ಹೊಸ ಅಗ್ರಹಾರದಲ್ಲಿ ಹೊನ್ನಾರು ಸಂಭ್ರಮ

01 KRN-3
ಕೆ.ಆರ್.ನಗರ ತಾಲೂಕು ಹೊಸ ಅಗ್ರಹಾರ ಗ್ರಾಮದ ಹೊರ ವಲಯದಲ್ಲಿರುವ ಆನಂದ್ ಅವರ ಜಮೀನಿನಲ್ಲಿ ಯುಗಾದಿ ಹೊನ್ನಾರು ಸಂಭ್ರಮ ಕಾರ್ಯಕ್ರಮಕ್ಕೆ ಗಾವಡಗೆರೆ ಗುರು ಲಿಂಗ ಜಂಗಮ ದೇವರ ಮಠದ ಶ್ರೀ ನಟರಾಜ ಸ್ವಾಮೀಜಿ, ಎಚ್.ವಿಶ್ವನಾಥ್, ಮ.ಗು.ಸದಾನಂದಯ್ಯ, ಕರ್ಪೂರವಳ್ಳಿ ಮಹದೇವ್ ನೇಗಿಲ ಮೇಣಿ ಹಿಡಿಯುವ ಮೂಲಕ ಚಾಲನೆ ನೀಡಿದರು.
Published on

ಕೆ.ಆರ್.ನಗರ: ಯುಗಾದಿ ಹಬ್ಬದಂದು ಹೊಸ ಅಗ್ರಹಾರ ಗ್ರಾಮದಲ್ಲಿ ಹೊನ್ನಾರು ಕಟ್ಟಿ ಪೂಜೆ ಸಲ್ಲಿಸಲಾಯಿತು.

ಗ್ರಾಮದ ಹೊರಭಾಗದಲ್ಲಿ ಹನುಮನಹಳ್ಳಿ ರಸ್ತೆಯಲ್ಲಿರುವ ಪ್ರಾಧ್ಯಾಪಕ ಎಚ್.ಸಿ.ಆನಂದ ಅವರ ಜಮೀನಿನಲ್ಲಿ ಗ್ರಾಮದ ಐದು ಮಂದಿ ಯುವಕರು ತಮ್ಮ ರಾಸುಗಳಿಗೆ ನೇಗಿಲನ್ನು ಹೂಡಿದರು. ಈ ವೇಳೆ ಹಳ್ಳಿಯ ಸಂಪ್ರದಾಯವನ್ನು ಪುನರುತ್ಥಾನಗೊಳಿಸಿ, ಗ್ರಾಮಸ್ಥರನ್ನು ಹುರಿದುಂಬಿಸಲು ಆಗಮಿಸಿದ್ದ ಗಾವಡಗೆರೆಯ ಶ್ರೀ ಗುರು ಲಿಂಗ ಜಂಗಮ ದೇವರ ಮಠಾಧೀಶ ಶ್ರೀ ನಟರಾಜ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಅಧಿಕಾರಿಯೂ ಆದ ಶರಣ ಸಾಹಿತ್ಯ ಪರಿಷತ್ ಮೈಸೂರು ನಗರ ಘಟಕದ ಅಧ್ಯಕ್ಷ ಮ.ಗು.ಸದಾನಂದಯ್ಯ, ಪತ್ರಕರ್ತ ಕರ್ಪೂರವಳ್ಳಿ ಮಹದೇವ್ ಅವರು ಮೇಣಿ ಹಿಡಿದು ಚಾವಟಿಯನ್ನು ಬೀಸುತ್ತಾ ಹೊನ್ನಾರಿಗೆ ಚಾಲನೆ ನೀಡಿದರು.

ಬಳಿಕ ಗ್ರಾಮದ ರಾಜಶೇಖರ, ಮೋಹನ, ಮನು ನಾಯಕ, ರಾಮಯ್ಯ, ಗಿರೀಶ ಎಂಬ ಯುವಕರು ಏರುಗಳನ್ನು ಮುನ್ನಡೆಸಿದರು.

ಈ ಸಂದರ್ಭದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಆಧುನಿಕತೆಯ ನಗರ ಜೀವನದ ಆಕರ್ಷಣೆಯಲ್ಲಿ ಹಳ್ಳಿಗಳು ತಮ್ಮ ಸೊಗಡನ್ನು ಮರೆತೇ ಬಿಟ್ಟಿವೆ. ಅಲ್ಲಲ್ಲಿ ಬೆರಳೆಣಿಕೆಯಷ್ಟು ಮಂದಿ ಹೊನ್ನಾರು ಪದ್ಧತಿ ಆಚರಿಸುತ್ತಾ ಬರುತ್ತಿದ್ದರಾದರೂ ಇದು ನಮ್ಮದು ಎಂಬುದನ್ನರಿತು ಸಾಮೂಹಿಕವಾಗಿ ನಡೆಯಬೇಕು ಎಂಬ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಆಯೋಜಿಸಿರುವುದು ಪ್ರಶಂಸನಾರ್ಹ ಎಂದರು.

ನಮ್ಮ ತಂದೆ ಹುಚ್ಚೇಗೌಡರು ಹೀಗೆ ಉಳುತ್ತಿದ್ದಾಗ ನಾವು ನೋಡುತ್ತಿದ್ದ ದೃಶ್ಯ ಇಂದು ಕಣ್ಣಿಗೆ ಕಟ್ಟಿತು. ಇದನ್ನು ನೀವು ಮುಂದುವರಿಸಿಕೊಂಡು ಹೋಗುವ ಮೂಲಕ ಹೆಮ್ಮರವಾಗಿ ಬೆಳೆಸಿ ಎಂದು ಆಶಿಸಿದರು.

ಶ್ರೀ ನಟರಾಜ ಸ್ವಾಮೀಜಿ ಆಶೀರ್ವಚನ ನೀಡಿ, ಹೊನ್ನೇರು ಕಟ್ಟೇವು ಹೊನ್ನಾ ಬೆಳೆದೇವು ಕಾಳು ಬಿತ್ತಿದರೆ ರಾಶಿ ನೀಡುವ ಭೂತಾಯಿಗೆ ನೊಸಲಿಟ್ಟು ನಮಿಸೇವು ಎಂಬ ಜನಪದ ಗೀತೆಯಂತೆ ಈ ಮಣ್ಣಿನಲ್ಲಿ ಶಕ್ತಿ ಹುದುಗಿದೆ ಎಂದರು.

ಮುಖಂಡ ಮ.ಗು. ಸದಾನಂದಯ್ಯ ಮಾತನಾಡಿದರು. ಇದಕ್ಕೂ ಮೊದಲು ಮಧ್ಯಾಹ್ನ ಗ್ರಾಮದ ಬಸವನಗುಡಿಗೆ ಆಗಮಿಸಿದ ಮುಖಂಡರು ಯುಗಾದಿ ಸಂಪ್ರದಾಯ ಪಂಚಾಂಗ ಶ್ರವಣಕ್ಕೆ ಅನುವು ಮಾಡಿಕೊಟ್ಟರು. ಗ್ರಾಮದ ಹಿರಿಯರಾದ ರಾಮರಾವ್ ಅವರು ಪಂಚಾಂಗ ಶ್ರವಣ ಮಾಡಿದರು. ಇದೇ ವೇಳೆ ಆನಂದ ಅವರು ತಮ್ಮ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾದ ಬಸವರಾಜು, ವೀರಭದ್ರ ಶೆಟ್ಟಿ ಮತ್ತು ನಾಗೇಗೌಡ ಅವರೊಂದಿಗೆ ಶಾಲೆಯ ಆಯಾ ಆಗಿದ್ದ ಗ್ರಾಮದ ಸರೋಜಮ್ಮ ಅವರನ್ನು ಗೌರವಿಸಿದರು.

ಆ ಹೊತ್ತಿಗೆ ಬಸವನಗುಡಿಯ ಮುಂದೆ ಗ್ರಾಮದ ಯುವಕರು ತಮ್ಮ ಜಾನುವಾರುಗಳ ಕೊರಳಿಗೆ ಗೆಜ್ಜೆ ಕಟ್ಟಿ, ಕೊಂಬುಗಳಿಗೆ ಬಣ್ಣ ಬಣ್ಣದ ಕುಚ್ಚು ಟೇಪುಗಳಿಂದ ಅಲಂಕರಿಸಿಕೊಂಡು ಬಂದು ಸಾಲಾಗಿ ನಿಲ್ಲಿಸಿದ್ದರು. ಬಸವ ದೇವರ ಪೂಜೆ ಮಾಡುವ ಮಂಜುನಾಥ ಮತ್ತು ಷಡಕ್ಷರಿ ಅವರು ಜಾನುವಾರುಗಳಿಗೆ ಅರಿಶಿನ-ಕುಂಕುಮ ಇಟ್ಟು, ತೀರ್ಥ ಹಾಕುವ ಮೂಲಕ ಶುಭ ಕೋರಿದರು. ಈ ವೇಳೆ ಅಲ್ಲಿ ನೆರೆದಿದ್ದವರಿಗೆಲ್ಲ ಮಜ್ಜಿಗೆ ವಿತರಿಸಲಾಯಿತು.

ಬಳಿಕ ನೇಗಿಲನ್ನು ಹೊತ್ತ ರಾಸುಗಳೊಂದಿಗೆ ತಳವಾರರಾದ ಸ್ವಾಮಿ ಮತ್ತು ರಾಮ ಅವರ ತಮಟೆಯ ಸದ್ದಿನಲ್ಲಿ ಊರ ಪ್ರದಕ್ಷಿಣೆ ಹೊರಟ ರೈತರು ಹೊಲದತ್ತ ಸಾಗಿದರು.

ಹೊಲದಲ್ಲಿ ಹೊನ್ನಾರು ಮುಗಿಸಿ ಮುಸ್ಸಂಜೆ ವೇಳೆಗೆ ಊರಿಗೆ ವಾಪಸಾದ ಯುವಕರು ತಮ್ಮ ರಾಸುಗಳನ್ನು ಬಂಡಿಗಳಿಗೆ ಹೂಡಿ ಊರಿನ ಬೀದಿಗಳಲ್ಲಿ ಮೂರು ಸುತ್ತು ಹಾಕಿ ಸಂಭ್ರಮಿಸಿದರು.

ಪತ್ರಕರ್ತೆ ಮಾಚಮ್ಮ ಮಲ್ಲಿಗೆ, ಉಪನ್ಯಾಸಕಿ ಶೋಭಾ, ಗ್ರಾಮದ ಮುಖಂಡರಾದ ಸಿದ್ದೇಗೌಡ, ಸೀತಾರಾಮ ನಾಯಕ, ಪುಟ್ಟೇಗೌಡ, ಪ್ರಕಾಶ್, ಚಂದ್ರಪ್ಪ, ಗೋಪಾಲ್, ಕುಮಾರ್, ಮನು, ರಂಗಸ್ವಾಮಿ, ಜಲೇಂದ್ರ, ಲೋಕೇಶ, ಪ್ರಶಾಂತ್, ಮಣಿಯಮ್ಮ, ಕಮಲಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net