

ಮಂಡ್ಯ: ದೇಶಹಿತ ತ್ರಿಭಾಷಾ ಪತ್ರಿಕೆ ಪ್ರಾರಂಭವಾಗಿ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆ.15ರಂದು ನಗರದ ರೈತಸಭಾಂಗಣದಲ್ಲಿ ಸುವರ್ಣ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಕರ್ತ ದ.ಕೋ.ಹಳ್ಳಿ ಚಂದ್ರಶೇಖರ್ ತಿಳಿಸಿದರು.
ಸುವರ್ಣ ಸಂಭ್ರಮದ ಅಂಗವಾಗಿ ಸ್ಥಳೀಯ ಪತ್ರಿಕೆಗಳ ಪ್ರದರ್ಶನ, ವ್ಯಂಗ್ಯಚಿತ್ರ ಹಾಗೂ ಛಾಯಾಚಿತ್ರ ಪ್ರದರ್ಶನಕ್ಕೆ ಅಂದು ಬೆಳಗ್ಗೆ 10 ಗಂಟೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ ಚಾಲನೆ ನೀಡಲಿದ್ದಾರೆ. ಜತೆಗೆ ಪತ್ರಿಕಾ ಮಾಧ್ಯಮ ಸ್ಥಿತಿಗತಿ ಚಿಂತನೆ, ಮಾತು-ಮಂಥನ ಹಾಗೂ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಕಾರ್ಯಕ್ರಮವನ್ನು ಬೆಳಗ್ಗೆ 10.30ಕ್ಕೆ ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಉದ್ಘಾಟಿಸುವರು. ದೇಶಹಿತ ಪತ್ರಿಕೆ ಸಂಪಾದಕ ಕೌಡ್ಲೆ ಚನ್ನಪ್ಪ ಪ್ರಾಸ್ತಾವಿಕವಾಗಿ ಮಾತನಾಡುವರು. ಮಾಜಿ ಶಾಸಕ ವಾಸು ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 1 ಗಂಟೆಗೆ ಮಾಧ್ಯಮಗಳು ಮತ್ತು ಸಮುದಾಯ ಶೀರ್ಷಿಕೆಯಡಿ ಗೋಷ್ಠಿ ಇರಲಿದೆ. 2ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ ನಿರ್ದೇಶಕ ಡಾ.ಇಳಂಗೋವನ್ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ವಿಕಸನ ಸಂಸ್ಥೆ ನಿರ್ದೇಶಕ ಮಹೇಶಚಂದ್ರಗುರು ವಿಶೇಷ ಉಪನ್ಯಾಸ ನೀಡುವರು. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸಮಾರೋಪ ಭಾಷಣ ಮಾಡಲಿದ್ದು, ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು.
ಸಂಪಾದಕ ಕೌಡ್ಲೆ ಚನ್ನಪ್ಪ, ಜಾನಪದ ಗಾಯಕ ಗೊರವಾಲೆ ಚಂದ್ರಶೇಖರ್, ಒಡನಾಡಿ ಸಂಸ್ಥೆಯ ಕಾರಸವಾಡಿ ಮಹಾದೇವು ಇದ್ದರು.