ರಾಗಿ ಖರೀದಿಯಲ್ಲಿ ಗೋಲ್​ಮಾಲ್​!

FotoJet
Published on

ಪ್ರತಿ ಚೀಲಕ್ಕೂ 3ಕೆಜಿ ರಾಗಿ ವಸೂಲಿ ಆರೋಪ | ಕಡ್ಡಾಯವಾಗಿ ನಿಯಮ ಪಾಲನೆಗೆ ಡಿಸಿ ಸೂಚನೆ

 ತುಮಕೂರು : ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ 11 ಕೇಂದ್ರಗಳಲ್ಲಿ ರೈತರಿಂದ ರಾಗಿ ಖರೀದಿಸುವ ಪ್ರಕ್ರಿಯೆ ಆರಂಭವಾಗಿದ್ದು, ಎಲ್ಲೆಡೆಯೂ ರೈತರಿಂದ ಹೆಚ್ಚು ರಾಗಿ ಹಾಗೂ ಹಣ ವಸೂಲಿ ದೂರು ಕೇಳಿಬಂದಿದೆ.

ಮೂರನೇ ವ್ಯಕ್ತಿ ಪರೀಕ್ಷಕ ಮತ್ತು ಖರೀದಿ ಅಧಿಕಾರಿಗಳು ರೈತರಿಂದ ರಾಗಿ ಖರೀದಿಸುವಾಗ 53 ಕೆಜಿ ತೂಕದಲ್ಲಿ 50 ಕೆಜಿ ದಾಖಲಿಸಿ, ರೈತರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ರೈತರಿಂದ ದೂರು ಬರುತ್ತಿದೆ.

ಅಧಿಕಾರಿಗಳು ತರಾಟೆಗೆ: ದೂರಿನ ಹಿನ್ನೆಲೆಯಲ್ಲಿ ಕೆಂಡಾಮಂಡಲರಾಗಿರುವ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಅಂತೆಯೇ, ಈ ಮಾರ್ಗಸೂಚಿ ಹೊರಡಿಸಿ, ಕಡ್ಡಾಯವಾಗಿ ಪಾಲನೆ ಮಾಡುವಂತೆ ತಾಕೀತು ಮಾಡಿದ್ದಾರೆ.

ರಾಗಿ ಖರೀದಿಗಾಗಿ ರೈತರಿಗೆ ಟೋಕನ್​ ನೀಡುವಾಗ ರೈತರು ನೋಂದಣಿ ಮಾಡಿಸಿದ ದಿನಾಂಕವನ್ನು ಗಣನೆಗೆ ತೆಗೆದುಕೊಂಡು ಕ್ರಮಸಂಖ್ಯೆವಾರು ಟೋಕನ್​ ಕೊಡಬೇಕು. ರೈತರು ರಾಗಿಯನ್ನು ಖರೀದಿ ಕೇಂದ್ರಕ್ಕೆ ತರಬೇಕಾದ ದಿನದ ಬಗ್ಗೆ ಸ್ಪಷ್ಟವಾಗಿ ಟೋಕನ್​ನಲ್ಲಿ ನಮೂದಿಸಿರಬೇಕು ಎಂದು ನಿರ್ದೇಶನ ನೀಡಲಾಗಿದೆ.

ಮುಂಚಿತವಾಗಿಯೇ ಪ್ರತಿ 50 ಕೆಜಿ ಚೀಲದಲ್ಲಿ ರಾಗಿ ತರುವ ಬಗ್ಗೆ ಹಾಗೂ ಗೋಣಿಚೀಲ ಸೇರಿಸಿ ಪ್ರತಿ ಚೀಲದಲ್ಲಿ ಎಷ್ಟು ಪ್ರಮಾಣದಲ್ಲಿ ರಾಗಿ ತರಬೇಕು ಎಂಬುದನ್ನು ರೈತರಿಗೆ ತಿಳಿಸಬೇಕು. ಈ ಬಗ್ಗೆ ಎಲ್ಲರಿಗೂ ಕಾಣುವಂತೆ ಫಲಕ ಪ್ರದರ್ಶಿಸಬೇಕು. ಸರ್ಕಾರ ನಿಗದಿಪಡಿಸಿರುವ ಪ್ರಮಾಣದಂತೆ ನಿಖರ ತೂಕದ ರಾಗಿ ಪಡೆದುಕೊಳ್ಳಬೇಕು. ರಾಗಿಯ ಗುಣಮಟ್ಟ ಪರಿಶೀಲಿಸಿ ಸರ್ಕಾರದ ಮಾನದಂಡಗಳನ್ವಯ ಗುಣಮಟ್ಟದ ರಾಗಿ ಮಾತ್ರ ಪಡೆದುಕೊಳ್ಳಬೇಕು. ಮೂರನೇ ಪರೀಕ್ಷಕ ಗುಣಮಟ್ಟ ದೃಢೀಕರಣ ಮಾಡುವಾಗ ಎಚ್ಚರಿಕೆಯಿಂದ ದೃಢೀಕರಣ ಮಾಡಬೇಕು ಎಂದು ಸೂಚಿಸಿದ್ದಾರೆ.

ತಿರಸತವಾದರೆ ಅಧಿಕಾರಿಗಳೇ ಹೊಣೆ

ಕಳಪೆ ರಾಗಿ ಖರೀದಿಸಿ, ಮುಂದೆ ಎಫ್​ಸಿಐನಿಂದ ತಿರಸತವಾದರೆ ಅದಕ್ಕೆ ಮೂರನೇ ವ್ಯಕ್ತಿ ಪರೀಕ್ಷಕ ಮತ್ತು ಖರೀದಿ ಅಧಿಕಾರಿಗಳು ಜವಾಬ್ದಾರರಾಗುತ್ತಾರೆ. ತಿರಸತಗೊಂಡ ರಾಗಿಯ ಮೊತ್ತವನ್ನು ಸಂಬಂಧಿಸಿದವರಿಂದ ವಸೂಲಿ ಮಾಡಲಾಗುವುದು ಮತ್ತು ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಡಿಸಿ ಎಚ್ಚರಿಸಿದ್ದಾರೆ.

ಅನಧಿಕೃತ ವ್ಯಕ್ತಿಗೆ ಅವಕಾಶ ಬೇಡ

ರಾಗಿ ಖರೀದಿ ಮಾಡಿದ ತಕ್ಷಣ ಗ್ರೇನ್​ ಓಚರ್​ ಕೊಡಬೇಕು. ಮರು ದಿನ ಬರುವಂತೆ ಹೇಳುವಂತಿಲ್ಲ್ಲ. ರೈತರು ತಂದ ರಾಗಿ ಇಳಿಸಿಕೊಂಡು ಗುಣಮಟ್ಟ ಪರಿಶೀಲಿಸಿ ಕಳಪೆ ಇದ್ದರೆ ರೈತರಿಗೆ ಅಲ್ಲಿಯೇ ಹಿಂತಿರುಗಿಸಬೇಕು. ತೂಕ ಮಾಡಿ ಪ್ರತಿ ಚೀಲಕ್ಕೆ ನಿವ್ವಳ 50 ಕೆಜಿ ಯಂತೆ ಪ್ರಮಾಣೀಕರಿಸಿ ಸಂಗ್ರಹಣಾ ಕೇಂದ್ರಕ್ಕೆ ಅದೇ ದಿನ ರವಾನಿಸಬೇಕು.ಆಯಾ ದಿನ ಖರೀದಿ ಮಾಡಿ ಸಂಗ್ರಹಣಾ ಕೇಂದ್ರಕ್ಕೆ ರವಾನಿಸಿದ ಬಗ್ಗೆ ಎಸ್​.ಡಬ್ಲ್ಯು.ಸಿ. ಗೋದಾಮು ವ್ಯವಸ್ಥಾಪಕರಿಂದ ಅದೇ ದಿನ ಸ್ವೀಕೃತಿ ಬಾಂಡ್​ ಪಡೆದು ಕೆಎಫ್​ಸಿಎಸ್​ಸಿ ಜಿಲ್ಲಾ ಕಚೇರಿಗೆ ರವಾನಿಸಬೇಕು. ಖರೀದಿ ಕೇಂದ್ರಗಳಲ್ಲಿ ರೈತರಲ್ಲದ ಅನಧಿಕೃತ ವ್ಯಕ್ತಿಗಳು, ಸಂಘಟನೆಯವರು, ಮಧ್ಯವರ್ತಿಗಳು ಬರದಂತೆ ಎಚ್ಚರ ವಹಿಸಬೇಕು ಎಂದು ಡಿಸಿ ಸೂಚಿಸಿದ್ದಾರೆ.

ರಜಾ ದಿನವೂ ಖರೀದಿ

ರಾಗಿ ತರುವ ರೈತರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಕಾಲಾವಕಾಶ ಕಡಿಮೆ ಇರುವ ಕಾರಣ ರಜಾ ದಿನವೂ ಸೇರಿ ಎಲ್ಲ ದಿನಗಳಲ್ಲಿ ಖರೀದಿ ಮಾಡಬೇಕು. ರಾಗಿ ಖರೀದಿ ಮಾಡುವ ಜಾಗದಲ್ಲಿ ನೆಲಕ್ಕೆ ಟಾರ್ಪಾಲಿನ್​ ಹಾಕಿರಬೇಕು.

ಸಾಗಾಣೆಯಲ್ಲಿ ಲೋಪವಾದರೆ ಕ್ರಮ

ಗುತ್ತಿಗೆದಾರರು ಪ್ರತಿ ಖರೀದಿ ಕೇಂದ್ರಕ್ಕೆ ಅಗತ್ಯ ಇರುವಷ್ಟು ಸಂಖ್ಯೆಯ ಹಮಾಲಿ ಮತ್ತು ಸಾಗಾಣಿಕೆ ಲಾರಿಗಳನ್ನು ಒದಗಿಸಬೇಕು. ಆಯಾ ದಿನ ಖರೀದಿಸಿದ ರಾಗಿ ಸ್ವಚ್ಛಗೊಳಿಸಿ ನಿವ್ವಳ ತೂಕ 50 ಕೆಜಿ ಪ್ರಕಾರ ಚೀಲಗಳನ್ನು ಪ್ರಮಾಣೀಕರಿಸಿ ತೂಕ ಮಾಡಿ ನಂತರ ಲೋಡ್​ ಮಾಡಿ ಸಂಗ್ರಹಣ ಕೇಂದ್ರಕ್ಕೆ ಸಾಗಿಸಿ ಅಲ್ಲಿ ನಿಯಮಬದ್ಧವಾಗಿ ದಾಸ್ತಾನು ಮಾಡಬೇಕು. ಇದರಲ್ಲಿ ಲೋಪವಾದರೆ ಟೆಂಡರ್​ ಷರತ್ತಿನ ಪ್ರಕಾರ ಸಾಗಾಣಿಕೆ ವಿರುದ್ಧ ಕ್ರಮ ಜರುಗಿಸಲಾಗುವುದು.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕಾರ್ಯದ ಮೇಲ್ವಿಚಾರಣೆಗಾಗಿ ಜಿಲ್ಲಾಮಟ್ಟದ ಅಧಿಕಾರಿಯನ್ನು ನೋಡಲ್​ ಅಧಿಕಾರಿಗಳನ್ನಾಗಿ ನೇಮಿಸಿರುವುದರಿಂದ ಸದರಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ರಾಗಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಲೋಪಗಳಿಗೆ ಅವಕಾಶವಾಗದಂತೆ ಖರೀದಿ ಪ್ರಕ್ರಿಯೆ ಸುಗಮವಾಗಿ ನಡೆಸಲು ಕ್ರಮ ಕೈಕೊಳ್ಳಲು ಸೂಚಿಸಿದೆ. ಆಹಾರ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರತಿ ದಿನದ ಖರೀದಿ ವಿವರಗಳನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕಿದೆ.ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಜಿಲ್ಲೆಯಲ್ಲಿ ರಾಗಿ ಖರೀದಿ ಪ್ರಕ್ರಿಯೆಯ ಬಗ್ಗೆ ವಿಶೇಷ ನಿಗಾವಹಿಸಿ ಕೆಎಫ್​ಸಿಎಸ್​ಸಿ ಜಿಲ್ಲಾ ವ್ಯವಸ್ಥಾಪಕ, ಖರೀದಿ ಅಧಿಕಾರಿ ಮತ್ತು ಗ್ರೇಡರ್​ಗಳಿಗೆ ಅಗತ್ಯ ಮಾರ್ಗದರ್ಶನ ನೀಡಬೇಕು. ಕಾಲಕಾಲಕ್ಕೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ.

ರೈತರಿಂದ ಸರ್ಕಾರ ನಿಗದಿಪಡಿಸಿರುವ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣ ಪಡೆಯುವುದು, ಕಳಪೆ ಗುಣಮಟ್ಟದ ರಾಗಿ ಪಡೆಯುವುದು, ಮಧ್ಯವರ್ತಿಗಳಿಗೆ ಅವಕಾಶ ನೀಡುವುದು, ರೈತರೊಂದಿಗೆ ಸೌಜನ್ಯದಿಂದ ವರ್ತಿಸದಿರುವುದು ಸೇರಿ ರಾಗಿ ಖರೀದಿಗೆ ಸಂಬಂಧಿಸಿದಂತೆ ರೈತರಿಂದ ದೂರುಗಳು ಬಂದರೆ ಖರೀದಿ ಅಧಿಕಾರಿ ಮತ್ತು ಗ್ರೇಡರ್​ ವಿರುದ್ಧ ಕ್ರಮ ತೆಗೆದುಕೊಳ್ಳುವುದಲ್ಲದೆ ಅಗತ್ಯ ವಸ್ತುಗಳ ಕಾಯ್ದೆ 1955ರಡಿ ಕ್ರಮ ಜರುಗಿಸಲಾಗುವುದು. - ಶುಭಕಲ್ಯಾಣ್​ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net