ರಾಷ್ಟ್ರ ಮಟ್ಟದಲ್ಲಿ ಹೊಳೆಯುತ್ತಿದೆ ಚಿನ್ನದ ಮೀನು!

1692788982254
Published on


ಅವಿನಾಶ್ ಜೈನಹಳ್ಳಿ ಮೈಸೂರು

ಸಾಂಸ್ಕೃತಿಕ ನಗರಿ ಮೈಸೂರಿನ ಚಿನ್ನದ ಮೀನೊಂದು ರಾಷ್ಟ್ರ ಮಟ್ಟದಲ್ಲಿ ಹೊಳೆಯುತ್ತಿದ್ದು, ಕರುನಾಡ ಹೆಸರನ್ನು ವಿಶ್ವ ಈಜು ಕ್ಷೇತ್ರದಲ್ಲಿ ಮಿಂಚಿಸಲು ಸಿದ್ಧವಾಗುತ್ತಿದೆ…!


ಬಹಳ ಹಿಂದಿನಿಂದ ನಗರದಲ್ಲಿ ಕಾಡುತ್ತಿರುವ ಈಜು ಪ್ರತಿಭೆಗಳ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಪ್ರತಿಭೆ, ಸಾಮರ್ಥ್ಯ, ಶ್ರಮ, ಆಸಕ್ತಿ ಮತ್ತು ಸ್ಪಷ್ಟ ಗುರಿಯೊಂದಿಗೆ ಭವಿಷ್ಯದ ತಾರೆ ಎಸ್.ತಾನ್ಯಾ ಸಿದ್ಧಳಾಗುತ್ತಿದ್ದಾಳೆ.

ಈಜು ಕ್ರೀಡೆಯ ರಾಜ್ಯ ಹಾಗೂ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಪದಕ ಬೇಟೆಯಾಡಿರುವ ತ್ಯಾನ್ಯಾ ವಯಸ್ಸು ಇನ್ನೂ 14 ವರ್ಷ. ಪ್ರಸ್ತುತ ಭುವನೇಶ್ವರದಲ್ಲಿ ಮುಕ್ತಾಯಗೊಂಡ ರಾಷ್ಟ್ರೀಯ ಜೂನಿಯರ್ ಮತ್ತು ಸಬ್ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಎರಡು ಚಿನ್ನ ಸೇರಿದಂತೆ ಮೂರು ಪದಕ ಪಡೆದು ಗಮನ ಸೆಳೆದಿದ್ದಾಳೆ. ಗ್ರೂಪ್ 2 ವಿಭಾಗದ 200 ಮೀಟರ್ ಬ್ರೆಸ್ಟ್‌ಸ್ಟ್ರೋಕ್ ಹಾಗೂ 400 ಮೀಟರ್ ವೈಯಕ್ತಿಕ ಮಿಡ್ಲೆ(ಐಎಂ)ಯಲ್ಲಿ ಚಿನ್ನ ಹಾಗೂ 50 ಮೀಟರ್ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಕಂಚಿನ ಪದಕ ಪಡೆದಿದ್ದಾಳೆ. ಈ ಪೈಕಿ 2.44.21( 2.43.97 ರಾಷ್ಟ್ರೀಯ ದಾಖಲೆ) ನಿಮಿಷದಲ್ಲಿ 200 ಮೀಟರ್ ಬ್ರೆಸ್ಟ್‌ಸ್ಟ್ರೋಕ್ ಈಜಿ ಗಮನ ಸೆಳೆದಿದ್ದಾಳೆ. ಕೇವಲ 0.24 ಮಿಲಿ ಸೆಕೆಂಡ್ ಅಂತರದಲ್ಲಿ ರಾಷ್ಟ್ರೀಯ ದಾಖಲೆ ತಪ್ಪಿದೆ.

ಒಟ್ಟು 45 ಪದಕಗಳ ಬೇಟೆ

ಮೈಸೂರಿನ ಈಜು ಕ್ರೀಡೆಯ ಭರವಸೆಯಾಗಿರುವ ತಾನ್ಯಾ ರಾಷ್ಟ್ರ, ರಾಜ್ಯ, ದಕ್ಷಿಣ ವಲಯ, ಸಿಬಿಎಸ್‌ಇ ದಕ್ಷಿಣ ವಲಯ, ಖೇಲೋ ಇಂಡಿಯಾ ಮಹಿಳಾ ಆವೃತ್ತಿ, ಕರ್ನಾಟಕ ಮಿನಿ ಒಲಿಂಪಿಕ್ಸ್ ಗೇಮ್ಸ್, ಸಿಬಿಎಸ್‌ಇ ನ್ಯಾಷನಲ್ ಈಜು ಚಾಂಪಿಯನ್‌ಶಿಪ್‌ಗಳಿಂದ ಇಲ್ಲಿಯವರೆಗೆ ಒಟ್ಟಾರೆ 21 ಚಿನ್ನ ಸೇರಿದಂತೆ ಒಟ್ಟು 45 ಪದಕ ಗಳಿಸಿದ್ದಾಳೆ. 10 ಬೆಳ್ಳಿ, 14 ಕಂಚು ಪದಕಗಳನ್ನು ಬೇಟೆಯಾಡಿದ್ದಾಳೆ. 2019ರಲ್ಲಿ ಮೈಸೂರಿನಲ್ಲಿ ನಡೆದಿದ್ದ ರಾಜ್ಯ ಮಟ್ಟದ ಸಬ್ ಜೂನಿಯರ್, ಜೂನಿಯರ್ ಈಜು ಸ್ಪರ್ಧೆಯಲ್ಲಿ ಕಂಚಿನ ಪದಕದೊಂದಿಗೆ ಪದಕ ಬೇಟೆ ಆರಂಭಿಸಿದ ತಾನ್ಯಾ, ಅದೇ ವರ್ಷ ಮಂಡ್ಯದಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಒಂದು ಬೆಳ್ಳಿ ಪದಕ ಗಳಿಸಿ ಗಮನ ಸೆಳೆದಳು. 2020ರಲ್ಲಿ ಹೈದರಾಬಾದ್‌ನಲ್ಲಿ ನಡೆದ 32ನೇ ದಕ್ಷಿಣ ವಲಯ ಈಜು ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಒಂದು ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದ್ದಳು.


2021ರಲ್ಲಿ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಸಬ್ ಜೂನಿಯರ್ ಈಜು ಸ್ಪರ್ಧೆಯಲ್ಲಿ 2 ಚಿನ್ನ, 1 ಬೆಳ್ಳಿ ಪಡೆದಳು. 2022ರಲ್ಲಿ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಮಿನಿ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ 1 ಬೆಳ್ಳಿ, 1 ಕಂಚು, ರಾಜ್ಯ ಈಜು ಚಾಂಪಿಯನ್‌ಶಿಪ್‌ನಲ್ಲಿ 1 ಕಂಚು, ಮಹಿಳಾ ಖೇಲೋ ಇಂಡಿಯಾ-1 ಸ್ಪರ್ಧೆಯಲ್ಲಿ 1 ಕಂಚು, ಮಹಿಳಾ ಖೇಲೋ ಇಂಡಿಯಾ-2 ಸ್ಪರ್ಧೆಯಲ್ಲಿ 2 ಚಿನ್ನ, 2 ಕಂಚು, ಸಿಬಿಎಸ್‌ಇ ದಕ್ಷಿಣ ವಲಯ ಸ್ಪರ್ಧೆಯಲ್ಲಿ 2 ಚಿನ್ನ, 2 ಬೆಳ್ಳಿ, ಮಂಡ್ಯದಲ್ಲಿ ನಡೆದ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ 2 ಚಿನ್ನ, 2 ಬೆಳ್ಳಿ, 2 ಕಂಚು, ತಿರುವನಂತಪುರಂನಲ್ಲಿ ನಡೆದ 33ನೇ ದಕ್ಷಿಣ ವಲಯ ಈಜು ಚಾಂಪಿಯನ್‌ಶಿಪ್‌ನಲ್ಲಿ 3 ಚಿನ್ನ, 1 ಬೆಳ್ಳಿ ಪದಕಗಳನ್ನು ಗಳಿಸಿಕೊಂಡಿದ್ದಾಳೆ.

2023ನೇ ಸಾಲಿನಲ್ಲಿ ನಡೆದ ಸಿಬಿಎಸ್‌ಇ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ 4 ಚಿನ್ನ, ಕರ್ನಾಟಕ ರಾಜ್ಯ ಸಬ್ ಜೂನಿಯರ್, ಜೂನಿಯರ್ ಸ್ಪರ್ಧೆಯಲ್ಲಿ 3 ಚಿನ್ನ, 2 ಬೆಳ್ಳಿ, 3 ಕಂಚಿನ ಪದಕದ ಬೇಟೆ ಮುಂದುವರಿಸಿದ್ದಾಳೆ.

ರಾಷ್ಟ್ರ ಮಟ್ಟದಲ್ಲಿ ಮೂರು ಪದಕ ಸಾಧನೆ!

ಇಷ್ಟು ದಿನ ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು ಇತರ ನಗರಗಳ ಪ್ರತಿಭೆಗಳು ಮಾತ್ರ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಪದಕವನ್ನು ಕೊರಳಿಗೇರಿಸಿಕೊಳ್ಳುತ್ತಿದ್ದರು.ಆದರೆ, ಇದೀಗ ಮೈಸೂರಿನ ತಾನ್ಯಾ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲೂ 3 ಪದಕ ಸಾಧನೆ ಮಾಡಿದ ಮೈಸೂರಿನ ಮೊದಲ ಮಹಿಳಾ ಈಜುಪಟು ಎನಿಸಿಕೊಂಡಿದ್ದಾಳೆ. ಈ ಮೂಲಕ ಸಾಂಸ್ಕೃತಿಕ ನಗರಿಯ ಕೊರಗನ್ನು ನೀಗಿಸಿದ್ದಾಳೆ. ಜೆ.ಪಿ.ನಗರದ ಎಸ್.ಪಿ.ಷಡಕ್ಷರಿ ಮತ್ತು ಎನ್.ಶ್ವೇತಾ ದಂಪತಿಯ ಪುತ್ರಿ ತಾನ್ಯಾ, ಶ್ರೀ ಶಾರದಾ ಪಬ್ಲಿಕ್ ಸ್ಕೂಲ್‌ನಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಾಳೆ.


ಬೆಳಗ್ಗೆ, ಸಂಜೆ ಅಭ್ಯಾಸ:

ಭವಿಷ್ಯದಲ್ಲಿ ಕಾಮನ್ ವೆಲ್ತ್, ಏಷ್ಯನ್ ಗೇಮ್ಸ್, ಒಲಿಂಪಿಕ್ಸ್, ವಿಶ್ವ ಈಜು ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ, ಬಹುಮಾನ ಗಳಿಸಬೇಕೆಂಬ ಗುರಿಯೊಂದಿಗೆ ತಾನ್ಯಾ ನಿತ್ಯ ಜೆ.ಪಿ.ನಗರದ ಗ್ಲೋಬಲ್ ಸ್ಪೋರ್ಟ್ಸ್ ಅಸೋಸಿಯೇಷನ್ ಈಜು ಕೊಳದಲ್ಲಿ ಪವನ್‌ಕುಮಾರ್ ಹಾಗೂ ಎಸ್.ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ. ಪ್ರತಿನಿತ್ಯ ಬೆಳಗ್ಗೆ, ಸಂಜೆ ಕಷ್ಟಪಟ್ಟು ಅಭ್ಯಾಸ ನಡೆಸುತ್ತಿದ್ದಾಳೆ. ಬೆಳಗ್ಗೆ 5.45 ರಿಂದ 7.30 ಗಂಟೆ ಹಾಗೂ ಸಂಜೆ 5.15 ರಿಂದ 8 ಗಂಟೆವರೆಗೆ ಅಭ್ಯಾಸ ಮಾಡುತ್ತಿದ್ದಾಳೆ. ಅಂತಾರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಪದಕ ಗೆಲ್ಲಬೇಕು ಎನ್ನುವುದು ತಾನ್ಯಾ ಕನಸು. ಈಕೆ ತನ್ನ 7ನೇ ವಯಸ್ಸಿಗೇ ಈಜು ಅಭ್ಯಾಸ ಮಾಡಲು ಶುರು ಮಾಡಿದಳು. ಮೂರು ವರ್ಷಗಳಲ್ಲಿ ಸ್ಪರ್ಧೆಗೆ ಬೇಕಾದ ಎಲ್ಲ ಕೌಶಲ-ಸಾಮರ್ಥ್ಯಗಳನ್ನು ಪಡೆದಿದ್ದ ತಾನ್ಯಾ, 10ನೇ ವಯಸ್ಸಿಗೆ 10ನೇ ವಯಸ್ಸಿಗೆ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಪದಕ ಬೇಟೆಯಾಡಿ ಎಲ್ಲರ ಗಮನ ಸೆಳೆದಳು.

ಮಗಳ ಸಾಧನೆ ನೋಡಿದರೆ ಖುಷಿಯಾಗುತ್ತದೆ. ಕಾಮನ್ ವೆಲ್ತ್, ಏಷ್ಯನ್ ಗೇಮ್ಸ್, ಒಲಿಂಪಿಕ್ಸ್, ವಿಶ್ವ ಈಜು ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಬೇಕು. ಆ ಸ್ಪರ್ಧೆಗಳಲ್ಲಿ ಪದಕ ಗೆಲ್ಲಬೇಕು ಎನ್ನುವುದು ನನ್ನ ಮತ್ತು ನನ್ನ ಮಗಳ ಕನಸು. ಅವಳ ಎಲ್ಲ ಕನಸಿಗೆ ನಮ್ಮ ಬೆಂಬಲ ಇದೆ.ಎಸ್.ಪಿ.ಷಡಕ್ಷರಿ, ತಾನ್ಯಾ ತಂದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net