1.2 ಕೆ.ಜಿ. ಅಕ್ರಮ ಚಿನ್ನ ಸಾಗಾಟ ಪತ್ತೆ

gold
Published on

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ತಡರಾತ್ರಿ 67 ಲಕ್ಷ ರೂ. ಮೌಲ್ಯದ 1.2 ಕೆ.ಜಿ. ಅಕ್ರಮ ಚಿನ್ನ ಸಾಗಾಟವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಪತ್ತೆ ಮಾಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಸ್ಪೈಸ್ ಜೆಟ್ ಎಸ್‌ಜಿ 146ನಲ್ಲಿ ಪ್ರಯಾಣಿಸಿದ್ದ ಇಬ್ಬರ ಬಳಿ ಅಕ್ರಮ ಚಿನ್ನ ಪತ್ತೆಯಾಗಿದೆ. ಭಟ್ಕಳದ ನಿವಾಸಿ 641 ಗ್ರಾಂ ಚಿನ್ನವನ್ನು ಪೇಸ್ಟ್ ರೂಪಕ್ಕೆ ಬದಲಾಯಿಸಿ ಐದು ದೊಡ್ಡ ಗಾತ್ರದ ಪ್ಲಾಸ್ಟಿಕ್ ಕ್ಯಾಪ್ಸೂಲ್‌ನೊಳಗೆ ತುಂಬಿಸಿ ಗುದದ್ವಾರದಲ್ಲಿಟ್ಟು ಸಾಗಾಟ ಮಾಡಿದ್ದ. ಇನ್ನೋರ್ವ ಕೇರಳದ ಕಾಸರಗೋಡಿನ ನಿವಾಸಿ 646 ಗ್ರಾಂ ಚಿನ್ನದ ಪೇಸ್ಟ್‌ನ್ನು ಒಳಚಡ್ಡಿಯಲ್ಲಿಟ್ಟು ಸಾಗಿಸಿದ್ದ. ಚಿನ್ನ ಸಾಗಾಟಕ್ಕೆಂದೇ ಒಳಚಡ್ಡಿಯಲ್ಲಿ ವಿಶೇಷ ಜೇಬನ್ನು ತಯಾರಿಸಿ, ಅದರಲ್ಲಿ ಚಿನ್ನದ ಪೇಸ್ಟ್ ತುಂಬಿದ್ದ ಪ್ಯಾಕೆಟ್ ಅಡಗಿಸಿಟ್ಟಿದ್ದ. ಪತ್ತೆಯಾದ ಚಿನ್ನವು 999 ಪರಿಶುದ್ಧತೆಯನ್ನು ಹೊಂದಿದೆ ಎಂದು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿರುವ ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ.

ಭಟ್ಕಳ ಹಾಗೂ ಕಾಸರಗೋಡು ಮೂಲದ ಗ್ಯಾಂಗ್‌ಗಳು ಅಕ್ರಮ ಚಿನ್ನ ಸಾಗಾಟ ಮಾಡುವ ಜಾಲ ಹೊಂದಿರುವ ಶಂಕೆಯಿದೆ. ಕರೊನಾ ಲಾಕ್‌ಡೌನ್ ನಿಬಂಧನೆಗಳಿಂದ ಅಕ್ರಮ ಚಿನ್ನ ಸಾಗಾಟಗಾರರಿಗೆ ಸಹಕಾರಿಯಾಗಿದೆ. ಬಂಧಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net