

ರಾಯಚೂರು ನಗರದ ಸೇರಿದಂತೆ ಜಿಲ್ಲಾಧ್ಯಂತ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿ ಆರೋಪಿಯಿಂದ 7.89 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆಂದು ಎಸ್ಪಿ ಎಂ.ಪುಟ್ಟಮಾದಯ್ಯ ಹೇಳಿದರು.
ನಗರದ ಗ್ರಾಮೀಣ ಠಾಣೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತಿಚ್ಚಿಗೆ ತಾಲೂಕಿನ ಕಲ್ಮಲಾ ಗ್ರಾಮದ ಯಂಕಣ್ಣ ರಂಗಾ ಎನ್ನುವವರ ಮನೆಯ ಕೀಲಿ ಮುರಿದು 3,69,207 ರೂ.ಬೆಲೆ ಬಾಳುವ 77 ಗ್ರಾಂ ಚಿನ್ನದ ಅಭರಣ, 382 ಗ್ರಾಂ ಬೆಳ್ಳಿ, ಕಳ್ಳತನ ಮಾಡಿ ಪರಾರಿಯಾಗಿದ್ದು, ಈ ಕುರಿತು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗ್ರಾಮೀಣ ಠಾಣೆಯ ಸಿಪಿಐ ಸಾಬಯ್ಯ ನಾಯಕ ಹಾಗೂ ಪಿಎಸ್‌ಐ ಪ್ರಕಾಶ ರೆಡ್ಡಿ ನೇತೃತ್ವದಲ್ಲಿ ತಂಡ ರಚನೆ ಮಾಡಿ ಆರೋಪ ಪತ್ತೆಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಬಂಧಿತ ಆರೋಪಿ ಈರೇಶ ಎಲ್‌ಬಿಎಸ್ ನಗರದ ನಿವಾಸಿಯಾಗಿದ್ದಾನೆ. ಆರೋಪಿಯ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಳ್ಳುವ ಜತೆಗೆ ಸಂಬಂಧಿ ಮಹೇಶ ನಾಯಕ ಜತೆಗೆ ಗ್ರಾಮೀಣ ಭಾಗದಲ್ಲಿ ಮಾತ್ರವಲ್ಲದೆ ಸಿಂಧನೂರು, ಮಾನ್ವಿ, ಹಾಗೂ ಗಬ್ಬೂರು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿಯೂ ಕಳ್ಳತನ ಮಾಡಿದ್ದಾರೆಂದು ತಪ್ಪು ಒಪ್ಪಿಕೊಳ್ಳಲಾಗಿದೆ. ಮತ್ತೋರ್ವ ಆರೋಪಿ ಮಹೇಶ ನಾಯಕ ಪರಾರಿಯಲ್ಲಿದ್ದು ಪತ್ತೆ ಕಾರ್ಯ ನಡೆಯುತ್ತಿದೆ, ಬಂಧಿತ ಆರೋಪಿಯಿಂದ ಒಟ್ಟು 7,89,272 ರೂ. ಮೌಲ್ಯದ 76 ಗ್ರಾಂ ಚಿನ್ನದ ಅಭರಣಗಳು, 382 ಗ್ರಾಂ ಬೆಳ್ಳಿ, 13 ಸಾವಿರ ಮೌಲ್ಯದ ಎರಡು ಗಡಿಯಾರಗಳು, 10 ಸಾವಿರ ಮೌಲ್ಯದ ಸೊನಿ ಕ್ಯಾಮರಾವನ್ನು ವಶಪಡಿಸಿಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ಎಎಸ್ಪಿ ಜಿ.ಹರೀಶ, ಡಿವೈಎಸ್ಪಿ ಶಾಂತವೀರ, ಸಿಪಿಐ ಸಾಬಯ್ಯ, ಪಿಎಸ್‌ಐ ಪ್ರಕಾಶ ರೆಡ್ಡಿ ಡಂಬಳ ಸೇರಿ ಸಿಬ್ಬಂದಿಗಳು ಇದ್ದರು.