ರಾಯರಡ್ಡಿ ರಾಜ್ಯದ ನಾಯಕತ್ವ ವಹಿಸಲಿ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಹೇಳಿಕೆ

Development book launch
ಯಲಬುರ್ಗಾದಲ್ಲಿ ‘ಯಲಬುರ್ಗಾ ಅಭಿವೃದ್ಧಿಯ ಸುವರ್ಣಯುಗ’ ಪುಸ್ತಕವನ್ನು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಬಿಡುಗಡೆಗೊಳಿಸಿದರು. ನಿವೃತ್ತ ಡಿಜಿಪಿ ಶಂಕರ ಬಿದರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಪುರ, ಭೂದಾಖಲೆಗಳ ಇಲಾಖೆಯ ನಜ್ಮಾ, ಎಸ್ಪಿ ಡಾ. ರಾಮ್ ಎಲ್.ಅರಸಿದ್ದಿ ಇತರರಿದ್ದರು.
Published on

ಯಲಬುರ್ಗಾ: ರಾಜಕಾರಣದಲ್ಲಿ ನಿಷ್ಠೆ, ಪ್ರಾಮಾಣಿಕ ಹಾಗೂ ದಕ್ಷತೆ ಹೊಂದಿರುವ ಬಸವರಾಜ ರಾಯರಡ್ಡಿ ರಾಜ್ಯದ ನಾಯಕತ್ವ ವಹಿಸಿಕೊಳ್ಳಬೇಕು. ಆಡಳಿತದಲ್ಲಿ ಸುಧಾರಣೆ ತರುವ ಯೋಗ್ಯತೆ ಅವರಲ್ಲಿದೆ ಎಂದು ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಹೇಳಿದರು.

ಪಟ್ಟಣದಲ್ಲಿ ಯಲಬುರ್ಗಾ ಅಭಿವೃದ್ಧಿ ವೇದಿಕೆ, ಶಾಸಕರ ಕಚೇರಿ ಹಾಗೂ ಅವಳಿ ತಾಲೂಕಾಡಳಿತದಿಂದ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ‘ಯಲಬುರ್ಗಾ ಅಭಿವೃದ್ಧಿಯ ಸುವರ್ಣಯುಗ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ರಾಯರಡ್ಡಿ ಅವರು ಕ್ಷೇತ್ರವಷ್ಟೇ ಅಲ್ಲದೇ ರಾಜ್ಯದ ಆಸ್ತಿಯಾಗಿದ್ದಾರೆ. ಬಂಗಾರಪ್ಪ, ಜೆ.ಎಚ್.ಪಟೇಲ್, ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ, ದೇವೇಗೌಡ, ನಜೀರ್‌ಸಾಬ್‌ರಂಥ ನಾಯಕರ ಗರಡಿಯಲ್ಲಿ ಪಳಗಿದ್ದಾರೆ. ರಾಜ್ಯವನ್ನು ಸುವರ್ಣ ಕರ್ನಾಟಕವನ್ನಾಗಿ ನಿರ್ಮಿಸಲು ಹವಣಿಸುತ್ತಿದ್ದಾರೆ.

ಅವರು ಮುಖ್ಯಮಂತ್ರಿ ಆಗಬೇಕೆನ್ನುವುದು ನನ್ನ ಮನದ ಮಾತು ಎಂದ ಅವರು, ಯಲಬುರ್ಗಾ ಕ್ಷೇತ್ರದಲ್ಲಿ ರಾಯರಡ್ಡಿ ಮಾಡಿದ ಕೆಲಸ ಎಲ್ಲ ಶಾಸಕರಿಗೂ ಮಾದರಿ. ಸ್ವಚ್ಛ ಆಡಳಿತ, ಭ್ರಷ್ಟಾಚಾರ ರಹಿತ ರಾಜಕಾರಣ ಮಾಡಿದ್ದಾರೆ. ಸಿಎಂ ಆರ್ಥಿಕ ಸಲಹೆಗಾರರಾಗಿ ಸುಧಾರಣೆಗೆ ಶ್ರಮಿಸುತ್ತಿದ್ದಾರೆ ಎಂದರು.

ನಿವೃತ್ತ ಡಿಜಿಪಿ ಶಂಕರ ಬಿದರಿ ಮಾತನಾಡಿ, ಶಾಸಕ ರಾಯರಡ್ಡಿ ಬುದ್ಧಿವಂತ, ಸೇವಾಕಾಂಕ್ಷಿ ನಾಯಕ. ರಾಜ್ಯದ ನಾಯಕತ್ವ ವಹಿಸಿಕೊಳ್ಳುವುದರ ಜತೆಗೆ ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳ ನೇತೃತ್ವ ವಹಿಸಿ ಈ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಪುರ ಮಾತನಾಡಿದರು.

ಬೆಳಗಾವಿ ವಿಭಾಗದ ಭೂದಾಖಲೆಗಳ ಇಲಾಖೆಯ ನಜ್ಮಾ, ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಡಿವೈಎಸ್ಪಿ ಮುತ್ತಣ್ಣ ಸವರಗೋಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಮುಖಂಡ ಕೆ.ಬಿ. ಶ್ರೀನಿವಾಸ ರಡ್ಡಿ, ತಹಸೀಲ್ದಾರರಾದ ಬಸವರಾಜ ತೆನ್ನಳ್ಳಿ, ಪ್ರಾಣೇಶ, ತಾಪಂ ಇಒ ಸಂತೋಷ ಪಾಟೀಲ್, ಪಪಂ ಮುಖ್ಯಾಧಿಕಾರಿ ನಾಗೇಶ, ಸಿಪಿಐ ಮೌನೇಶ್ವರ ಮಾಲಿಪಾಟೀಲ್, ಪಿಎಸ್‌ಐಗಳಾದ ವಿಜಯ ಪ್ರತಾಪ, ಗುರುರಾಜ ಉಪಸ್ಥಿತರಿದ್ದರು.

ಕಲುಷಿತಗೊಂಡಿದೆ ರಾಜಕಾರಣ: ಕಾರ್ಯಕ್ರಮದಲ್ಲಿ ಮಾತನಾಡಿದ ರಾಯರಡ್ಡಿ, 40 ವರ್ಷಗಳ ರಾಜಕೀಯದಲ್ಲಿ ಕ್ಷೇತ್ರದ ಪ್ರತಿ ಗ್ರಾಮಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿದ್ದೇನೆ. ಸುವರ್ಣಯುಗ ಪುಸ್ತಕದಲ್ಲಿ ಎಲ್ಲ ಮಾಹಿತಿ ಒಳಗೊಂಡಿದ್ದು, 60 ಸಾವಿರ ಪ್ರತಿ ಮುದ್ರಿಸಲಾಗಿದೆ. ಪಕ್ಷಾತೀತವಾಗಿ ಅವಳಿ ತಾಲೂಕಿನ 53 ಸಾವಿರ ಮನೆಗಳಿಗೆ ಪುಸ್ತಕ ವಿತರಿಸಲಾಗುತ್ತಿದೆ. ನಾನು ಎಂದೂ ದ್ವೇಷದ ರಾಜಕಾರಣ ಮಾಡಿಲ್ಲ. ನಮ್ಮ ಕುಟುಂಬವನ್ನು ರಾಜಕೀಯಕ್ಕೆ ತಂದಿಲ್ಲ. ಜನಪ್ರತಿನಿಧಿಗಳು ಜನರ ಭಾವನೆ ಅರ್ಥ ಮಾಡಿಕೊಳ್ಳಬೇಕು. ಸೋಲು-ಗೆಲುವು ಸಹಜ. ಆದರೆ, ರಾಜಕಾರಣ ಕಲುಷಿತಗೊಂಡಿದೆ. ಕುಟುಂಬ ರಾಜಕೀಯ ಇರಬೇಕಾದರೆ ಪ್ರಜಾಪ್ರಭುತ್ವ ಯಾಕೆ ಬೇಕು? ಹೊಸ ಸುಧಾರಣೆ ತರಲು ರಾಜಕೀಯ ಮುತ್ಸದ್ಧಿಗಳು ಕೈಜೋಡಿಸಬೇಕು. ರಾಜಕಾರಣಿಗಳಿಗಿಂತ ಉನ್ನತ ಮಟ್ಟದ ಅಧಿಕಾರಿಗಳು ಹೆಚ್ಚು ಭ್ರಷ್ಟಾಚಾರದಲ್ಲಿ ತೊಡಗಿರುವುದರಿಂದ ಸುಧಾರಣೆ ಆಗುತ್ತಿಲ್ಲ. ಇವೆಲ್ಲ ಹೋಗಲು ಹೊಸ ಬದಲಾವಣೆ ಅವಶ್ಯ ಎಂದರು.

ಸೌಲಭ್ಯ ವಿತರಣೆ:: ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ದ್ವಿಚಕ್ರ ವಾಹನ, ಪೊಲೀಸ್ ಇಲಾಖೆಗೆ ನಾಲ್ಕು ನೂತನ ವಾಹನ ವಿತರಣೆ, ಬನ್ನಿಕೊಪ್ಪ, ಚಿಕ್ಕಬನ್ನಿಗೋಳ, ಮದ್ಲೂರು ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ, ಹಿರೇವಡ್ರಕಲ್ ರೈತರ ಜಮೀನುಗಳ ಪಹಣಿ ಪತ್ರಿಕೆ ವಿತರಿಸಲಾಯಿತು. ಇದಕ್ಕೂ ಮುಂಚೆ ತೆರೆದ ವಾಹನದಲ್ಲಿ ಗಣ್ಯರನ್ನು ಮೆರವಣಿಗೆ ಮಾಡಲಾಯಿತು. ದಾರಿಯುದ್ದಕ್ಕೂ ಪಟಾಕಿ ಸಿಡಿಸಿ ಹೂಮಳೆಗರೆದು ಸ್ವಾಗತಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net