ಚಿನ್ನಾಭರಣ ಸುಲಿಗೆ ಆರೋಪಿಗಳಿಗೆ ಜೈಲು ಶಿಕ್ಷೆ

58690772
Published on

ಉಡುಪಿ: ಕಾರ್ಕಳದಲ್ಲಿ ಹತ್ತು ವರ್ಷದ ಹಿಂದೆ ನಡೆದಿರುವ ಚಿನ್ನಾಭರಣ ಸುಲಿಗೆ ಪ್ರಕರಣಕ್ಕೆ ಸಂಭಂದಿಸಿ ಇಬ್ಬರು ಆರೋಪಿಗಳಿಗೆ 7 ವರ್ಷಗಳ ಕಠಿಣ ಕಾರಗೃಹ ಶಿಕ್ಷೆ, ತಲಾ 5,000 ರೂ. ದಂಡ ವಿಧಿಸಿ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ.

ಕಾರ್ಕಳದ ಬಂಡಿಮಠದ ಮಧುಕರ ಆಚಾರ್ಯ (36) ಹಾಗು ಕುಂಭಾಶಿ ನಿವಾಸಿ ಪ್ರಶಾಂತ್ ಆಚಾರ್ಯ (36) ಶಿಕ್ಷೆಗಳಗಾದವರು.

ಪ್ರಕರಣ ಹಿನ್ನೆಲೆ

2013 ರ ಸೆಪ್ಟೆಂಬರ್ 9 ರಂದು ಕಾರ್ಕಳದ ಮಹಾಲಕ್ಷ್ಮಿ ಓಣಿಯಲ್ಲಿ ರಾಮಚಂದ್ರ ಮಾನೆ ಮಾಲೀಕತ್ವದ ಲಕ್ಷ್ಮೀ ಗೋಲ್ಡ್ ವರ್ಕ್ಸ್ ಚಿನ್ನಾಭರಣ ಅಂಗಡಿಗೆ ರಾತ್ರಿ 8.30 ರ ಸುಮಾರಿಗೆ ಆಗಮಿಸಿದ 6 ಜನರ ತಂಡದಲ್ಲಿ ಇಬ್ಬರು ಅಂಗಡಿಯ ಒಳಕ್ಕೆ ನುಗ್ಗಿ ಮಾಲೀಕನ ಕಣ್ಣಿಗೆ ಖಾರದ ಪುಡಿ ಎರಚಿ, 42,67, 832 ರೂ 1.50 ಕೆಜಿ ಚಿನ್ನಾಭರಣ ಮತ್ತು 40,000 ನಗದನ್ನು ದರೋಡೆಗೈದು ಪರಾರಿಯಾಗಿದ್ದರು.

ಅಂದು ರಾತ್ರಿ ಖಚಿತ ಮಾಹಿತಿ ಆಧರಿಸಿ ಹಿರಿಯಡ್ಕ ಠಾಣಾ ಪೋಲಿಸರು ಹಿರಿಯಡ್ಕದಲ್ಲಿ ರಾತ್ರಿ‌ 9.40 ರ ಸುಮಾರಿಗೆ ಸ್ಯಾಂಟ್ರೋ ಕಾರನ್ನು ತಡೆದು ಪರಿಶೀಲಿಸಿದಾಗ ಐವರು ಪರಾರಿಯಾಗಿದ್ದು, ಮಧುಕರ ಆಚಾರಿಯನ್ನು ಬಂಧಿಸಿ, ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದರು. ನಂತರ ಉಳಿದ ಆರೋಪಿಗಳನ್ನು ಬಂಧಿಸಿ ಅವರ ಬಳಿಯಿದ್ದ ಆಭರಣಗಳನ್ನು ವಶಕ್ಕೆ ಪಡೆಯಲಾಗಿತ್ತು.

ಆರು ಜನ ಆರೋಪಿಗಳಲ್ಲಿ ಮೋಹನ್ ಮೊಗವೀರ ಮತ್ತು ಚಂದ್ರ ಮೊಗವೀರ ಮೃತಪಟ್ಟಿದ್ದು, ಉಳಿದ ಇಬ್ಬರು ಆರೋಪಿಗಳಾದ ಕುಂದಾಪುರದ ಕೋಣಿ ನಿವಾಸಿ ಚಂದ್ರ ಆಚಾರ್ಯ ಮತ್ತು ಆನಗಳ್ಳಿ ನಿವಾಸಿ ಶಾಹಿದ್ ಅಲಿಯನ್ನು ಸಾಕ್ಷ್ಯಧಾರಗಳ ಕೊರತೆಯಿಂದ ನ್ಯಾಯಾಲಯ ಖುಲಾಸೆಗೊಳಿಸಿದೆ.

ಒಟ್ಟು 35 ಸಾಕ್ಷಿಗಳಲ್ಲಿ, 20 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದೆ‌.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net