

ಮುದ್ದೇಬಿಹಾಳ: ತಾಲೂಕಿನ ಕೃಷ್ಣಾ ನದಿಗೆ ಕಟ್ಟಲಾಗಿರುವ ನಾರಾಯಣಪುರ ಡ್ಯಾಂ (ಸಿದ್ದಾಪುರ ಡ್ಯಾಂ) ಹಿನ್ನೀರಿನ ಮುಳುಗಡೆ ಪ್ರದೇಶದ ಸಂತ್ರಸ್ತರ ಭೂಮಿಗೆ ಹೊಂದಿಕೊಂಡಿರುವ ನಾಗಬೇನಾಳ ಗ್ರಾಪಂ ವ್ಯಾಪ್ತಿಯಲ್ಲಿ ಗೋಮಾಳಕ್ಕೆಂದು ಮೀಸಲಿಟ್ಟಿರುವ ಜಮೀನಿನಲ್ಲಿ ನಾಲತವಾಡ ಪಟ್ಟಣದ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಮುಂದಾಗಿರುವುದನ್ನು ನಾಗಬೇನಾಳ, ವೀರೇಶನಗರ ಗ್ರಾಮಸ್ಥರು, ರೈತರು ವಿರೋಧಿಸಿದ್ದಾರೆ.
ಈ ಕುರಿತು ಈಚೆಗೆ ವಿಜಯಪುರದ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಮುದ್ದೇಬಿಹಾಳ ತಹಸೀಲ್ದಾರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೇರಿ ಹಲವರಿಗೆ ಮನವಿ ಸಲ್ಲಿಸಿದ್ದಾರೆ. ಅಧಿಕಾರಿಗಳು ತಮ್ಮ ತೀರ್ಮಾನವನ್ನು ಕೈಬಿಡಬೇಕು. ಗೋಮಾಳ ಎಂದಿರುವ ಜಾಗವನ್ನು ದನ ಕರು, ಕುರಿ ಮೇಕೆಗಳ ಆಹಾರಕ್ಕಾಗಿಯೇ ಮೀಸಲಿರಿಸಬೇಕು. ಇಲ್ಲವಾದಲ್ಲಿ ರೈತರು, ಗ್ರಾಮಸ್ಥರ ಪ್ರತಿರೋಧ ಮಾತ್ರವಲ್ಲದೆ ಕಾನೂನು ಕ್ರಮವನ್ನೂ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಗೋಮಾಳ ಜಮೀನಿನಲ್ಲಿ ನಾರಾಯಣಪುರ ಡ್ಯಾಮ್‌ನ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ಸಿದ್ದಾಪುರ (ವಿರೇಶನಗರ) ಮತ್ತು ನಾಗಬೇನಾಳ ಗ್ರಾಮದ ಜನರ ಜಾನುವಾರುಗಳನ್ನು ಮೇಯಿಸಲಾಗುತ್ತದೆ. ಅಲ್ಲಿ ಗೋಮಾಳ ಎಂದು ಇರುವುದು ಇದೊಂದೇ ಸರ್ಕಾರದ ಜಾಗವಾಗಿದೆ. ಮುಳುಗಡೆ ಸಂತ್ರಸ್ತರು ತಮ್ಮ ಜಾನುವಾರು ಮೇಯಿಸಲೆಂದೇ ಈ ಸೌಲಭ್ಯ ಶತಮಾನಗಳ ಹಿಂದಿನಿಂದಲೂ ಬಳಕೆಯಲ್ಲಿದೆ.
ಈಗ ಈ ಜಮೀನಿನ ಒಂದು ಭಾಗದಲ್ಲಿ ಕಸ ಸಂಗ್ರಹಿಸುವ ಘಟಕ ಮಾಡಲು ಹೊರಟಿರುವುದು ಒಪ್ಪುವಂಥದ್ದಲ್ಲ. ಗ್ರಾಮಸ್ಥರ ಅಭಿಪ್ರಾಯ ಪಡೆಯದೆ ಮಂಜೂರು ಮಾಡಿರುವುದು ತಡವಾಗಿ ಗೊತ್ತಾಗಿದೆ. ಉದ್ದೇಶಿತ ಸ್ಥಳದಲ್ಲಿ ಕಸ ಸಂಗ್ರಹದ ಘಟಕ ಸ್ಥಾಪಿಸುವುದರಿಂದ ಪರಿಸರ ಹಾಳಾಗುತ್ತದೆ. ಸಾಂಕ್ರಾಮಿಕ ರೋಗಗಳು ಹರಡುತ್ತವೆ.
ಜಾನುವಾರುಗಳ ಆಹಾರಕ್ಕಾಗಿ ಮೀಸಲಿಟ್ಟಿರುವ ಜಾಗವನ್ನು ಕಸಿದುಕೊಂಡು ಜಾನುವಾರುಗಳಿಗೆ ನಿಲ್ಲಲೂ ಜಾಗ ಇಲ್ಲದ ಹಾಗೆ ಮಾಡಿದಂತಾಗುತ್ತದೆ. ರೈತರ ಹಕ್ಕನ್ನೂ ಕಸಿದುಕೊಂಡಂತಾಗುತ್ತದೆ. ಒಂದು ವೇಳೆ ಉದ್ದೇಶಿತ ಸ್ಥಳದಲ್ಲಿ ಕಸ ವಿಲೇವಾರಿ ಘಟಕ ನಿರ್ಮಿಸಲು ಮುಂದಾದಲ್ಲಿ ರೈತರೆಲ್ಲರೂ ಸೇರಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರಭು ಪತ್ತೇಪೂರ, ಎಸ್.ಐ.ಪತ್ತೇಪೂರ, ಈರಪ್ಪ ಪತ್ತೇಪೂರ, ಅಂಬ್ರಪ್ಪ ಹಾಳಗೌಂಡಿ, ಗಂಗಾಧರ ಹವಾಲ್ದಾರ, ಗದ್ದೆಪ್ಪ ಮೇಟಿ, ಪರಸಪ್ಪ ಸುಲ್ತಾನಪುರ, ಎಸ್.ಎಚ್.ಗೌಡರ, ಶಿವು ಅಂಗಡಿ, ಎಸ್.ಎಂ.ಹವಾಲ್ದಾರ್, ಯಮನಪ್ಪ ಕರಭಾವಿ, ಸಿ.ಐ.ಗುರಿಕಾರ, ಬಿ.ಜೆ.ಕುಸಿಬಿ, ಸಂಗಣ್ಣ ಕೋಟಿ, ಸೋಮಪ್ಪ ಗಾಂಜಿ, ದುರಗಪ್ಪ ಮಾದರ, ಮಲ್ಲಪ್ಪ ಪತ್ತೇಪೂರ, ಈರಪ್ಪ ಕೋಟಿ, ದುರಗಪ್ಪ ಗಾಂಜಿ, ಈರಪ್ಪ ಕರಿಬಾಯಿ, ಮಳೆಪ್ಪ ಬೆನಕನಹಳ್ಳಿ, ಮಳೆಪ್ಪ ಗಾಂಜಿ, ಆಸೀಪ್ ನದಾ, ಶರಣಪ್ಪ ಪೂಜಾರಿ ಸೇರಿ 40ಕ್ಕೂ ಹೆಚ್ಚು ರೈತರು ಮನವಿ ಪತ್ರಕ್ಕೆ ಸಹಿ ಮಾಡಿದ್ದಾರೆ.
ಉತಾರದಲ್ಲಿ ರಿಸನಂ. 92 ರಲ್ಲಿರುವ 24.12 ಎಕರೆ ಜಮೀನು ಮುತ್ ಗಾಯರಾಣಾ (ಗೋಮಾಳ) ಎಂದು ದಾಖಲಾಗಿದೆ. 2022 ರ ಸೆಪ್ಟೆಂಬರ್ 15 ರಂದು ಅದರಲ್ಲಿನ 3.17 ಎಕರೆ ಜಮೀನನ್ನು ನಾಲತವಾಡ ಪಟ್ಟಣದ ಕಸ ವಿಲೇವಾರಿ ಘಟಕಕ್ಕೆ ನೀಡಿ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶದನ್ವಯ ಬದಲಾವಣೆ ಮಾಡಲಾಗಿದೆ. ನಾಲತವಾಡವು ಗ್ರಾಮದಿಂದ 8 ಕಿ.ಮೀ. ದೂರದಲ್ಲಿದೆ. ಜಿಲ್ಲಾಧಿಕಾರಿ ಅವರು ಪಬ್ಲಿಕ್ ಹಿಯರಿಂಗ್ ಏರ್ಪಡಿಸದೆ ಏಕತರ್ಪೆ ತೀರ್ಮಾನ ಕೈಗೊಂಡಿದ್ದಾರೆ. ಪ್ರಭು ಪತ್ತೇಪೂರ, ಯುವ ರೈತ, ವೀರೇಶ ನಗರ
ರೈತರಿಂದ ಕಾನೂನ ಮೊರೆ: ಮನವಿ ಸಲ್ಲಿಸಿದ ನಂತರವೂ ಮುದ್ದೇಬಿಹಾಳ ತಹಸೀಲ್ದಾರ್ ಬಲರಾಮ ಕಟ್ಟಿಮನಿ, ನಾಲತವಾಡದ ಕಂದಾಯ ನಿರೀಕ್ಷಕ ವೆಂಕಟೇಶ ಅಂಬಿಗೇರ ಅವರು ಹೆಚ್ಚಿನ ಪೊಲೀಸ್ ಬಲದೊಂದಿಗೆ ಸ್ಥಳಕ್ಕೆ ಬಂದು 3.17 ಎಕರೆ ಜಮೀನಿನ ಸರ್ವೆ ನಡೆಸಿ ಕಲ್ಲು ನೆಟ್ಟಿದ್ದಾರೆ. ಸುತ್ತಲಿನ ರೈತರು, ಗ್ರಾಮಸ್ಥರ ವಿರೋಧ ಲೆಕ್ಕಿಸದೆ ಪೊಲೀಸ್ ಬಲದೊಂದಿಗೆ ಇದನ್ನು ಮಾಡಿದ್ದು ರೈತರ ಮೇಲಿನ ದೌರ್ಜನ್ಯಕ್ಕೆ ಸಮನಾಗಿದೆ. ಸರ್ವೆ ಸಮಯದಲ್ಲಿ ವಾಹನಗಳ ಓಡಾಟ ನಡೆಸಿದ್ದರ ಪರಿಣಾಮ ಲವತ್ತಾದ ಬೆಳೆ ಹಾಳಾಗಿದೆ. ಬಲವಂತದ ಕ್ರಮ ವಿರೋಧಿಸಿ ನ್ಯಾಯಕ್ಕಾಗಿ ನಾವು ಕಾನೂನಿನ ಮೊರೆ ಹೋಗಿದ್ದೇವೆ ಎಂದು ಬೆಳೆ ಹಾನಿ ಅನುಭವಿಸಿದ ರೈತರು ವಿಜಯವಾಣಿಗೆ ತಿಳಿಸಿದ್ದಾರೆ.