

ಮೈಸೂರು: ಸದ್ವಿದ್ಯಾ ಆಂಗ್ಲೋ ಸಂಸ್ಕೃತ ಪಾಠ ಶಾಲೆಯ ಶತೋತ್ತರ, ಸದ್ವಿದ್ಯಾ ಪ್ರೌಢ ಶಾಲೆಯ ಸುವರ್ಣ ಮಹೋತ್ಸವ ಹಾಗೂ ಸದ್ವಿದ್ಯಾ ಸಂಯುಕ್ತ ಪದವಿ ಪೂರ್ವ ಕಾಲೇಜಿನ ರಜತಮಹೋತ್ಸವವನ್ನು ಸೆ.2 ರಿಂದ 4ರವರೆಗೆ ನಗರದ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿದ್ಯಾಸಂಸ್ಥೆ ಕಾರ್ಯದರ್ಶಿ ಪ್ರೊ.ಎಂ.ಎಸ್.ಕೆ. ನರಹರಿಬಾಬು ಹೇಳಿದರು.
ಸದ್ವಿದ್ಯಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರೊ.ವಿ.ಕೆ. ಗೋಪಾಲಾಚಾರ್ ಅಧ್ಯಕ್ಷತೆಯಲ್ಲಿ ಸೆ.2 ರಂದು ಬೆಳಗ್ಗೆ 10ಕ್ಕೆ ಹಮ್ಮಿಕೊಂಡಿರುವ ಸಮಾರಂಭದಲ್ಲಿ ‘ಶತೋತ್ತರ, ಸುವರ್ಣ ಹಾಗೂ ರಜತ ಮಹೋತ್ಸವ’ಕ್ಕೆ ವಾಗ್ಮಿ ಡಾ.ವೀಣಾ ಬನ್ನಂಜೆ ಚಾಲನೆ ನೀಡುವರು. 3 ರಂದು ಬೆಳಗ್ಗೆ 10ಕ್ಕೆ ‘ಸುರದ್ರುಮ’ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಅತಿಥಿಗಳಾಗಿ ಎನ್.ಆರ್. ಗ್ರೂಪ್ ಅಧ್ಯಕ್ಷ ಆರ್. ಗುರು, ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕಿ ಸಿಂಧು ಬಿ ರೂಪೇಶ್ ಪಾಲ್ಗೊಳ್ಳಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
4 ರಂದು ಸಂ.4ಕ್ಕೆ ಹಮ್ಮಿಕೊಂಡಿರುವ ಸಮಾರೋಪ ಸಮಾರಂಭದಲ್ಲಿ ಉಡುಪಿಯ ಶ್ರೀ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ನಗರದ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ಮುಕ್ತಿದಾನಂದ ಮಹಾರಾಜ್ ಪಾಲ್ಗೊಳ್ಳಲಿದ್ದಾರೆ ಎಂದರು.
ಸದ್ವಿದ್ಯಾ ಶಿಕ್ಷಣ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಒತ್ತಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿದೆ ಎಂಬುದು ನಮಗೆ ಸಾರ್ಥಕತೆಯ ಭಾವವನ್ನು ತಂದಿದೆ. ಮೈಸೂರು ಮಹಾರಾಜರಾಗಿದ್ದ ಮುಮ್ಮಡಿ ಕೃಷ್ಣರಾಜೇಂದ್ರ ಒಡೆಯರ್ ಈ ಸಂಸ್ಥೆಯ ಮಹಾಪೋಷಕರಾಗಿದ್ದು, 1854 ರಿಂದ 1868ರವರೆಗೆ ಮೊದಲ ಅಧ್ಯಕ್ಷರಾಗಿ ಸಂಸ್ಥೆಯನ್ನು ಬೆಳೆಸಿದ್ದಾರೆ. ನಂತರ 10ನೇ ಚಾಮರಾಜೇಂದ್ರ ಒಡೆಯರ್ 1868 ರಿಂದ 1870ರವರೆಗೆ ಸಂಸ್ಥೆಯ ಅಧ್ಯಕ್ಷರಾಗಿ ಮಾರ್ಗದರ್ಶನ ನೀಡಿದ್ದಾರೆ ಎಂದು ಹೇಳಿದರು.
ಸ್ವಾಮಿ ವಿವೇಕಾನಂದರು ಅಮೆರಿಕಾದ ಚಿಕಾಗೋ ಸಮ್ಮೇಳನಕ್ಕೆ ತೆರಳುವ ಮುನ್ನ ನಮ್ಮ ಸಂಸ್ಥೆಗೆ ಪಾದಾರ್ಪಣೆ ಮಾಡಿ ಪ್ರವಚನ ನೀಡಿದ್ದರು. ಮೈಸೂರು ಪತ್ರಿಕೋದ್ಯಮದ ಪಿತಾಮಹ ಎಂ. ವೆಂಕಟಕೃಷ್ಣಯ್ಯ (ತಾತಯ್ಯ) 40 ವರ್ಷಗಳ ಕಾಲ ಅಧ್ಯಕ್ಷರಾಗಿ ಮಾರ್ಗದರ್ಶನ ನೀಡಿದ್ದರು. ಸ್ವಾತಂತ್ರೃ ಹೋರಾಟದ ಕ್ವಿಟ್ ಇಂಡಿಯಾ ಚಳವಳಿ ಸಂದರ್ಭ ನಮ್ಮ ಸಂಸ್ಥೆಯ ಮುಂಭಾಗದಲ್ಲಿಯೇ ವಿದೇಶಿ ಉತ್ಪನ್ನಗಳ ಬಹಿಷ್ಕಾರದೊಂದಿಗೆ ಅಗ್ನಿಸ್ಪರ್ಶ ಮಾಡಿ ಸ್ವಾತಂತ್ರೃದ ಆಂದೊಲನಕ್ಕೆ ಪ್ರೇರೇಪಿಸಲಾಯಿತು. ಸಾಹಿತಿಗಳಾದ ಸಂಸ, ಟಿ.ಪಿ. ಕೈಲಾಸಂ ಮುಂತಾದ ಮಹನೀಯರು ನಮ್ಮ ವಿದ್ಯಾಸಂಸ್ಥೆಯಲ್ಲಿ ವಾಸ್ತವ್ಯ ಹೂಡಿ ಸಾಹಿತ್ಯದ ಗಂಗೆಯನ್ನು ಹರಿಸಿದ್ದಾರೆ ಎಂದು ಹೇಳಿದರು.
ವಿದ್ಯಾಸಂಸ್ಥೆಯ ಸದಸ್ಯ ಎಂ.ಡಿ. ಗೋಪಿನಾಥ್ ಮಾತನಾಡಿ, ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಫಲಿತಾಂಶದಲ್ಲಿ ನಮ್ಮ ವಿದ್ಯಾಸಂಸ್ಥೆಯು ರಾಜ್ಯಮಟ್ಟದಲ್ಲಿ ಗಮನ ಸೆಳೆಯುತ್ತದೆ. ಸಂಸ್ಥೆಯ ವಿದ್ಯಾರ್ಥಿಗಳು ಇಂತಹ ಸಾಧನೆ ತೋರಲು ಶಿಕ್ಷಕರು ಹಾಗೂ ಉಪನ್ಯಾಸಕರ ಪಾತ್ರ ದೊಡ್ಡದು. ಈ ಹಿನ್ನೆಲೆಯಲ್ಲಿ ಶಿಕ್ಷಕರು ಹಾಗೂ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗಕ್ಕೆ ಎಲ್ಲ ರೀತಿಯ ಸೌಲಭ್ಯಗಳನ್ನು ಆಡಳಿತ ಮಂಡಳಿ ಕಲ್ಪಿಸುತ್ತಿದೆ ಎಂದರು.
ವಿದ್ಯಾಸಂಸ್ಥೆ ಉಪಾಧ್ಯಕ್ಷ ಸಿ.ಆರ್.ನಾಗರಾಜ್ ಮಾತನಾಡಿ, ನಮ್ಮ ವಿದ್ಯಾಸಂಸ್ಥೆಯು ಅತ್ಯಂತ ಕಡಿಮೆ ಶುಲ್ಕವನ್ನು ಪಡೆದು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ವಿನಾಯಿತಿ ನೀಡಲಾಗುತ್ತಿದ್ದು, ಇದಕೋಸ್ಕರ ಪ್ರತ್ಯೇಕ ನಿಧಿಯನ್ನು ಕಾಯ್ದಿರಿಸಲಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕಾಲೇಜು ಪ್ರಾಂಶುಪಾಲ ವೈ.ಆರ್. ರಮೇಶ್, ಪ್ರೌಢಶಾಲೆ ಮುಖ್ಯೋಪಾಧ್ಯಾಯ ರಾಮಚಂದ್ರ ಭಟ್, ಸದ್ವಿದ್ಯಾ ಆಂಗ್ಲೋ ಸಂಸ್ಕೃತ ಪಾಠ ಶಾಲೆಯ ಮುಖ್ಯ ಶಿಕ್ಷಕಿ ಸುಬ್ಬಮ್ಮ ಇದ್ದರು.