

ಹೊಳಲ್ಕೆರೆ: ಅತ್ಯಂತ ಹಿಂದುಳಿದ, ಬುಡಕಟ್ಟು ಸಂಸ್ಕೃತಿಯ ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಸಮುದಾಯದ ಮುಖಂಡರು, ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.
ಕಾಡುಗೊಲ್ಲರನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ಹಿಂದೆಯೇ ಜಾತಿಪಟ್ಟಿಗೆ ಸೇರಿಸಿದೆ. ಆದರೆ, ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಅಧಿಕಾರಿಗಳು ನಿರ್ಲಕ್ಷೃ ವಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾದವ ಸಂಘದ ಜಿಲ್ಲಾಧ್ಯಕ್ಷ ಮೀಸೆ ಮಹಾಲಿಂಗಪ್ಪ ಮಾತನಾಡಿ, ಈಗಲೂ ಊರ ಹೊರಗೆ ಹಟ್ಟಿಗಳಲ್ಲಿ ವಾಸ ಮಾಡುತ್ತಿರುವ ಕಾಡುಗೊಲ್ಲರು ಬುಡಕಟ್ಟು ಸಂಸ್ಕೃತಿಯ ಪರಿಪಾಲಕರು. ಅನೇಕ ಸಮಸ್ಯೆಗಳ ಮಧ್ಯೆ ಜೀವನ ನಡೆಸುತ್ತಿದ್ದಾರೆ ಎಂದರು.
ಅನೇಕ ಕಟ್ಟುಪಾಡುಗಳ ಹಿನ್ನೆಲೆಯಲ್ಲಿ ಮುಖ್ಯವಾಹಿನಿಗೆ ಬರಲು ಆಗುತ್ತಿಲ್ಲ. ಅತ್ಯಂತ ಹಿಂದುಳಿದ ಸಮುದಾಯವನ್ನು ಪ್ರಗತಿಯತ್ತ ತರಲು ಎಸ್‌ಟಿ ಮೀಸಲು ಸೌಲಭ್ಯ ತುರ್ತು ಅಗತ್ಯವಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಎಸ್‌ಟಿ ಮೀಸಲು ಸೌಲಭ್ಯ ದೊರೆತರೆ ಶಿಕ್ಷಣ, ಉದ್ಯೋಗ, ಸಾಲ ಸೇರಿ ಅನೇಕ ಸೌಲಭ್ಯಗಳು ದೊರೆಯಲಿದ್ದು, ಕಾಡುಗೊಲ್ಲರು ಎಲ್ಲರಂತೆ ಮುಖ್ಯವಾಹಿನಿಗೆ ಬರಲು ಸಹಕಾರಿ ಆಗಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿರುವುದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಜಿಪಂ ಮಾಜಿ ಸದಸ್ಯ ಡಿ.ಕೆ.ಶಿವಮೂರ್ತಿ ಮಾತನಾಡಿ, ರಾಜ್ಯದಲ್ಲಿ ಕಾಡುಗೊಲ್ಲರು ಆರ್ಥಿಕ, ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಹಿಂದುಳಿದಿದ್ದಾರೆ. ನಮ್ಮಗಳ ಸಮಗ್ರ ಪ್ರಗತಿಗೆ ಎಸ್ಟಿ ಸೌಲಭ್ಯವೊಂದೇ ಏಕೈಕ ಮಾರ್ಗ ಎಂದರು.
ಕಾಡುಗೊಲ್ಲ ಸಂಘದ ಜಿಲ್ಲಾಧ್ಯಕ್ಷ ರಾಜಕುಮಾರ್ ಮಾತನಾಡಿ, ರಾಜ್ಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಾಡುಗೊಲ್ಲರ ಸಮುದಾಯ ಇದೆ. ಸಾಮಾಜಿಕ ಶೋಷಣಿಯಿಂದಾಗಿ ಮುಕ್ತಿ ಪಡೆದಿಲ್ಲ. ಹಾಗಾಗಿ ಸರ್ಕಾರ ಕಾಡುಗೊಲ್ಲರ ರಕ್ಷಣೆಗೆ ಬರಬೇಕು. ಎಸ್‌ಟಿ ಪಟ್ಟಿಗೆ ಸೇರಿಸಬೇಕು ಎಂದು ಕೋರಿದರು.
ತಾಲೂಕಾಧ್ಯಕ್ಷ ಎ.ಚಿತ್ತಪ್ಪ ಮಾತನಾಡಿ, ಕಾಡುಗೊಲ್ಲ ಸಮುದಾಯಕ್ಕೆ ಎಲ್ಲ ಕ್ಷೇತ್ರದಲ್ಲೂ ಮೀಸಲು ಸೌಲಭ್ಯ ಕಲ್ಪಿಸಬೇಕಿದೆ. ಜತೆಗೆ ಜಾತಿಪ್ರಮಾಣ ಪತ್ರ ನೀಡಲು ಅಧಿಕಾರಿಗಳು ಮುಂದಾಗಬೇಕು. ಇಲ್ಲದಿದ್ದರೆ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಹೇಳಿದರು.
ನಿವೃತ್ತ ಎಎಸ್ಸೈ ತೋರಣಗಟ್ಟೆ ನಾಗೇಂದ್ರಪ್ಪ, ಜಿಪಂ ಮಾಜಿ ಸದಸ್ಯ ಡಿ.ಕೆ.ಶಿವಮೂರ್ತಿ, ಕಾಡುಗೊಲ್ಲ ಸಂಘದ ಚಳ್ಳಕೆರೆ ತಾಲೂಕಾಧ್ಯಕ್ಷ ಬೂದಿಹಳ್ಳಿ ರಾಜಣ್ಣ, ದಾವಣಗೆರೆ ಜಿಲ್ಲಾಧ್ಯಕ್ಷ ಸುಂಕಪ್ಪ, ವಿಜಯನಗರ ಜಿಲ್ಲಾಧ್ಯಕ್ಷ ಸಣ್ಣಬಾಲಪ್ಪ, ಅವಿನಹಟ್ಟಿ ಹರೀಶ್ ಇತರರು ಪಾಲ್ಗೊಂಡಿದ್ದರು.