

ಮಂಡ್ಯ: ತಾಲೂಕಿನ ಬಸರಾಳು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ 50ನೇ ವರ್ಷದ ಸುವರ್ಣ ಮಹೋತ್ಸವ ಹಾಗೂ ನೂತನ ಸಭಾಂಗಣವನ್ನು ಶಾಸಕ ರವಿಕುಮಾರ್ ಗಣಿಗ ಉದ್ಘಾಟಿಸಿದರು.
ಬಳಿಕ ಮಾತನಾಡಿ, ಉತ್ಪಾದಕರ ಪರಿಶ್ರಮದಿಂದ ಡೇರಿಗೆ 50 ವರ್ಷದ ಸಂಭ್ರಮವನ್ನು ಆಚರಿಸಲಾಗುತ್ತಿದೆ. ಈ ಡೇರಿ ಇನ್ನಷ್ಟು ಲಾಭದಾಯಕವಾಗುವ ನಿಟ್ಟಿನಲ್ಲಿ ಉತ್ಪಾದಕರು ಸಹಕಾರ ನೀಡಬೇಕು. ಮನ್ಮುಲ್ ಚುನಾವಣೆಯಲ್ಲಿ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಯು.ಸಿ.ಶಿವಕುಮಾರ್ ಮತ್ತು ಕೆಬ್ಬಳ್ಳಿ ರಾಜು ಅವರನ್ನು ಗೆಲ್ಲಿಸುವ ಮೂಲಕ ಈ ಭಾಗದ ಅಭಿವೃದ್ಧಿಪಡಿಸೋಣ. ನಮ್ಮ ಕ್ಷೇತ್ರದಲ್ಲಿ ನೂರು ಡೇರಿಗಳಿದ್ದು, ಶಾಸಕರ ಅನುದಾನ ನೀಡಿ ಅಭಿವೃದ್ಧಿಪಡಿಸೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಡೇರಿ ಅಧ್ಯಕ್ಷ ಬಿ.ವಿ.ತಿಮ್ಮೇಗೌಡ ಮಾತನಾಡಿ, ಗುಣಮಟ್ಟದ ಹಾಲನ್ನು ಡೇರಿಗೆ ಪೂರೈಕೆ ಮಾಡುತ್ತಿರುವುದರಿಂದ ಸಂಘದ ಅಭಿವೃದ್ಧಿಗೆ ಸಹಕಾರಿಯಾಗಿದೆ. ನಿಮ್ಮ ಸಹಕಾರ ಹೀಗೆ ಮುಂದುವರೆಯಲಿ. ಸರ್ಕಾರವು ಹಾಲು ಉತ್ಪಾದಕರಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ರೈತರು ಇದನ್ನು ಸದ್ಬಳಕೆ ಮಾಡಿಕೊಳ್ಳಿ. ಹೈನುಗಾರಿಕೆಯಿಂದಲೇ ಈ ಭಾಗದ ಜನರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಆದ್ದರಿಂದ ಸರ್ಕಾರ ಮತ್ತಷ್ಟು ಪ್ರೋತ್ಸಾಹ ಧನವನ್ನು ನೀಡಿದರೆ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮನ್ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್, ಪಿಎಲ್ಡಿ ಬ್ಯಾಂಕ್ ಮಾಜಿ ನಿರ್ದೇಶಕ ಕೃಷ್ಣೇಗೌಡ, ಮುಖಂಡರಾದ ಕೆಬ್ಬಳ್ಳಿ ರಾಜು, ನಿಂಗರಾಜು, ಗರುಡನಹಳ್ಳಿ ಚಂದ್ರು, ನಾಗೇಶ್ ಇತರರಿದ್ದರು. ಇದೇ ಸಂದರ್ಭದಲ್ಲಿ ಹಾಲು ಉತ್ಪಾದಕರನ್ನು ಸನ್ಮಾನಿಸಿ ಗೌರವಿಸಲಾಯಿತು.