ಚಿನ್ನದ ವ್ಯಾಪಾರಿ ಅಡ್ಡಗಟ್ಟಿ ದರೋಡೆ

28-GPT-3
ಗುಂಡ್ಲುಪೇಟೆ ತಾಲೂಕಿನ ಅಗತಗೌಡನಹಳ್ಳಿ ಸಮೀಪ ಅಪಹರಿಸಿದ ಕಾರನ್ನು ಬೇಗೂರು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು.
Published on

ಗುಂಡ್ಲುಪೇಟೆ : ತಾಲೂಕಿನ ಅಗತಗೌಡನಹಳ್ಳಿ ಗೇಟ್ ಸಮೀಪ ಬುಧವಾರ ರಾತ್ರಿ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು ಲಕ್ಷಾಂತರ ರೂ. ದರೋಡೆ ಮಾಡಿದ್ದಾರೆ. ಕೇರಳ ಮೂಲದ ಚಿನ್ನದ ವ್ಯಾಪಾರಿ ರಹೀಂ ಕಾರಿನಲ್ಲಿ ನಂಜನಗೂಡಿನಿಂದ ಕೇರಳಕ್ಕೆ ತೆರಳುತ್ತಿದ್ದರು. ಈ ವೇಳೆ ಇನ್ನೋವಾ ಹಾಗೂ ವ್ಯಾಗನಾರ್ ಕಾರುಗಳು ಮತ್ತು ಒಂದು ಲಾರಿಯಲ್ಲಿ ಹಿಂಬಾಲಿಸಿ ಬಂದ ದುಷ್ಕರ್ಮಿಗಳು, ಅಗತಗೌಡನಹಳ್ಳಿ ಗೇಟ್ ಸಮೀಪ ಮುಂದೆ ಹೋಗುತ್ತಿದ್ದ ಕಾರನ್ನು ಅಡ್ಡಗಟ್ಟಿ ರಹೀಂ ಅವರನ್ನು ಅಪಹರಿಸಿಕೊಂಡು ಹೋಗಿದ್ದಾರೆ. ದುಷ್ಕರ್ಮಿಗಳನ್ನು ಕಂಡ ಕೂಡಲೇ ರಹೀಂ ಜತೆಯಲ್ಲಿದ್ದ ಸ್ನೇಹಿತ ನೈಪಾಜ್ ಜೀವಭಯದಿಂದ ಪರಾರಿಯಾಗಿದ್ದಾರೆ. ರಹೀಂ ಅವರನ್ನು ನಂಜನಗೂಡಿನ ಕಳಲೆಯತ್ತ ಕೊಂಡೊಯ್ದು, ಸುಮಾರು ಒಂದು ಗಂಟೆ ಕಾಲ ಅಕ್ರಮ ಬಂಧನದಲ್ಲಿಟ್ಟು, ಅವರ ಬಳಿಯಿದ್ದ 44 ಲಕ್ಷ ರೂ.ಗಳನ್ನು ಕಿತ್ತುಕೊಂಡು ನಂತರ ಬಿಡುಗಡೆ ಮಾಡಿದ್ದಾರೆ. ಬಳಿಕ ಬೇರೆ ವಾಹನದಲ್ಲಿ ಬೇಗೂರು ಠಾಣೆಗೆ ಆಗಮಿಸಿದ ರಹೀಂ ಈ ಬಗ್ಗೆ ದೂರು ನೀಡಿದರು. ಕೂಡಲೇ ಪತ್ತೆ ಕಾರ್ಯಕ್ಕೆ ಮುಂದಾದ ಪೊಲೀಸರು ಅಪಹರಿಸಿದ್ದ ಕಾರನ್ನು ಅಗತಗೌಡನಹಳ್ಳಿ ಸಮೀಪ ಕರಿಕಲ್ಲು ಕ್ವಾರಿ ಬಳಿ ಪತ್ತೆಹಚ್ಚಿದರು. ಸ್ಥಳಕ್ಕೆ ಎಸ್‌ಪಿ, ಎಎಸ್‌ಪಿ, ಡಿವೈಎಸ್‌ಪಿ ಭೇಟಿ ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿದ ಬೇಗೂರು ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಕಳೆದ ತಿಂಗಳು ಬೇಗೂರಿನಲ್ಲಿ ಚಿನ್ನದ ವ್ಯಾಪಾರಿಯ ಕಾರು ಅಡ್ಡಗಟ್ಟಿ 40 ಲಕ್ಷ ರೂ. ದರೋಡೆ ಮಾಡಿದ್ದ ಪ್ರಕರಣ ಮಾಸುವ ಮುನ್ನವೇ ಮತ್ತೆ ಅಂತಹುದೇ ಘಟನೆ ನಡೆದಿದೆ. -------- * 28 ಎಂವೈಎಸ್ 08: ಗುಂಡ್ಲುಪೇಟೆ ತಾಲೂಕಿನ ಅಗತಗೌಡನಹಳ್ಳಿ ಸಮೀಪ ಅಪಹರಿಸಿದ ಕಾರನ್ನು ಬೇಗೂರು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net