ಕುರುಬರಮಲ್ಲೂರ ಗ್ರಾಪಂನಲ್ಲಿ 37 ಲಕ್ಷ ರೂ. ಗೋಲ್‍ಮಾಲ್

Kurubaramalluru grama panchayiti
Published on

ಸವಣೂರ: ತಾಲೂಕಿನ ಕುರುಬರಮಲ್ಲೂರ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಕಾಮಗಾರಿ ಹೆಸರಲ್ಲಿ ಲಕ್ಷಾಂತರ ರೂಪಾಯಿ ಅನುದಾನವನ್ನು ದುರುಪಯೋಗ ಪಡಿಸಿಕೊಂಡ ಪ್ರಕರಣ ನಡೆದಿದ್ದು, ಅಧಿಕಾರಿಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಹಾಗೂ ಅಭಿವೃದ್ಧಿ ಕಾಮಗಾರಿಗಾಗಿ ಮಂಜೂರಾದ ಲಕ್ಷಾಂತರ ರೂಪಾಯಿ ಹಣದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅವ್ಯವಹಾರ ನಡೆಸಿರುವುದು ಸಾಬೀತಾಗಿದೆ.

ಅಂಗನವಾಡಿ ಕಟ್ಟಡ ನಿರ್ವಣದ 15 ಲಕ್ಷ ರೂ., ವಿವಿಧ ಅಭಿವೃದ್ಧಿ ಕಾಮಗಾರಿಯ 25 ಲಕ್ಷ ರೂ. ಸೇರಿ ಒಟ್ಟು 37.50 ಲಕ್ಷ ರೂ. ಹಣವನ್ನು ದುರುಪಯೋಗ ಪಡಿಸಿಕೊಂಡ ಆರೋಪದಲ್ಲಿ ಪಿಡಿಒ ಅನ್ನಪೂರ್ಣ ಸಿಂಪಿ ಅಮಾನತುಗೊಂಡಿದ್ದಾರೆ. ಅಧ್ಯಕ್ಷರಾಗಿದ್ದ ಮಹಾದೇವಪ್ಪ ಮಲ್ಲಾಡ ಹಾಗೂ ಲಕ್ಷ್ಮೀ ಬೆಂಡಿಗೇರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಒ ಅಕ್ಷಯ ಶ್ರೀಧರ ಆದೇಶ ಹೊರಡಿಸಿದ್ದಾರೆ.

ತಾಲೂಕಿನ ಕುರುಬರಮಲ್ಲೂರ ಗ್ರಾಪಂ ವ್ಯಾಪ್ತಿಗೆ ಬರುವ ಚಳ್ಳಾಳ ಗ್ರಾಮದ ಅಂಗನವಾಡಿ-185 ಕೇಂದ್ರಕ್ಕೆ ನೂತನ ಕಟ್ಟಡ ಕಟ್ಟಲು 2022-23ನೇ ಸಾಲಿನ ನರೇಗಾ ಯೋಜನೆಯಡಿ ಸಂಬಂಧಪಟ್ಟ ಇಲಾಖೆಯ ವತಿಯಿಂದ 2023ರ ಜ. 27ರಂದು ಗ್ರಾಪಂಗೆ 15 ಲಕ್ಷ ರೂ. ಅನುದಾನ ನೀಡಲಾಗಿತ್ತು. ಆದರೆ, ಚಳ್ಳಾಳ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ವಿುಸದೇ ಸಂಪೂರ್ಣ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಗ್ರಾಮ ಪಂಚಾಯಿತಿ ಸಮಗ್ರ ಮೂಲ ಸೌಕರ್ಯ ಅಭಿವೃದ್ಧಿಗಾಗಿ 2021-22ರಲ್ಲಿ ಹಂತ-1ರಡಿ ಅಮೃತ ಗ್ರಾಮ ಪಂಚಾಯಿತಿ ಯೋಜನೆಯಡಿ ಬಿಡುಗಡೆಗೊಂಡ 37.5 ಲಕ್ಷ ರೂ. ಗಳನ್ನು ಸಹ ದುರ್ಬಳಕೆ ಮಾಡಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಂಗನವಾಡಿ ಕಟ್ಟಡ ನಿರ್ವಣಕ್ಕಾಗಿ ಗ್ರಾಪಂ ಆಡಳಿತ ಮಂಡಳಿಗೆ ನಿರಂತರ ಒತ್ತಡ ಬಂದ ನಂತರ ಪ್ರಕರಣ ಬಯಲಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಂಗನವಾಡಿ ಕಟ್ಟಡ ನಿರ್ವಣಕ್ಕಾಗಿ ಕಾಯ್ದಿರಿಸಿದ 15 ಲಕ್ಷ ರೂ. ಹಣವನ್ನು ದುರ್ಬಳಕೆ ಮಾಡಿಕೊಂಡವರಿಂದ ವಸೂಲಿಗಾಗಿ ಆದೇಶ ನೀಡಲಾಗಿತ್ತು. 15 ಲಕ್ಷ ಹಣದಲ್ಲಿ ಈಗಾಗಲೇ 11.45 ಲಕ್ಷ ರೂ. ಗಳನ್ನು ಪಿಡಿಒ ಹಾಗೂ ಸಂಬಂಧಪಟ್ಟವರು ಗ್ರಾಪಂಗೆ ಮರು ಜಮಾವಣೆ ಮಾಡಿದ್ದಾರೆ. ಉಳಿದ ಹಣವನ್ನೂ ವಸೂಲಿ ಮಾಡಿ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಬೇಕಿದೆ. ತಪ್ಪಿದಲ್ಲಿ ಈ ಕುರಿತು ಹೋರಾಟ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಹ ಈ ಕುರಿತು ಮುಂಜಾಗ್ರತಾ ಕ್ರಮ ವಹಿಸದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಲಕ್ಷಾಂತರ ರೂಪಾಯಿ ಅನುದಾನ ದುರ್ಬಳಕೆಯಾಗಿದೆ. ಮೇಲಧಿಕಾರಿಗಳು ತಪ್ಪಿಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಗ್ರಾಪಂ ಮಟ್ಟದ ಅಧಿಕಾರಿಗಳು ಅಭಿವೃದ್ಧಿ ಕಾರ್ಯಗಳ ಕುರಿತು ಮೇಲಧಿಕಾರಿಗಳಿಗೆ ಸ್ಪಷ್ಟ ದಾಖಲಾತಿ ನೀಡದ ಹಿನ್ನೆಲೆಯಲ್ಲಿ ಗೊಂದಲ ಉಂಟಾಗಿದೆ. ದುರ್ಬಳಕೆ ಮಾಡಿಕೊಳ್ಳಲಾಗಿದೆ ಎನ್ನುವ ಹಣವನ್ನು ಗ್ರಾಪಂ ಅಭಿವೃದ್ಧಿಗೆ ಬಳಸಲಾಗಿದೆ. ಈ ಕುರಿತು ಕಾನೂನು ಹೋರಾಟ ಕೈಗೊಳ್ಳಲಾಗುವುದು. | ಮಹಾದೇವಪ್ಪ ಮಲ್ಲಾಡ ಕುರುಬರಮಲ್ಲೂರ ಗ್ರಾಪಂ ಮಾಜಿ ಅಧ್ಯಕ್ಷ ಸವಣೂರ ತಾಲೂಕು ಕುರುಬರಮಲ್ಲೂರ ಗ್ರಾಪಂನಲ್ಲಿ ನಡೆದ ಹಣ ದುರ್ಬಳಕೆ ಕುರಿತು ಮೇಲಧಿಕಾರಿಗಳ ಆದೇಶದಂತೆ ಪ್ರಥಮ ಹಂತದಲ್ಲಿ ಹಣ ಮರು ಪಾವತಿಗಾಗಿ ಆದೇಶ ನೀಡಲಾಗಿತ್ತು. ಅಂಗನವಾಡಿ ಕಟ್ಟಡ ನಿರ್ವಣದ 15 ಲಕ್ಷ ರೂ. ಅನುದಾನದಲ್ಲಿ ಸುಮಾರು 11.45 ಲಕ್ಷ ರೂ. ಮರು ಪಾವತಿಸಲಾಗಿದೆ. ಉಳಿದ ಹಣ ಮರು ಪಾವತಿಗೆ ಸೂಚಿಸಲಾಗಿದೆ. | ನವೀನಪ್ರಸಾದ ಕಟ್ಟಿಮನಿ, ಸವಣೂರ ತಾಪಂ ಇಒ ಗ್ರಾಪಂ ಕಚೇರಿಯಲ್ಲಿ ಯಾವುದೇ ರೀತಿಯ ಹಣ ದುರ್ಬಳಕೆ ಮಾಡಿಕೊಂಡಿಲ್ಲ. ಅಮೃತ ಗ್ರಾಮ ಪಂಚಾಯಿತಿ ಯೋಜನೆಯಡಿ ಅಭಿವೃದ್ಧಿ ಕೈಗೊಳ್ಳಲಾಗಿದೆ. ಆದರೆ, ಅಂಗನವಾಡಿ ಕಟ್ಟಡ ನಿರ್ವಣಕ್ಕಾಗಿ ನಿಧಿ-1ರಲ್ಲಿ ಜಮಾವಣೆಗೊಂಡ 15 ಲಕ್ಷ ರೂ.ಗಳನ್ನು ಇತರ ಅಭಿವೃದ್ಧಿಗಾಗಿ ಬಳಕೆ ಮಾಡಿದ್ದು ಮಾತ್ರ ಕಾನೂನು ರೀತಿಯಲ್ಲಿ ತಪ್ಪಾಗಿದೆ. ಆದ್ದರಿಂದ, ಶಿಕ್ಷೆಯನ್ನು ಅನುಭವಿಸುವಂತಾಗಿದೆ. | ಅನ್ನಪೂರ್ಣ ಸಿಂಪಿ, ಅಮಾನತುಗೊಂಡ ಪಿಡಿಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net