ಪರಿಮಳ ಗೆಳೆಯರ ಬಳಗದ ಸುವರ್ಣ ಮಹೋತ್ಸವ; 9 ಗ್ರಂಥ ಲೋಕಾರ್ಪಣೆ, 20 ಸಾಧಕರಿಗೆ ಪರಿಮಳ ಪ್ರಶಸ್ತಿ

parimala
Published on

ಬೆಂಗಳೂರು : ಶ್ರೀರಾಘವೇಂದ್ರ ಗುರುಸಾರ್ವಭೌಮರ ಚರಣ ಸೇವೆ ಹಾಗು ಹರಿದಾಸ ಸಾಹಿತ್ಯ ಪ್ರಚಾರದ ಉದ್ದೇಶವಿರಿಸಿಕೊಂಡು ಸ್ಥಾಪನೆಯಾಗಿರುವ ಪರಿಮಳ ಗೆಳೆಯರ ಬಳಗವು 50 ವರ್ಷ ಪೂರೈಸಿರುವ ಪ್ರಯುಕ್ತ ಸುವರ್ಣ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಗಾಯನ ಸಮಾಜದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರು, ಉಡುಪಿಯ ವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು, ಮುಳಬಾಗಿಲು ಶ್ರೀಪಾದರಾಜ ಮಠದ ಶ್ರೀಸುಜಯನಿಧಿ ತೀರ್ಥ ಶ್ರೀಪಾದರು, ಭೀಮನಕಟ್ಟೆ ಮಠದ ಶ್ರೀರಘುವರೇಂದ್ರ ತೀರ್ಥ ಶ್ರೀಪಾದರು, ಬಾಳಗಾರು ಮಠದ ಶ್ರೀಅಕ್ಷೋಭ್ಯ ರಾಮತೀರ್ಥ ಶ್ರೀಪಾದರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.

ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಾ. ಎಂ.ಎನ್.ವೆಂಕಟಾಚಲ, ಮನುಷ್ಯನ ಬದುಕಿನಲ್ಲಿ ಕತ್ತಲು ಕೊನೆಯಾಗಿ ಬೆಳಕು ಬರುವುದು ಬಹಳ ಮುಖ್ಯ. ಕತ್ತಲು ಅಂತ್ಯವಾಗುವುದು ಎಂದರೆ ಯಾವುದೇ ಸಂಬಂಧ ಇಲ್ಲದ ಅಪರಿಚಿತ ವ್ಯಕ್ತಿ ಮನೆಗೆ ಬಂದಾಗ ಆತನನ್ನು ಸ್ವಂತ ಸಹೋದರನಂತೆ ಕಾಣುವ ಚಿತ್ತ ಬಂದರೆ ಅಂದು ಆ ವ್ಯಕ್ತಿಯ ಬದುಕಿನಲ್ಲಿ ಕತ್ತಲೆ ಕೊನೆಯಾಗಿದೆ ಎಂದು ಭಾವಿಸಬೇಕು. ಇಂತಹ ಚಿಂತನೆ ಎಲ್ಲರ ಮನಸ್ಸಿನಲ್ಲಿ ಬರುವಂತೆ ಮಾಡುವುದು ಮಠಾಧೀಶರ ಕರ್ತವ್ಯವಾಗಬೇಕು. ಪರಿಮಳ ಗೆಳೆಯರ ಬಳಗವು ಕಳೆದ 50 ವರ್ಷಗಳಿಂದ ಯಾವುದೇ ಚಂದಾದಾರರಿಲ್ಲದೆ, ಸಾರ್ವಜನಿಕರಿಂದ ವಂತಿಗೆ ಹಣವಿಲ್ಲದೆ, ಬ್ಯಾಂಕ್ ಖಾತೆ ಇಲ್ಲದೆ ನಡೆಯುತ್ತಿದೆ. ಇಲ್ಲಿ ಯಾವುದೇ ಅವ್ಯವಹಾರಗಳಿಗೆ ಅವಕಾಶವಿಲ್ಲ. ಇಂತಹ ಸಾರ್ವಜನಿಕ ಸಂಸ್ಥೆಗಳು ಬಹಳ ಅಪರೂಪ ಎಂದರು.

ಸಮಾಂಭದಲ್ಲಿ ಮಹಾತ್ಮರ ಜೀವನ ಚರಿತ್ರೆಗೆ ಸಂಬಂಧಪಟ್ಟ 9 ಗ್ರಂಥಗಳನ್ನು ಶ್ರೀಗಳು ಲೋಕಾರ್ಪಣೆ ಮಾಡಿದರು. ಇದೇ ವೇಳೆ ನ್ಯಾಯಮೂರ್ತಿ ರಾಮಚಂದ್ರ ದತ್ತಾತ್ರೇಯ ಹುದ್ದಾರ್, ನಿವೃತ್ತ ಐಪಿಎಸ್ ಅಧಿಕಾರಿ ಆರ್.ಶ್ರೀಕುಮಾರ್, ಚಿತ್ರನಟ ರಮೇಶ್ ಭಟ್ ಸೇರಿದಂತೆ ವಿವಿಧ ಕ್ಷೇತ್ರದ 20 ಮಹನೀಯರಿಗೆ ಪರಿಮಳ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ ಹೆಗಡೆ, ಬಳಗದ ಅಧ್ಯಕ್ಷ ಡಾ.ಎಸ್.ಜಯಸಿಂಹ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net