ಕಿರು ಆಹಾರ ಸಂಸ್ಕರಣಾ ಉದ್ದಿಮೆ ಸ್ಥಾಪನೆಗೆ ಸುವರ್ಣವಕಾಶ

pickle-kOQC-
Published on

ಮಂಗಳೂರು: ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ (ಪಿ.ಎಮ್.ಎಫ್.ಎಮ್.ಇ)ಯೋಜನೆಯನ್ನು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಫೆಕ್) ದಕ್ಷಿಣ ಕನ್ನಡ ಜಿಲ್ಲೆಯೂ ಸೇರಿದಂತೆ ರಾಜ್ಯಾದ್ಯಂತ ಕೈಗೊಂಡಿದೆ.

ಜಿಲ್ಲೆಯ ಆಹಾರ ಸಂಸ್ಕರಣಾ ಉದ್ದಿಮೆ ಬಲಪಡಿಸುವುದು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಸ್ಥಾಪಿಸಿ ಜಿಲ್ಲೆಯ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ನಿರುದ್ಯೋಗ ನಿವಾರಣೆ ಹಾಗೂ ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಸ್ಕರಿಸಿದ ಸಿದ್ಧ ಆಹಾರಗಳಿಗೆ ಸಾಕಷ್ಟು ಬೇಡಿಕೆ ಇರುವ ಕಾರಣ ಸದುಪಯೋಗ ಪಡಿಸಿಕೊಳ್ಳುವಂತೆ ಯೋಜನೆಯ ನೋಡಲ್ ಅಧಿಕಾರಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಚಕ್ಕುಲಿ, ಹಪ್ಪಳ, ಉಪ್ಪಿನಕಾಯಿ, ಚಟ್ನಿಪುಡಿ, ಬೇಕರಿ ತಿನಿಸುಗಳು, ಪಾನೀಯಗಳು, ಚಾಕಲೇಟ್, ಹಾಲು ಉತ್ಪನ್ನಗಳು, ಮುಂತಾದ ಸಿದ್ಧ ಸಂಸ್ಕರಿಸಿದ ಆಹಾರಗಳನ್ನು ಪ್ಯಾಕ್ ಹಾಗೂ ಬ್ರಾಂಡಿಂಗ್ ಮಾಡಿ ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಉದ್ದಿಮೆದಾರರಿಗೆ ಮೂಲ ಬಂಡವಾಳದ ಶೇ.50 ಸಾಲ ಸಂಪರ್ಕಿತ ಸಹಾಯಧನವನ್ನು ಸರ್ಕಾರದಿಂದ ಪಡೆಯಬಹುದಾಗಿದೆ. ಶೇ.10 ಸ್ವಂತ ಹೂಡಿಕೆ ಮಾಡಿ ಕೇವಲ ಶೇ.40ರಷ್ಟು ಬ್ಯಾಂಕಿನಿಂದ ಸಾಲ ಪಡೆದರೆ ಸಾಕಾಗುವುದು. ಯೋಜನಾ ಪ್ರಸ್ತಾವನೆ ಸಿದ್ಧತೆ, ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಕೆ, ಬ್ಯಾಂಕ್ ಜೊತೆ ಸಂಯೋಜನೆ, ಕೌಶಲ ಹಾಗೂ ಉದ್ಯಮಶೀಲತಾ ತರಬೇತಿ ಇತ್ಯಾದಿ ಸಹಾಯಗಳಿಗೆ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ಡಾ.ಎ.ಎ.ಫಝಲ್ ಮೊಬೈಲ್ ಸಂಖ್ಯೆ: 94485 49130, ಸಂಕಪ್ಪ ಶೆಟ್ಟಿ ಮೊಬೈಲ್ ಸಂಖ್ಯೆ: 96866 95478, ಅಥವಾ ಸತೀಶ್ ಮಾಬೆನ್ ಮೊಬೈಲ್ ಸಂಖ್ಯೆ: 8660293638 ಮೂಲಕ ಸಂಪರ್ಕಿಸುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net