

ಹುಬ್ಬಳ್ಳಿ : ಕುಂದಗೋಳ ತಾಲೂಕು ಕಮಡೊಳ್ಳಿ ಗ್ರಾಮದಲ್ಲಿ ಪುರಾಣಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಜಗತ್ಕಲ್ಯಾಣಕ್ಕಾಗಿ ನಡೆಯುವ ಪುಷ್ಪಾರ್ಚನೆಯ 50ನೇ ವರ್ಷದ ಸುವರ್ಣ ಮಹೋತ್ಸವವನ್ನು ನ. 9, 10 ಹಾಗೂ 11 ರಂದು ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಶಂಕರಭಟ್ಟ ಜೋಶಿ, ನ. 9ರಂದು ಮಧ್ಯಾಹ್ನ 12 ಗಂಟೆಗೆ ನೂತನ ಶ್ರೀ ಸೀತಾರಾಮ ಸಭಾಭವನ ಲೋಕಾರ್ಪಣೆ ನಡೆಯಲಿದೆ. ಕಲಬುರ್ಗಿ ಜಿಲ್ಲೆ ಸುರಪೂರ ತಾಲೂಕು ಕಣ್ವಮಠದ ಶ್ರೀ ವಿದ್ಯಾ ಕಣ್ವವಿರಾಜ ತೀರ್ಥಸ್ವಾಮೀಜಿ ಹಾಗೂ ಮುರಗೋಡ ಕೆಂಗೇರಿ ಮಠದ ಶ್ರೀ ದಿವಾಕರ ದೀಕ್ಷಿತರು ಸಾನ್ನಿಧ್ಯ ವಹಿಸುವರು. ಅಗಡಿ ಆನಂದವನದ ಶ್ರೀ ಶ್ರೀನಿವಾಸ ಸ್ವಾಮೀಜಿ ಉಪಸ್ಥಿತರಿರುವರು. ಉದ್ಯಮಿ ರವೀಂದ್ರ ಗುಮಾಸ್ತೆ ಅತಿಥಿಯಾಗಿ ಪಾಲ್ಗೊಳ್ಳುವರು ಎಂದರು.
10 ರಂದು ನಡೆಯುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಹೆಬ್ಬಳ್ಳಿ ಚೈತನ್ಯಾಶ್ರಮದ ಶ್ರೀ ದತ್ತಾವಧೂತರು, ಸಿಂದಗಿ ಜಕ್ಕಪ್ಪಯ್ಯನಮಠದ ಶ್ರೀ ದತ್ತಪ್ಪಯ್ಯ ಸ್ವಾಮೀಜಿ ಹಾಗೂ ಅಗಡಿ ಆನಂದವನದ ಶ್ರೀ ವಿಶ್ವನಾಥ ಸ್ವಾಮೀಜಿ ವಹಿಸುವರು.
11 ರಂದು ಸಂಜೆ 4 ಗಂಟೆಗೆ ಭವ್ಯ ಶೋಭಾಯಾತ್ರೆ, 6 ಗಂಟೆಯಿಂದ ದೀಪೋತ್ಸವ, ಮಂಗಳಾರತಿ, ಪ್ರಸಾದ ನಡೆಯಲಿದೆ. ಇದಕ್ಕೂ ಮೊದಲು ಬೆಳಗ್ಗೆ 10 ಗಂಟೆಗೆ ರುದ್ರಾಸ್ವಾಹಾಕಾರ ಶಿವಪಂಚಾಕ್ಷರಿ ಹೋಮ, ಲಕ್ಷಪುಷ್ಪಾರ್ಚನೆ, ಪೂರ್ಣಾಹುತಿ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಶಿರಸಿ, ಸಿದ್ದಾಪೂರದ ಶ್ರೀ ಬ್ರಹ್ಮಾನಂದ ಭಾರತೀ ತೀರ್ಥ ಸ್ವಾಮೀಜಿ, ಗುರ್ಲಹೊಸೂರಿನ ಶ್ರೀ ದಂಡಪಾಣಿ ದೀಕ್ಷಿತರು, ಶ್ರೀ ಪ್ರಸನ್ನ ದೀಕ್ಷಿತರು, ಲೋಕಾಪುರದ ಶ್ರೀ ಬ್ರಹ್ಮಾನಂದ ಸ್ವಾಮೀಜಿ, ಬೆಂಗಳೂರಿನ ಶ್ರೀ ಗಂಗಾಧರ ದೀಕ್ಷಿತರು ಹಾಗೂ ಇತರರು ಸಾನ್ನಿಧ್ಯ ವಹಿಸುವರು ಎಂದರು.
ಮಾಲತೇಶಿ ಜೋಶಿ, ನಾರಾಯಣಮೂರ್ತಿ ಜೋಶಿ, ಡಾ. ಬಿ.ಎಸ್. ಮಾಳವಾಡ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.