

ಸೋಮವಾರಪೇಟೆ: ಜೇಸಿ ಸೋಮವಾರಪೇಟೆ ಪುಷ್ಪಗಿರಿ ಸಂಸ್ಥೆ ವತಿಯಿಂದ ನ.6ರಿಂದ 10ರವರೆಗೆ ಸುವರ್ಣ ಸಂಭ್ರಮ ಜೇಸಿ ಸಪ್ತಾಹ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷೆ ಜಗದಾಂಭ ಗುರುಪ್ರಸಾದ್ ತಿಳಿಸಿದರು.
ಪಟ್ಟಣದ ನಂಜಮ್ಮ ಕಲ್ಯಾಣ ಮಂಟಪದಲ್ಲಿ ನ.6ರಂದು ಸಂಜೆ 6.30ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. 7.30ಕ್ಕೆ ವಿದ್ಯಾರ್ಥಿಗಳಿಗೆ ಮೂರು ವಿಭಾಗಗಳಲ್ಲಿ ಛದ್ಮವೇಷ ಸ್ಪರ್ಧೆ ನಡೆಯಲಿದೆ. ನ.7ರಂದು ಬೆಳಗ್ಗೆ 10.30ಕ್ಕೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮೂರು ವಿಭಾಗಗಳಲ್ಲಿ ಚದುರಂಗ ಸ್ಪರ್ಧೆ ನಡೆಯಲಿದೆ. ಸಂಜೆ 6.30ಕ್ಕೆ ಮಹಿಳಾ ವಿಭಾಗದಿಂದ ಅಮ್ಮನ ಮಡಿಲು ಎಂಬ ಅಮ್ಮ ಮತ್ತು ಮಕ್ಕಳ ಭಾಂದವ್ಯದ ಸ್ಪರ್ಧೆ ನಡೆಯಲಿದೆ. ನ.8ರಂದು ವಿದ್ಯಾರ್ಥಿಗಳಿಗೆ ಬರವಣಿಗೆ ಸ್ಪರ್ಧೆ, ಸ್ಥಳದಲ್ಲಿ ಕ್ಲೇ ಕ್ರಾಪ್ಟ್ ಸ್ಪರ್ಧೆ, ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಮತ್ತು ಸಾರ್ವಜನಿಕರ ವಿಭಾಗದ ಗ್ರೂಪ್ ಡಾನ್ಸ್ ಸ್ಪರ್ಧೆ ನಡೆಯಲಿದೆ. ಮೊದಲು ಬಂದ 10 ತಂಡಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನ.9ರಂದು ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕ ಮ್ಯಾರಥಾನ್ ಸ್ಪರ್ಧೆ ಜೇಸಿ ವೇದಿಕೆ ಮುಂಭಾಗದಿಂದ ಪ್ರಾರಂಭವಾಗಲಿದೆ. ಜೂನಿಯರ್ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಗೆ ನಿಧಾನವಾಗಿ ಸೈಕಲ್ ಚಲಿಸುವ ಸ್ಪರ್ಧೆ, ಪುರುಷರಿಗೆ ನಿಧಾನವಾಗಿ ಮೋಟಾರ್ ಸೈಕಲ್ ಚಲಿಸುವ ಸ್ಪರ್ಧೆ ಹಾಗೂ 4 ಚಕ್ರ ವಾಹನಗಳಿಗೆ ಹಿಂದೆ ಚಲಿಸುವ ಸ್ಪರ್ಧೆ ನಡೆಯಲಿದೆ. ನಂಜಮ್ಮ ಕಲ್ಯಾಣ ಮಂಟಪದಲ್ಲಿ ಮನೋಹರ್ ಮತ್ತು ತಂಡದವರಿಂದ ಪೂರ್ವಿಕ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಯುತ್ತದೆ. ನ.10ಕ್ಕೆ ಮಹಿಳಾ ಸಮಾಜದಲ್ಲಿ ಮೈಸೂರಿನ ಜೆಎಸ್‌ಎಸ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಸಾರ್ವಜನಿಕರಿಗೆ ಆರೋಗ್ಯ ಉಚಿತ ತಪಾಸಣಾ ಶಿಬಿರ, ಸಂಜೆ 6.30ಕ್ಕೆ ನಂಜಮ್ಮ ಕಲ್ಯಾಣ ಮಂಟಪದಲ್ಲಿ ಸಮಾರೋಪ ಸಮಾರಂಭ, ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವಿನುತಾ ಸುದೀಪ್, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ರಾಜೇಶ್, ಸಪ್ತಾಹದ ಯೋಜನಾ ನಿರ್ದೇಶಕ ಎಂ.ಪಿ.ರಾಜೇಶ್, ಕಾರ್ಯಕ್ರಮ ನಿರ್ದೇಶಕಿ ಮಂಜುಳಾ ಸುಬ್ರಮಣಿ ಇದ್ದರು.