

ಜಗಳೂರು: ದುಡಿವ ಕೈಗಳಿದ್ದರೂ ಖಾತ್ರಿ ಕೆಲಸವಿಲ್ಲ., ಕುಡಿಯಲು ಶುದ್ಧ ನೀರಿಲ್ಲ., ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆ ಇಲ್ಲ.., ಸಿಟಿಗೆ ತೆರಳಲು ಸಾರಿಗೆ ಸೇವೆಯೂ ಇಲ್ಲ.
ಇಲ್ಲಗಳ ನಡುವೆ ಬದುಕುವುದಾದರೂ ಹೇಗೆಂದು ಹನುಮಂತಾಪುರ ಗೊಲ್ಲರಹಟ್ಟಿ ಜನರು, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿಚೌದರಿ ಎದುರು ಬುಧವಾರ ದೂರಿನ ಮಳೆ ಸುರಿಸಿದರು.
ಹಟ್ಟಿಯಲ್ಲಿ ಆಯೋಜಿಸಿದ್ದ ಕುಂದುಕೊರತೆ ಸಭೆ ಸ್ಥಳೀಯರಿಗೆ ಸಮಸ್ಯೆ ಹೇಳಿಕೊಳ್ಳಲು ವೇದಿಕೆ ಕಲ್ಪಿಸಿದರೆ ಅಧ್ಯಕ್ಷರಿಗೆ ಸಮಸ್ಯೆಗಳನ್ನು ಅರಿಯಲು ಅವಕಾಶ ಒದಗಿಸಿತು.
ಸಮರ್ಪಕ ನೀರಿಲ್ಲದ ಕಾರಣ ಪ್ರತಿನಿತ್ಯ ನೀರಿಗಾಗಿ ಬಿಂದಿಗೆ ಹಿಡಿದು ಕಾಯಬೇಕು.ಶುದ್ದ ಕುಡಿವ ನೀರಿನ ಘಟಕಗಳು ಕೂಡ ಇಲ್ಲ.ಉದೋಗ ಖಾತ್ರಿಯಡಿ ಕೆಲಸ ನೀಡುವ ಭರವಸೆ ಕೂಡ ಈಡೇರಿಲ್ಲ ಎಂದು ಒಂದೊಂದೇ ಸಮಸ್ಯೆ ತೆರೆದಿಟ್ಟಿರು.
ಪ್ರತಿಕ್ರಯಿಸಿದ ಅಧ್ಯಕ್ಷರು ಪಿಡಿಒಗಳು ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಈ ಕುರಿತು ಗಮನಹರಿಸಲು ಅಧ್ಯಕ್ಷರು ಸೂಚಿಸಿದರು. ಗ್ರಾಮಕ್ಕೆ ಕೂಡಲೇ ಸಾರಿಗೆ ಬಸ್ಗಳ ಸೇವೆ ಕಲ್ಪಿಸಲು ರೂಟ್ ಆಫೀಸರ್ ಫಕ್ರುದ್ಧೀನ್ ಅವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದರು.
ಗೊಲ್ಲರಹಟ್ಟಿಗಳ ಜನರು ಮೌಢ್ಯತೆಗಳಿಂದ ಹೊರಬಂದು ಶಿಕ್ಷಣದ ಮೂಲಕ ಪ್ರಗತಿಯ ದೀವಿಗೆ ಹಚ್ಚಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಇದೇ ವೇಳೆ ಹೇಳಿದರು.
ಹನುಮಂತಾಪುರ ಗೊಲ್ಲರಹಟ್ಟಿಯಲ್ಲಿ ತಾಲೂಕು ಆಡಳಿತ, ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರಾಮ ಪಂಚಾಯಿತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಕುಂದು- ಕೊರತೆ ಸಭೆ ಉದ್ಘಾಟಿಸಿ ಮಾತನಾಡಿದರು.
ಸರ್ವಜ್ಞ ಹೇಳಿದಂತೆ ಮುಟ್ಟೇ ಹುಟ್ಟಿನ ಗುಟ್ಟು. ಮಹಿಳೆಯರು ಮುಟ್ಟಾಗುವುದು ಪ್ರಕೃತಿಯ ಸಹಜ ಗುಣ. ಆದರೆ ಗೊಲ್ಲರಹಟ್ಟಿಗಳಲ್ಲಿ ಮುಟ್ಟು, ಋತುಮತಿ, ಹೆರಿಗೆ ಆದವರನ್ನು ಮೈಲಿಗೆ ಎಂದು ಮೌಢ್ಯತೆ ಹೇರಿ ಊರಿನ ಹೊರಗಡೆ ಒಂಟಿಯಾಗಿ ಬಿಡುವುದು ಸರಿಯಲ್ಲ ಎಂದರು.
ತಲೆಮಾರುಗಳ ಹಿಂದೆ ಆಟವಾಡುವ ವಯಸ್ಸಿನಲ್ಲಿ ಮದುವೆ ಮಾಡಿ ಸಂಸಾರದ ಬಂಧನಕ್ಕೆ ಕಟ್ಟಿ ಹಾಕುತ್ತಿದ್ದರು. ಅದೇ ರೀತಿ ನನ್ನ ತಾಯಿ ನನಗೆ 15ನೇ ವರ್ಷದಲ್ಲಿ ಮದುವೆ ಮಾಡಲು ಮುಂದಾದಾಗ ನನ್ನ ತಂದೆ ತಡೆದು ಶಿಕ್ಷಣ ಕೊಡಿಸಿದ ಫಲವಾಗಿ ನಾನು ವೈದ್ಯಳಾಗಿ ಸೇವೆ ಮಾಡಲು ಸಾಧ್ಯವಾಯಿತು.
ಎಲ್ಲ ಅಜ್ಞಾನವನ್ನು ಶಿಕ್ಷಣದಿಂದ ಮಾತ್ರ ಅಳಿಸಲು ಸಾಧ್ಯ ಎಂದು ಅರಿತ ಅಂಬೇಡ್ಕರ್ ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡಿದ್ದರು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ಎಂದರು.
ಜಿಪಂ ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್,ಡಿಎಚ್ಒ ಡಾ.ಷಣ್ಮುಖಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಡಿಡಿ ರಾಜಾ ನಾಯ್್ಕ ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ, ಪಿಡಿಒ ಓಬಣ್ಣ, ಗ್ರಾಪಂ ಅಧ್ಯಕ್ಷೆ ಅಶ್ವಿನಿ ಅಂಜನಪ್ಪ, ತಾಪಂ ಇಒ ಕೆಂಚಪ್ಪ ಇತರರಿದ್ದರು.