

ಮಂಡ್ಯ: ಪಾಂಡವಪುರ ತಾಲೂಕಿನ ಕುಂತಿಬೆಟ್ಟದ ಶಂಕರಾನಂದ ಭಾರತಿ ವಿದ್ಯಾಪೀಠದಲ್ಲಿ 50ನೇ ವರ್ಷದ ಸುವರ್ಣ ಮಹೋತ್ಸವ ಸಮಾರಂಭವನ್ನು ನ.18ರಂದು ಆಯೋಜಿಸಲಾಗಿದೆ ಎಂದು ಕಾರ್ಯಕಾರಿ ಮಂಡಳಿ ಅಧ್ಯಕ್ಷ ಎಚ್.ಎಲ್.ನಂಜೇಗೌಡ ತಿಳಿಸಿದರು.
ಶಂಕರಾನಂದ ಭಾರತಿ ವಿದ್ಯಾಪೀಠ ಮತ್ತು ಕುವೆಂಪು ಪ್ರೌಢಶಾಲೆಯು 50 ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ಶಾಲೆಯ ಸಿ.ಮರೀಗೌಡ ವೇದಿಕೆಯಲ್ಲಿ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸುವರು. ಸುತ್ತೂರು ಮಹಾಸಂಸ್ಥಾನ ಮಠದ ಶಿವರಾತ್ರೀಶ್ವರ ದೇಶೀಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸುವರು. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸುವ ಜತೆಗೆ ಸಿ.ಮರೀಗೌಡರ ಪ್ರತಿಮೆ ಅನಾವರಣ ಮಾಡುವರು. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಮಹಾದ್ವಾರ ಉದ್ಘಾಟಿಸುವರು. ಶಂಕರ ಸುವರ್ಣ ನೆನಪಿನ ಸಂಪುಟವನ್ನು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಬಿಡುಗಡೆ ಮಾಡುವರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಂದು ಮಧ್ಯಾಹ್ನ 1ಗಂಟೆಗೆ ವಿಶೇಷ ಉಪನ್ಯಾಸಗಳು ಇರಲಿದೆ. ಮಧ್ಯಾಹ್ನ 3ಕ್ಕೆ ಕೊಮ್ಮೇರಹಳ್ಳಿ ಆದಿಚುಂಚನಗಿರಿ ಮಹಾಸಂಸ್ಥಾನದ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ಸಮಾರೋಪ ಸಮಾರಂಭದಲ್ಲಿ ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಪ್ರಧಾನ ಭಾಷಣ ಮಾಡುವರು. ಇದೇ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನವಿರಲಿದೆ ಎಂದು ತಿಳಿಸಿದರು.
ಸಂಸ್ಥೆಯ ನಿರ್ದೇಶಕರಾದ ಬಿ.ಹರೀಶ್, ಕೆ.ಎನ್.ಚಂದ್ರಶೇಖರ್ ಹಾಜರಿದ್ದರು.