಾಕೆ
ಯೋಜನೆಯ ಸವಲತ್ತು ನೀಡುತ್ತಿಲ್ಲ ಎಂಬುದನ್ನು ತಿಳಿಸುತ್ತಿಲ್ಲ. ವಯಸ್ಸು ೮೦ ಆದರೂ, ಕಚೇರಿ ಅಲೆಯುವುದು ತಪ್ಪಿಲ್ಲ. ಪಿ. ಕೆ. ಕುಂಞಮ್ಮ, ಪಿಎಚ್‌ಎಸ್ ಕಾಲನಿ ನಿವಾಸಿ.
**
ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮನೆ, ಮನೆಗಳಿಗೆ ಪ್ರತ್ಯೇಕವಾಗಿ ಇಂಗು ಗುಂಡಿಗೆ ಅನುದಾನ ನೀಡಲಾಗುತ್ತಿದೆ. ಬಾಕಿ ಉಳಿದಿರುವ ಸಾಕಷ್ಟು ಮನೆಗಳಿಗೆ ಇಂಗು ಗುಂಡಿಗೆ ಅನುದಾನ ನೀಡಿದರೆ ನೈರ್ಮಲ್ಯ ಕಾಪಾಡಿಕೊಳ್ಳಲು ಅವಕಾಶವಿದೆ. ಪಿ. ಕೆ. ಶಾಹಿದಾ, ಪಿಎಚ್‌ಎಸ್ ಕಾಲನಿ ನಿವಾಸಿ.
**
ವಿದ್ಯುತ್ ಸಮಸ್ಯೆಯಿಂದ ಕಾಡಾನೆ ಭಯ ಹೆಚ್ಚಾಗುತ್ತಿದೆ. ಇರುವ ಬಾವಿಯಲ್ಲಿ ನೀರು ಬತ್ತುತ್ತಿದೆ. ಬೇಸಿಗೆಯಲ್ಲಿ ಕುಡಿಯುವ ನೀರು ಸಮಸ್ಯೆಯಾಗದಂತೆ ಗ್ರಾಮ ಪಂಚಾಯಿತಿ ನೋಡಿಕೊಳ್ಳಬೇಕಿದೆ. ಬೀದಿಯಲ್ಲಿರುವ ಸೋಲಾರ್ ದೀಪ ಉರಿಯುತ್ತಿಲ್ಲ. ಪಿ. ಬೊಳಚಿ, ಕಾರೆಕಾಡ್ ಗಿರಿಜನ ಕಾಲನಿ ನಿವಾಸಿ.
**
ಕಂದಾಯ ಇಲಾಖೆ ಬೇಜವಾಬ್ದಾರಿಯಿಂದ ಸಾಕಷ್ಟು ಜನರಿಗೆ ಸರ್ಕಾರದ ಯೋಜನೆ ಪಡೆದುಕೊಳ್ಳಲು ಕಂಠಕವಾಗುತ್ತಿದೆ. ಇಂದು, ನಾಳೆ ಎಂದು ಸತಾಯಿಸಲಾಗುತ್ತಿದೆ. ವೃದ್ದಾಪ್ಯ ವೇತನ, ಪ್ರಮಾಣಪತ್ರ ಪಡೆಯಲು ಜನರು ಇಲಾಕೆಗೆ ಅಲೆಯುವುದೇ ಕಾಯಕ ವಾಗಿದೆ. ಇದಕ್ಕೆ ವಿಶೇಷ ಶಿಬಿರ ನಡೆಸಲಿ. ನಾಯಮಾಡ ಕಂದಾ ದೇವಯ್ಯ, ಗ್ರಾಮಸ್ಥರು.