ಇತಿಹಾಸ, ಸಂಸ್ಕೃತಿ ಬಿಂಬಿಸುವ ಗೊಂಬೆಗಳ ಪ್ರದರ್ಶನ.

oplus_131072
oplus_131072
Published on

ಚನ್ನರಾಯಪಟ್ಟಣ : ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಭಾಗವಾಗಿ ನಡೆಯುವ ಶರನ್ನವರಾತ್ರಿಯಂದು ಗೊಂಬೆಗಳನ್ನು ಕೂರಿಸಿ ಮಕ್ಕಳನ್ನು, ನೆರೆಹೊರೆಯವರನ್ನು ಆಕರ್ಷಿಸಿ ಅವರ ಮನಸ್ಸಿಗೆ ಮುದ ನೀಡುವ ಉದ್ದೇಶದೊಂದಿಗೆ ಶರನ್ನವರಾತ್ರಿ ಉತ್ಸವದ ಮೊದಲ ದಿನ ಗೊಂಬೆಗಳನ್ನು ಪ್ರತಿಷ್ಠಾಪಿಸಿ ಪೂಜಿಸುವ ಪದ್ಧತಿ ನಾಡಿನೆಲ್ಲೆಡೆ ಇದ್ದು, ಪಟ್ಟಣದಲ್ಲಿನ ಸುಜಾತ ಕಾಫೀ ವರ್ಕ್ಸ್ ಮಾಲೀಕ ಕುಮಾರಸ್ವಾಮಿಯವರ ಮನೆಯಲ್ಲಿ ಸಾವಿರಾರು ವಿವಿಧ ಬಗೆಯ ಆತ್ಯಾಕರ್ಷಕ ಗೊಂಬೆಗಳನ್ನು ಕೂರಿಸಿ ಪೂಜೆ ಸಲ್ಲಿಸುತ್ತಿದ್ದಾರೆ.

ದೃಷ್ಟ ಶಕ್ತಿಗಳನ್ನು ಮಣಿಸಿ ಶಿಷ್ಟ ಶಕ್ತಿಯ ವಿಜಯದ ಸಂಕೇತವಾದ ವಿಜಯದಶಮಿ ಆಚರಣೆ ವೇಳೆ ಮೈಸೂರು ಅರಸರು ತಮ್ಮ ಅರಮನೆಯಲ್ಲಿ ಆರಂಭಿಸಿದ ಗೊಂಬೆ ಪ್ರತಿಷ್ಠಾಪನೆ ಪೂಜಾ ಮಹೋತ್ಸವ ಇಂದು ವಿಜಯದ ಸಂಕೇತವಾಗಿ ನಾಡಿನೆಲ್ಲೆಡೆ ಜನರು ತಮ್ಮ ಮನೆಗಳಲ್ಲಿ ವಿವಿಧ ರೀತಿಯ ಗೊಂಬೆಗಳನ್ನು ಕುರಿಸಿ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ಇದಕ್ಕೆ ಪೂರಕವಾಗಿ ಪಟ್ಟಣದಲ್ಲಿನ ಸುಜಾತ ಕಾಫೀ ವರ್ಕ್ಸ್ ಮಾಲೀಕರಾದ ಕುಮಾರಸ್ವಾಮಿಯವರ ಕುಟುಂಬ ಐದು ದಶಕಗಳಿಂದ ಗೊಂಬೆ ಕೂರಿಸಿ ಪೂಜಿಸುವ ಸಂಪ್ರದಾಯ ಬೆಳೆಸಿಕೊಂಡು ಬಂದಿದ್ದಾರೆ.

ತಮ್ಮ ಮನೆಯಲ್ಲಿ ಕೂರಿಸಿರುವ ಗೊಂಬೆಗಳ ಪೈಕಿ ಪಟ್ಟದ ಗೊಂಬೆಯನ್ನು ಪ್ರಧಾನವಾಗಿಸಿ ಮುಂದುವರಿದು ಮನಷ್ಯ ಬೆಳೆದ ಬಂದ ಹಾದಿಯ ಪ್ರತಿರೂಪದ ಗೊಂಬೆಗಳು, ದಶಾವತಾರ, ಕೃಷ್ಣ ಲೀಲೆಗಳು, ಕೃಷ್ಣನ ಹುಟ್ಟಿನ ವೃತ್ತಾಂತ, ಆಸ್ಥಾನ ಮಂಟಪದಲ್ಲಿ ಪಟ್ಟದ ಗೊಂಬೆಗಳು, ಅಕ್ಕಪಕ್ಕ ಮಂತ್ರಿಗಳು, ಸೇವಕರ ಗೊಂಬೆಗಳು, ರಾಜರಾಣಿಯರ ಧರಿಸು ತೊಟ್ಟ ಗೊಂಬೆಗಳು, ಕ್ರಿಕೆಟ್ ಆಟಗಾರರು, ಸ್ಕೂಲ್, ಉದ್ಯಾನವನ, ನಾಡಿನ, ದೇಶದ ಸಂಸ್ಕೃತಿಯ ಪ್ರತಿರೂಪಕಗಳು, ಕೈಯಿಂದ ತಯಾರಿಸಿದ ವಿವಿಧ ಮಾದರಿಯ ಗೊಂಬೆಗಳು ಹಾಗೂ ರಾಮಾಯಣ, ಮಹಾಭಾರತ, ಭಾಗವತ ಸೇರಿದಂತೆ ದೇವಾನು ದೇವತೆಗಳು, ಆರಮನೆ, ಕೈಲಾಸ, ವೈಕುಂಠ, ದೇವಲೋಕ ಸೇರಿ ನೂರಾರು ಮಾದರಿಯ ೫೦೦ಕ್ಕೂ ಹೆಚ್ಚು ವಿವಿಧ ಗೊಂಬೆಗಳನ್ನು ಕೂರಿಸುವ ಮೂಲಕ ಹಿರಿಯರಿಂದ ಹಿಡಿದು ಪುಟಾಣಿಗಳವರೆಗಿನ ಎಲ್ಲ ವಯೋಮಾನದ ಜರನ್ನು ಇವು ಆಕರ್ಷಿಸುತ್ತವೆ.

೯ದಿನಗಳು ಬೆಳಗ್ಗೆ ಮತ್ತು ಸಂಜೆ ಅಕ್ಕಪಕ್ಕದ ಮಕ್ಕಳನ್ನೂಡಗೂಡಿ, ಮುತ್ತೈದೆಯರನ್ನು ಆಹ್ವಾನಿಸಿ ಪೂಜೆ ಸಲ್ಲಿಸಿ ಬಾಗಿಣ ಅರ್ಪಿಸುವುದು ನಡೆದು ಬಂದ ಪದ್ಧತಿ, ೯ದಿನಗಳ ಪೂಜೆ ತರುವಾಯ ೧೦ನೇ ದಿವಸ ವಿಜಯದಶಮಿ ದಿನದಂದು ಹಬ್ಬದ ಸಂಭ್ರಮಚಾರಣೆಯೊಂದಿಗೆ ನೆರೆಹೊರೆಯವರನ್ನು ಕರೆದು ವಿಶೇಷ ಪೂಜೆ ಸಲ್ಲಿಸಿ ಸಿಹಿ ಹಂಚಿ ಗೊಂಬೆ ಉತ್ಸವಕ್ಕೆ ತೆರೆ ಎಳೆಯುತ್ತಾರೆ.

ಗೊಂಬೆಗಳ ಪ್ರತಿಷ್ಠಾಪನೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಕುಮಾರಸ್ವಾಮಿಯವರ ಸೊಸೆಯಂದಿರಾದ ಆಶಾ ಮತ್ತು ಕವಿತಾ ಮಾತನಾಡಿ, ದಸರಾ ಗೊಂಬೆ ಕೂರಿಸುವ ಪದ್ಧತಿಯನ್ನು ನಮ್ಮ ಪೂರ್ವಿಕರು ಆಚರಿಸಿಕೊಂಡು ಬಂದಿರುವ ಪದ್ಧತಿಯನ್ನು ನಾವು ಮುಂದುವರೆಸಿಕೊAಡು ಹೋಗುತ್ತಿದ್ದೇವೆ. ಗೊಂಬೆಗಳನ್ನು ಕೂರಿಸುವ ಸಲುವಾಗಿ ಕಳೆದೊಂದು ವಾರದಿಂದ ತಯಾರಿ ನಡೆಸಿದ್ದು, ಪಟ್ಟದ ಗೊಂಬೆಯನ್ನು ಪ್ರಮುಖವಾಗಿಟ್ಟು ಮುಂದುವರೆದು ಕೃಷ್ಣಲೀಲೆಗಳು, ಧಾರಾ ಮಂಟಪ, ಭೋಜನಾ ಶಾಲೆ, ಜಂಬೂಸವಾರಿ ಆರಮನೆ ಗೊಂಬೆಗಳನ್ನೆಲ್ಲಾ ಕೂರಿಸಲಾಗಿದೆ. ಹ್ಯಾಂಡ್ ಮೇಡ್ ಗೊಂಬೆಗಳೇ ಹೆಚ್ಚಾಗಿದ್ದು, ಚನ್ನಪಟ್ಟಣ, ಬೆಂಗಳೂರು, ಮೈಸೂರು ಸೇರಿ ಹಲವೆಡೆಗಳಿಂದ ಗೊಂಬೆಗಳನ್ನು ತಂದು ಕೂರಿಸಲಾಗಿದೆ. ಈ ಬಾರಿ ಹೊಸದಾಗಿ ನಮ್ಮ ಪೂರ್ವಜರು ಬಳಸುತ್ತಿದ್ದ ಕಬ್ಬಿಣ, ಹಿತ್ತಾಳೆ, ಬಳಪ ಕಲ್ಲಿನಿಂದ ಮಾಡಲಾದ ಪಾತ್ರೆಗಳನ್ನಿಟ್ಟು ಇಂದಿನ ಕಾಲಕ್ಕೂ ಪ್ರೋತ್ಸಾಹಿಸುವ ಕೆಲಸ ಮಾಡಲಾಗಿದೆ ಎಂದರು.

೯ದಿನಗಳು ಬೆಳಗ್ಗೆ ಸಂಜೆ ಪೂಜೆ ನಡೆಸುತ್ತಿವೆ. ದಿನಕ್ಕೊಬ್ಬರಂತೆ ಓರ್ವ ಮುತ್ತೈದೆಗೆ ಬಾಗಿಣ ಅರ್ಪಣೆ ಮಾಡುತ್ತೇವೆ. ಮೊದಲ ಮೂರು ದಿನ ಲಕ್ಷ್ಮಿಗೆ, ನಂತರದ ಮೂರು ದಿನ ಸರಸ್ವತಿಗೂ ಕಡೇ ಮೂರು ದಿನ ದುರ್ಗೆಗೆ ಮೀಸಲಿರಿಸಿ ಪೂಜೆ ಸಲ್ಲಿಸಲಾಗುತ್ತದೆ. ವಿಜಯದಶಮಿಯಂದು ಆಯುಧ, ಅಂಗಡಿಗೆ ಪೂಜೆ ಸಲ್ಲಿಸಿ ಹಬ್ಬ ಆಚರಿಸುವುದಾಗಿ ತಿಳಿಸಿದರು.

ಈ ವೇಳೆ ಕುಮಾರಸ್ವಾಮಿ ಕುಟುಂಬ ಮತ್ತು ನರಸಿಂಹಮೂರ್ತಿ ಕುಟುಂಬ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net