

ತುಮಕೂರು: ವಿದ್ಯಾವಾಹಿನಿ ಪ್ರಥಮದರ್ಜೆ ಕಾಲೇಜಿನಲ್ಲಿ ಜು.19, 20 ರಂದು ವಿವಿಯನ್ ವೈಭವ ಮತ್ತು ವಿವಿಯನ್ ವೈವಿಧ್ಯ ಕಾಲೇಜು ಹಬ್ಬ ನಡೆಯಲಿದೆ. ಗಣೇಶ್ ನಟನೆಯ ಹೊಸ ಚಿತ್ರ "ಕೃಷ್ಣಂ ಪ್ರಣಯ ಸಖಿ'ಯ 3ನೇ ಹಾಡನ್ನು ಬಿಡುಗಡೆ ಮಾಡಲಾಗುತ್ತದೆ.
19 ರಂದು ಸಂಜೆ 4ಕ್ಕೆ ವಿವಿಯನ್ ವೈಭವ ಹಬ್ಬಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಚಾಲನೆ ನೀಡುವರು. ವಿದ್ಯಾವಾಹಿನಿ ಸಂಸ್ಥೆಯ ಸಂಸ್ಥಾಪಕ ಕೆ.ಬಿ. ಜಯಣ್ಣ, ವಿದ್ಯಾವಾಹಿನಿ ಸಂಸ್ಥೆ ಕಾರ್ಯದರ್ಶಿ ಎನ್ .ಬಿ.ಪ್ರದಿಪ್ಕುಮಾರ್, ತುಮಕೂರು ವಿವಿ ಕುಲಸಚಿವೆ ನಾಹೀದ ಜಮ್ ಜಮ್ ಉಪಸ್ಥಿತರಿರುವರು.
10 ಗ್ರಾಂ ಚಿನ್ನದ ನಾಣ್ಯ: ಪ್ರತಿವರ್ಷದಂತೆ ವಿಶ್ವವಿದ್ಯಾಲಯದ ಪ್ರಥಮ ರ್ಯಾಂಕ್ ಪಡೆದಿರುವ ಬಿಸಿಎ ವಿದ್ಯಾರ್ಥಿಗಳಾದ ಟಿ.ಎನ್.ನಿರಂಜನ್ ಕುಮಾರ್ ಮತ್ತು ಆರ್.ಸಹನ, ಬಿ.ಕಾಂ., ವಿದ್ಯಾರ್ಥಿನಿ ರೋನಿತ ಎಸ್. ಜೈನ್ಗೆ 10 ಗ್ರಾಂ ಚಿನ್ನದ ನಾಣ್ಯ ನೀಡಿ ಅಭಿನಂದಿಸಲಾಗುವುದು. ಅಲ್ಲದೆ, ಕಾಲೇಜಿನ ಸೆಮಿಸ್ಟರ್ ಟಾಫರ್ಗೆ 30 ಸಾವಿರ ರೂ., ಗಳ ಚೆಕ್ ಅನ್ನು ವಿತರಿಸಲಾಗುವುದು. ಈ ಮೂಲಕ ಕಾಲೇಜಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸ್ಪೂರ್ತಿ ತುಂಬುವ, ಪ್ರೋತ್ಸಾಹಿಸುವ ಮಹತ್ತರವಾದ ಉದ್ದೇಶವನ್ನು ನೆರವೇರಿಸಲಾಗುತ್ತದೆ.
ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ ನೀಡುವುದರೊಟ್ಟಿಗೆ ಸಾಂಸ್ಕತಿಕ ಕಲೆಯನ್ನು ಉತ್ತೇಜಿಸಿ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯನ್ನು ಕಲ್ಪಿಸಲಾಗಿದೆ. ವಿದ್ಯಾರ್ಥಿಗಳ ಪ್ರತಿಭಾ ಅನಾವರಣದ ಜತೆಗೆ ನಾಯಕತ್ವ ಗುಣ ಬೆಳೆಸುತ್ತದೆ. ಒಂದು ಗುಂಪಿನಲ್ಲಿ ಹೊಂದಿಕೊಂಡು ಕಾರ್ಯ ನಿರ್ವಹಿಸುವ ಕೌಶಲ್ಯವನ್ನು ಬೆಳೆಸುತ್ತದೆ. ವೇದಿಕೆಯ ಮೇಲಿನ ಭಯ ನಿವಾರಿಸಿ ಆತ್ಮ ವಿಶ್ವಾಸ ಮೂಡಿಸುವುದು, ಇವೆಲ್ಲವೂ ಮುಂದೆ ಅವರ ವೃತ್ತಿ ಬದುಕಿಗೆ ಬಹಳಷ್ಟು ಸಹಕಾರಿಯಾಗುತ್ತದೆ. ಎನ್.ಬಿ.ಪ್ರದಿಪ್ ಕುಮಾರ್ ಕಾರ್ಯದರ್ಶಿ, ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆ