ಸುವರ್ಣ ವಿಧಾನಸೌಧಕ್ಕೆ ‘ಮಾಹಿತಿ’ ಶಿಫ್ಟ್

State 5 Suvarna Soudha
Published on

ಬೆಳಗಾವಿ: ರಾಜ್ಯಮಟ್ಟದ ವಿವಿಧ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು ಎಂಬ ಉತ್ತರ ಕರ್ನಾಟಕದ ಜನರ ಬಹುದಿನಗಳ ಬೇಡಿಕೆ ನಿಧಾನವಾಗಿ ಈಡೇರುವ ಭರವಸೆ ಮೂಡಿಸಿದೆ. ಸರ್ಕಾರದ ಆಶಯದಂತೆ ಇಲ್ಲಿನ ಸುವರ್ಣ ವಿಧಾನಸೌಧದ ಕೊಠಡಿ ನಂ. 141ರಲ್ಲಿ ಕರ್ನಾಟಕ ಮಾಹಿತಿ ಆಯೋಗದ ಬೆಳಗಾವಿ ಪೀಠವು ಶುಕ್ರವಾರ ಕಾರ್ಯಾರಂಭಿಸಿದೆ. ಈ ಮೂಲಕ ಸುವರ್ಣ ವಿಧಾನಸೌಧವು ಕಚೇರಿ ಖಾತೆ ತೆರೆದಂತಾಗಿದೆ.

ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಮಾಹಿತಿ ಆಯೋಗದ ಆಯುಕ್ತೆ ಗೀತಾ ಬಿ.ವಿ., ಆಯೋಗದ ಬೆಳಗಾವಿ ಪೀಠದ ನ್ಯಾಯಾಲಯ ಕಲಾಪ ಜೂ. 22ರಿಂದ ಆರಂಭಗೊಳ್ಳಲಿದೆ. ಪೀಠವು ಮಾರ್ಚ್ 3ರಂದೇ ಕಾರ್ಯ ಆರಂಭಿಸಬೇಕಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ವಿಳಂಬವಾಗಿದೆ ಎಂದರು.
ಸರ್ಕಾರ ಮತ್ತು ಉತ್ತರ ಕರ್ನಾಟಕದ ಜನರ ಆಶೋತ್ತರದಂತೆ ಸುವರ್ಣ ವಿಧಾನಸೌಧದಲ್ಲಿ ಕಾರ್ಯ ಕಲಾಪ ಆರಂಭಿಸಲಾಗುತ್ತಿದೆ. ಈ ಭಾಗದ ಜನರ ಬಹುದಿನಗಳ ಆಶಯ ಈಡೇರಿದಂತಾಗಿದೆ.

ಪೀಠದ ಕಾರ್ಯ ನಿರ್ವಹಣೆಗೆ ಅವಕಾಶ ಕಲ್ಪಿಸಿದ ಮುಖ್ಯಮಂತ್ರಿ ಹಾಗೂ ವಿಧಾನಸಭೆಯ ಅಧ್ಯಕ್ಷರಿಗೆ ಆಯುಕ್ತರು ಕೃತಜ್ಞತೆ ಸಲ್ಲಿಸಿದರು.

7 ಜಿಲ್ಲೆಯ ವ್ಯಾಪ್ತಿ: ಬೆಳಗಾವಿ ಪೀಠದ ವ್ಯಾಪ್ತಿಯಲ್ಲಿ ಏಳು ಜಿಲ್ಲೆಗಳು ಬರಲಿದ್ದು ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಪ್ರಕರಣಗಳನ್ನು ನಿರ್ವಹಿಸಲಾಗುತ್ತದೆ. ಅಧಿವೇಶನ ಸಂದರ್ಭದಲ್ಲಿ ಬೆಳಗಾವಿ ಪೀಠದ ಕಾರ್ಯಕಲಾಪ ನಡೆಯುವುದಿಲ್ಲ. ಈ ಅವಧಿಯಲ್ಲಿ ಪೀಠದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಜಾಗೃತಿ ಕಾರ್ಯಾಗಾರ ಆಯೋಜಿಸಲಾಗುವುದು. ಕಾಯ್ದೆ ಬಗ್ಗೆ ಸಮರ್ಪಕ ತಿಳಿವಳಿಕೆ ನೀಡಲು ಅಧಿಕಾರಿಗಳಿಗೆ ಜಾಗೃತಿ ಕಾರ್ಯಕ್ರಮ ಏರ್ಪಡಿಸಲು ನಿರ್ಧರಿಸಲಾಗಿದೆ. ಅದೇ ರೀತಿ ಅಧಿವೇಶನ ಸಂದರ್ಭದಲ್ಲಿ ಆಯಾ ಜಿಲ್ಲೆಗಳಲ್ಲಿ ಕಲಾಪ ನಡೆಸಲಾಗುವುದು ಎಂದು ತಿಳಿಸಿದರು.

4 ಸಾವಿರ ಪ್ರಕರಣ ಬಾಕಿ: ಈ ವಿಭಾಗದ ಪೀಠದ ವ್ಯಾಪ್ತಿಯಲ್ಲಿ ಒಟ್ಟು 4 ಸಾವಿರ ಪ್ರಕರಣಗಳು ಬಾಕಿ ಉಳಿದಿವೆ. ಕರೊನಾ ವೈರಸ್ ಕಾರಣದಿಂದಾಗಿ ಆರಂಭದಲ್ಲಿ ಕಡಿಮೆ ಸಂಖ್ಯೆಯ ಪ್ರಕರಣ ಕೈಗೆತ್ತಿಕೊಂಡು ಹಳೆಯ ಪ್ರಕರಣಗಳ ಇತ್ಯರ್ಥಕ್ಕೆ ಆದ್ಯತೆ ನೀಡಲಾಗುವುದು. ಅಧಿಕಾರಿಗಳು ಮತ್ತು ಮೇಲ್ಮನವಿದಾರರ ಸಮ್ಮುಖದಲ್ಲಿ ತ್ವರಿತವಾಗಿ ಪ್ರಕರಣಗಳ ವಿಲೇವಾರಿ ಮಾಡುವ ಚಿಂತನೆ ಇದೆ ಎಂದು ಆಯುಕ್ತೆ ಗೀತಾ ಮಾಹಿತಿ ನೀಡಿದರು.

ಶಾಖಾಧಿಕಾರಿ, ಅಧೀನ ಕಾರ್ಯದರ್ಶಿ ನೇಮಕಕ್ಕೆ ಸರ್ಕಾರಕ್ಕೆ ಪತ್ರ ಪೀಠದ ಕಾರ್ಯ ಕಲಾಪಗಳ ಸುಮಗ್ರ ನಿರ್ವಹಣೆಗೆ ಶಾಖಾಧಿಕಾರಿ ಹಾಗೂ ಅಧೀನ ಕಾರ್ಯದರ್ಶಿಗಳ ಅಗತ್ಯವಿದ್ದು, ನಿಯೋಜಿಸಲು ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಈಗಾಗಲೇ 12 ಸಿಬ್ಬಂದಿ ಇದ್ದಾರೆ. ಅದರಲ್ಲಿ ಮೂವರು ಸಹಾಯಕರು, ತಲಾ ಇಬ್ಬರು ತೀರ್ಪು ಬರಹಗಾರರು, ಬೆರಳಚ್ಚುಗಾರರು, ಡಿ ದರ್ಜೆ ನೌಕರರು ಹಾಗೂ ತಲಾ ಒಂದು ಶೀಘ್ರ ಲಿಪಿಗಾರ, ಡೇಟಾ ಎಂಟ್ರಿ ಆಪರೇಟರ್, ಚಾಲಕ ಇದ್ದಾರೆ.

ಅವರಿಗೆ ಕಚೇರಿಯಿಂದ ಗುರುತಿನ ಚೀಟಿ ನೀಡಲಾಗಿದೆ. ಸುವರ್ಣ ವಿಧಾನಸೌಧ ನಗರದಿಂದ ದೂರದಲ್ಲಿರುವುದರಿಂದ ಸಾರಿಗೆ ಇಲಾಖೆ ಸದ್ಯಕ್ಕೆ ಪ್ರತಿದಿನ 3 ಬಸ್ ವ್ಯವಸ್ಥೆ ಕಲ್ಪಿಸಿದೆ. ಕಲಾಪಕ್ಕೆ ಬರಬೇಕಾದರೆ ಸಮನ್ಸ್ ಪ್ರತಿ ತೋರಿಸಿದರೆ ಮಾತ್ರ ಸುವರ್ಣ ವಿಧಾನಸೌಧದ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಆಯುಕ್ತೆ ಗೀತಾ ಬಿ.ವಿ. ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net