ಕಾವ್ಯದ ಮೂಲಕ ತತ್ವದರ್ಶನ ಕಟ್ಟಿಕೊಟ್ಟ ಕವಿ ಬೇಂದ್ರೆ

13 Dwd 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಜನಸಾಮಾನ್ಯರ ಆಡುಭಾಷೆಯಲ್ಲಿ, ಅವರ ಜೀವನಶೈಲಿಯಲ್ಲಿ ಅಡಗಿದ ತತ್ವ ದರ್ಶನವನ್ನು ತಮ್ಮ ಕಾವ್ಯದ ಮೂಲಕ ಕಟ್ಟಿಕೊಟ್ಟ ಕನ್ನಡದ ಕವಿ ಬೇಂದ್ರೆ ಎಂದು ಸಾಹಿತಿ ಡಾ. ಜಿ.ಬಿ. ಹರೀಶ ಹೇಳಿದರು.

ನಗರದ ಸಾಧನಕೇರಿಯ ಬೇಂದ್ರೆ ಭವನದಲ್ಲಿ ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ನಿಂದ ಶನಿವಾರ ಏರ್ಪಡಿಸಿದ್ದ ಬೇಂದ್ರೆಯವರ ನಾಕುತಂತಿ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಸಂದ ಸುವರ್ಣ ಸಂಭ್ರಮದ ಉಪನ್ಯಾಸ ಮಾಲೆ ಉದ್ಘಾಟಿಸಿ ಅವರು ಹೇಳಿದರು.

ಬೇಂದ್ರೆಯವರನ್ನು ಓದುವುದೆಂದರೆ ಇಡೀ ಕನ್ನಡ ಸಾಹಿತ್ಯವನ್ನು ಮರು ಓದುವುದೆಂದರ್ಥ. ಶಬ್ದ ಗಾರುಡಿಗ ಬೇಂದ್ರೆಯವರು ಶಬ್ದದಲ್ಲೇ ನಾದ ಹುಡುಕಿದ ಕವಿ. ಅವರ ಕಾವ್ಯದಲ್ಲಿ ನಾದವೇ ಕಾವ್ಯದ ವಸ್ತುವಾಗುತ್ತ ಹೋಗುತ್ತದೆ. ತತ್ವ ಪದಕಾರರ ಸತ್ವವನ್ನು ಹೀರಿಕೊಂಡು ಬೇಂದ್ರೆ ಹೊರಹೊಮ್ಮುತ್ತಾರೆ. ಅವರ ಕಾವ್ಯವನ್ನು ಹಲವು ಹಂತಗಳಲ್ಲಿ ಅರ್ಥೈಸಿಕೊಳ್ಳಲು ಸಾಧ್ಯವಿದೆಯಾದರೂ ಬೇಂದ್ರೆಯವರನ್ನು ಇಡಿಯಾಗಿ ದಕ್ಕಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದರು.

ಸರಣಿ ಉಪನ್ಯಾಸ ಮಾಲಿಕೆಯ ಸಂಯೋಜಕ ಪ್ರೊ. ಬಸವರಾಜ ಡೋಣೂರ ಮಾತನಾಡಿ, ಬೇಂದ್ರೆ ಮತ್ತು ಅಂಬಿಕಾತನಯದತ್ತ ಎರಡಕ್ಕೂ ಪ್ರತ್ಯೇಕ ಅಸ್ತಿತ್ವಗಳಿವೆ. ಬೇಂದ್ರೆ ಕಾವ್ಯ ಅಜರಾಮರ. ಅದು ಒಬ್ಬ ಶ್ರೇಷ್ಠ ಕವಿಯ ಶಕ್ತಿ ಎಂದರು.

ಬೇ0ದ್ರೆ ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ರಘುನಂದನ್, ಡಾ. ಶಶಿಧರ ನರೇಂದ್ರ, ಅರವಿಂದ ಕುಲಕರ್ಣಿ, ನರಸಿಂಹ ಪರಾಂಜಪೆ, ಡಾ. ಅರವಿಂದ ಯಾಳಗಿ, ಪ್ರೊ. ಶಾಂತಿನಾಥ ದಿಬ್ಬದ, ಡಾ. ಸಂಗಮನಾಥ ಲೋಕಾಪುರ, ಶ್ರೀನಿವಾಸ ವಾಡಪ್ಪಿ, ಡಾ. ಬಸವರಾಜ ಅಕ್ಕಿ, ಡಾ. ಆನಂದ ಪಾಟೀಲ, ಡಾ. ಶರಭೇಂದ್ರಸ್ವಾಮಿ ಬಿ.ಎಂ., ಡಾ. ಡಿ.ಬಿ. ಕರಡೋಣಿ, ಇತರರಿದ್ದರು.

ಡಾ. ವಿಜಯಲಕ್ಷ್ಮೀ ದಾನರಡ್ಡಿ ನಿರೂಪಿಸಿದರು. ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸೊಲಗಿ ಸ್ವಾಗತಿಸಿದರು. ಪ್ರಕಾಶ ಬಾಳಿಕಾಯಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net