ಸಿನಿರಸಿಕರ ಹೃದಯ ಗೆದ್ದ ಮಯೂರ

kore
Published on

ಬೆಳಗಾವಿ: ಅದು 1970ರ ದಶಕ ಉತ್ತರ ಕರ್ನಾಟಕದ ಜೀವನಾಡಿಯಾದ ಕೃಷ್ಣಾ ನದಿ ತಟದಲ್ಲಿರುವ ಚಿಕ್ಕೋಡಿ ತಾಲೂಕಿನ ಸುಂದರ ಊರೇ ಅಂಕಲಿ. ಸದಾ ಹಸಿರು ಸೀರೆ ಉಟ್ಟು ಕಂಗೊಳಿಸುವಂತಹ ಬೆಳೆಗಳಿಂದ ಕೂಡಿದ್ದು ರೈತಾಪಿ ಹಾಗೂ ಕೂಲಿ ಕಾರ್ಮಿಕರ ನೆಮ್ಮದಿಯ ತಾಣದ ಕಾರಣದಿಂದಾಗಿ ಪುಟ್ಟ ಅಂಕಲಿ ಗ್ರಾಮ ಜಗತ್ತಿನ ಭೂಪಟದಲ್ಲಿ ತನ್ನನ್ನು ವಿಶೇಷವಾಗಿ ಗುರುತಿಸಿಕೊಳ್ಳುತ್ತಿದೆ. ಅದಕ್ಕೆ ಕಾರಣ ಇಲ್ಲಿನ ಹೃದಯ ಶ್ರೀಮಂತಿಕೆಯನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡಿರುವ ‘ಕೋರೆ ಮನೆತನ’. ಚಿಕ್ಕ ವಯಸ್ಸಿನಲ್ಲಿಯೇ ಇಲ್ಲಿ ಕನ್ನಡ ಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸದುದ್ದೇಶ ಹೊಂದಿದವರು ದೊಡ್ಡ ಮನೆತನದ ಯುವಕ ಡಾ.ಪ್ರಭಾಕರ ಕೋರೆ.

1970ರ ಸುಮಾರಿಗೆ ಈ ಭಾಗದಲ್ಲಿ ಟೂರಿಂಗ್ ಟಾಕೀಜ್‌ಗಳು ಮಾತ್ರ ಇದ್ದವು. ರೈತರು, ವ್ಯಾಪಾರಸ್ಥರು ಹಾಗೂ ಕೂಲಿ ಕಾರ್ಮಿಕರಿಗೆ ಮನರಂಜನೆ ದೂರದ ಮಾತಾಗಿತ್ತು. ಬರೀ ಕೆಲಸ ಅನ್ನುತ್ತಿದ್ದ ಜನರನ್ನು ನೋಡಿದ ಪ್ರಭಾಕರ ಕೋರೆ ಅವರು ತಮ್ಮ ಕುಟುಂಬದ ಹಿರಿಯರಿಗೆ ಚಿತ್ರಮಂದಿರ ಕಟ್ಟುವಂತೆ ಒತ್ತಾಯಿಸಿ, ಅಂದು ತಾವೇ ಮುಂದೆ ನಿಂತು ಬ್ಯಾಂಕ್ ಸಾಲ ಪಡೆದು ಚಿತ್ರಮಂದಿರ ಕಟ್ಟಿಸಿಯೇ ಬಿಟ್ಟರು. ಸದಾ ದುಡಿಯುವ ಜನರಿಗೆ ಸಂಜೆ ವೇಳೆಗಾದರೂ ಕೊಂಚ ನೆಮ್ಮದಿ ಹಾಗೂ ಸಂತೋಷದ ಕ್ಷಣ ಅನುಭವಿಸಲಿ ಎಂದು ದಿನವೊಂದಕ್ಕೆ ಸಂಜೆ 6 ಮತ್ತು ರಾತ್ರಿ 9ಗಂಟೆಗೆ ಚಿತ್ರದ ಎರಡು ಶೋ ಇಟ್ಟುಕೊಂಡರು. ಇಡೀ ದಿನ ದುಡಿದ ಜನ ವಾರಕ್ಕೊಮ್ಮೆಯಾದರೂ ತಮ್ಮ ಮಕ್ಕಳು, ಮೊಮ್ಮಕ್ಕಳೊಂದಿಗೆ ಒಳ್ಳೆಯ ಸಿನಿಮಾ ನೋಡಿ ಸಂತೋಷಗೊಂಡು ತಮ್ಮ ಬದುಕನ್ನು ಇನ್ನಷ್ಟು ಸುಂದರವಾಗಿ ಕಟ್ಟಿಕೊಳ್ಳಲಿ ಎನ್ನುವ ಉದ್ದೇಶ ಅವರದಾಗಿತ್ತು. ಅದರಂತೆ ಅತ್ಯಂತ ಕಡಿಮೆ ಬೆಲೆಗೆ ಅಂದರೆ 1 ರೂ., 1.50ರೂ.ಟಿಕೆಟ್ ಇಟ್ಟಿದ್ದರು. 1975ರಲ್ಲಿ ಮೂರು ಲಕ್ಷ ರೂಪಾಯಿಗಳ ಬ್ಯಾಂಕ್ ಸಾಲದಿಂದ ನಿರ್ಮಾಣಗೊಂಡ ಚಿತ್ರಮಂದಿರದ ಮೊದಲ ಸಿನೆಮಾ ದೇವರ ಗುಡಿ. ಇದರ ಮೊದಲ ಪ್ರದರ್ಶನದ ಉದ್ಘಾಟನೆಗೆ ಬಂದವರು ಅಂದಿನ ಕೈಗಾರಿಕಾ ಸಚಿವರಾಗಿದ್ದ ಎಚ್.ವಿ. ಕೌಜಲಗಿ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಹೋದರ ಚಿದಾನಂದ ಕೋರೆ ವಹಿಸಿದ್ದರು. ಅಂದಿನ ಕಾಲಕ್ಕೆ ಚಿಕ್ಕೋಡಿ ಭಾಗದಲ್ಲಿ ಈ ಚಿತ್ರಮಂದಿರದಷ್ಟು ಸುಸಜ್ಜಿತ ಚಿತ್ರಮಂದಿರಗಳೇ ಇರಲಿಲ್ಲ. ಅಂದು ಈ ಭಾಗದ ಜನರಿಗೆ ಮರಭೂಮಿಯಲ್ಲಿ ಓಯಾಸಿಸ್‌ದಂತೆ ಈ ಚಿತ್ರಮಂದಿರ ಕಂಡದ್ದು ವಿಶೇಷ.

1980ರಲ್ಲಿ ಚಿತ್ರಮಂದಿರದ ಐದನೇ ವಾರ್ಷಿಕೋತ್ಸವಕ್ಕೆ ಪ್ರಸಿದ್ಧ ಕಲಾವಿದರಾದ ಸೂಪರ್‌ಸ್ಟಾರ್ ವಿಷ್ಣುವರ್ಧನ ಹಾಗೂ ಭಾರತಿ, ಶಿವರಾಮ ಆಗಮಿಸಿದ್ದರು. 25ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಸಿದ್ಧ ನಟಿ ಜಯಪ್ರದಾ, ರಾಘವೇಂದ್ರ ರಾಜಕುಮಾರ, ಪುನೀತ ರಾಜಕುಮಾರ ಆಗಮಿಸಿದ್ದರು. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಚಂದ್ರು, ಉಮಾಶ್ರೀ ಮುಂತಾದ ದಿಗ್ಗಜ ಕಲಾವಿದರು ಭೇಟಿ ನೀಡಿದರು.

ಕನ್ನಡಗಟ್ಟಿಗೊಳಿಸಿದ ಟಾಕೀಜ್: ಅಂದು ಸಹೋದರರೊಡನೆ ಚರ್ಚಿಸಿ ಹಠಕ್ಕೆ ಬಿದ್ದು ಸಾಲ ಪಡೆದು ಚಿತ್ರ ಮಂದಿರ ನಿರ್ಮಿಸಿದ್ದರಿಂದಲೇ ಗಡಿಯಲ್ಲಿ ಕನ್ನಡ ಗಟ್ಟಿಯಾಗಿ ನೆಲೆಯೂರಿತು. ಗಮನಿಸುವ ವಿಚಾರವೆಂದರೆ 1954-55ರ ಸುಮಾರಿಗೆ ಕರ್ನಾಟಕ ಏಕೀಕರಣ ಚಳವಳಿಯ ಮೊದಲ ಸಭೆ ಆರಂಭಗೊಂಡಿದ್ದೆ ಅಂಕಲಿಯಲ್ಲಿ. ಅದಕ್ಕೆ ಬೆನ್ನೆಲುಬಾಗಿ ನಿಂತಿದ್ದೆ ಕೋರೆ ಮನೆತನ.

ಡಾ. ಪ್ರಭಾಕರ ಕೋರೆ ಅವರಿಗೆ ಕನ್ನಡವೆಂದರೆ ಜೀವ. ಸದಾ ಕನ್ನಡ ಸಿನೆಮಾ ಹಾಗೂ ಭಾವಗೀತೆಗಳನ್ನು ಕೇಳುತ್ತ ಬೆಳೆದಿದ್ದರಿಂದ ಕನ್ನಡ ಪ್ರೀತಿ ಇನ್ನಷ್ಟು ಹೆಚ್ಚಿತ್ತು. ಅವರ ಕನ್ನಡ ಸಿನೆಮಾ ಪ್ರೀತಿಗೆ ಸಾಕ್ಷಿ ಎಂದರೆ ಈ ಮಯೂರ ಚಿತ್ರಮಂದಿರದಲ್ಲಿ ಇಂದಿನವರೆಗೂ 2210 ಚಿತ್ರಗಳು ಇಲ್ಲಿ ಪ್ರದರ್ಶನಗೊಂಡಿವೆ. ಅದರಲ್ಲಿ 1962 ಚಿತ್ರಗಳು ಕನ್ನಡದ್ದು ಎನ್ನುವದು ವಿಶೇಷ.

ಗಡಿಯಲ್ಲಿನ ಜನ ಕನ್ನಡದೊಂದಿಗೆ ಸದಾ ಇರಬೇಕೆಂಬ ಸದಾಶೆಯ ಹೊಂದಿದ ಡಾ.ಪ್ರಭಾಕರ ಕೋರೆ ಅವರಿಗೆ ಪ್ರಭಾಕರ ಕೋರೆ ಅವರೇ ಸಾಟಿ. ಸದಾ ಕನ್ನಡ-ಕನ್ನಡಿಗ-ಕರ್ನಾಟಕದ ಬಗ್ಗೆ ಚಿಂತಿಸುವ ಇವರದು ಕನ್ನಡ ಮನಸ್ಸು. ಮರಾಠಿಮಯ ವಾತಾವರಣದಲ್ಲಿ ಕನ್ನಡ ಶಾಲೆಗಳ ಮೂಲಕ, ಕನ್ನಡ ಸಿನೆಮಾಗಳ ಮೂಲಕ ತಮ್ಮ ಡಾ.ಪ್ರಭಾಕರ ಕೋರೆ ಕೋ-ಆಪ್ ಕ್ರೆಡಿಟ್ ಸೊಸೈಟಿಗಳ ಹಾಗೂ ಕಾರ್ಖಾನೆಗಳ ಮೂಲಕ ಗಡಿಯಲ್ಲಿ ಉದ್ಯೋಗ ಸೃಷ್ಟಿಸಿ ಕನ್ನಡ ಹಾಗೂ ಕನ್ನಡಿಗನನ್ನು ಗಟ್ಟಿಯಾಗಿಸಿ ಸ್ವಾಭಿಮಾನಿಯಾಗಿಸಿದ ಕೀರ್ತಿ ಡಾ.ಪ್ರಭಾಕರ ಕೋರೆ ಅವರಿಗೆ ಸಲ್ಲುತ್ತದೆ. ಇಂದು ಮಯೂರ ಚಿತ್ರಮಂದಿರದ ಸುವರ್ಣ ಮಹೋತ್ಸವಕ್ಕೆ ಇಷ್ಟೊಂದು ಸಂಖ್ಯೆಯ ಪ್ರಸಿದ್ದ ನಟ-ನಟಿಯರು ಆಗಮಿಸುತ್ತಿರುವದು ಈ ಭಾಗದಲ್ಲಿ ಹೊಸ ಸಂಚಲನ ಮೂಡಿಸಿ ಹೊಸ ಇತಿಹಾಸ ಬರೆಯುತ್ತಿದೆ.

ಲೇಖಕ: ಡಾ.ಸುಬ್ರಾವ ಎಂಟೆತ್ತಿನವರ, ಚಿಕ್ಕೋಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net