

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ದೈವಜ್ಞ ಬ್ರಾಹ್ಮಣ ಸಮಾಜ ಸೇವಾ ಸಂಘದ ಸುವರ್ಣ ಮಹೋತ್ಸವ, ದೈವಜ್ಞ ಬ್ರಾಹ್ಮಣ ಸಮಾಜ ಹಾಗೂ ಲೋಕ ಕಲ್ಯಾಣಾರ್ಥ ಶ್ರೀ ಗಣೇಶ ಲಕ್ಷ ಮೋದಕ ಹವನ ಕಾರ್ಯಕ್ರಮಗಳನ್ನು ಎನ್ಟಿಟಿಎಫ್ ಬಳಿಯ ದೈವಜ್ಞ ಸಮುದಾಯ ಭವನದಲ್ಲಿ ಏ. 5, 6ರಂದು ಏರ್ಪಡಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ರವಿ ಗಾಂವಕರ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. 5ರಂದು ಬೆಳಗ್ಗೆ 7 ಗಂಟೆಗೆ ಶ್ರೀ ಗಣೇಶ ಲಕ್ಷ ಮೋದಕ ಹವನವು ವೇದಮೂರ್ತಿ ಯೋಗೀಶ ಭಟ್ ನೇತೃತ್ವದಲ್ಲಿ ಆರಂಭವಾಗಲಿದೆ. ಬೆಳಗ್ಗೆ 10.30ಕ್ಕೆ ಕರ್ಕಿ ಮಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿಗೆ ಪೂರ್ಣಕುಂಭ ಸ್ವಾಗತ ಹಾಗೂ ಪಾದ ಪೂಜೆ, 11.30ಕ್ಕೆ ಪೂರ್ಣಾಹುತಿ ನೆರವೇರಲಿದೆ ಎಂದರು.
ಮಧ್ಯಾಹ್ನ 12 ಗಂಟೆಗೆ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ಏರ್ಪಡಿಸಿರುವ ಸಭಾ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳಾದ ರೇಖಾ ರಾಯ್ಕರ್ ಕುಮಾರ, ಮನೋಜ ಕುಮಾರ, ವಿನಾಯಕ ಪಾಲನಕರ, ಎಸಿಪಿ ಪ್ರಶಾಂತ ಸಿದ್ಧನಗೌಡರ, ಮೇಜರ್ ಸಂದೇಶ ಕುರಡೇಕರ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಮಹೇಶ ಶೆಟ್ಟಿ, ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ ಆಗಮಿಸುವರು. ಸಂಜೆ 6.30ಕ್ಕೆ ಭಸ್ಮಾಸುರ ಮೋಹಿನಿ ದೃಶ್ಯ ರೂಪಕ ಮತ್ತು ಮೂರುಮುತ್ತು ಕೊಂಕಣಿ ಹಾಸ್ಯ ನಾಟಕ ಪ್ರದರ್ಶನವಾಗಲಿದೆ ಎಂದರು.
ಏ. 6ರಂದು ಬೆಳಗ್ಗೆ 10.30ಕ್ಕೆ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಏರ್ಪಡಿಸಿರುವ ಸಮಾರಂಭಕ್ಕೆ ಅತಿಥಿಗಳಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಸಂತೋಷ ಲಾಡ್, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಪ್ರಸಾದ ಅಬ್ಬಯ್ಯ, ಮಾಜಿ ಶಾಸಕ ಗಂಗಾಧರ ಭಟ್, ದೀಪಕ ಚಿಂಚೋರೆ ಆಗಮಿಸುವರು. ಸಂಘದ ಅಧ್ಯಕ್ಷ ರವಿ ಗಾಂವಕರ ಅಧ್ಯಕ್ಷತೆ ವಹಿಸುವರು. 2 ದಿನಗಳ ಸಮಾರಂಭದಲ್ಲಿ ಸಮಾಜದ ಹಿರಿಯರನ್ನು ಗೌರವಿಸಲಾಗುವುದು ಎಂದರು.
ಡಾ. ಉದಯ ರಾಯ್ಕರ್, ವಸಂತ ಅಣವೇಕರ, ರಾಮಚಂದ್ರ ಶೇಟ, ಶ್ರೀಧರ ಶೇಟ, ಸಾಯಿರಾಮ ವೆರ್ಣೇಕರ, ಸುನಿತಾ ಗಾಂವಕರ, ಇತರರು ಇದ್ದರು.