ಎಂ.ಪಿ.ಇಎಡ್‌ನಲ್ಲಿ ತೇಜಸ್‌ಗೆ ಚಿನ್ನದ ಪದಕ

mysore
Published on

ಮೈಸೂರು: ಕೂಲಿ ಕೆಲಸ ಮಾಡುವವರ ಮಗ ಮೈಸೂರು ವಿಶ್ವವಿದ್ಯಾಲಯದ 104ನೇ ವಾರ್ಷಿಕ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದುಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.


ಎ.ತೇಜಸ್ ಈ ಸಾಧನೆ ಮಾಡಿರುವ ವಿದ್ಯಾರ್ಥಿ. ವಿಆರ್‌ಎಲ್‌ನಲ್ಲಿ ದಿನಗೂಲಿ ಮೇಲೆ ಕೆಲಸ ಮಾಡುವ ಅನಂತಕುಮಾರ್, ಗೃಹಿಣಿ ಆಗಿರುವ ತಾಯಿ ಎಸ್.ಶೋಭಾ ದಂಪತಿಯ ಪುತ್ರ. ಇವರು ತಿಲಕನಗರದ ನಿವಾಸಿ.


ಸ್ನಾತಕ ಕೋರ್ಸ್ ಆಗಿರುವ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ(ಎಂ.ಪಿ.ಇಎಡ್) ವಿಷಯದಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದು, ಈಜು ಮತ್ತು ಅಥ್ಲೆಟಿಕ್‌ನಲ್ಲಿ ಈ ಸಾಧನೆ ಮಾಡಿದ್ದಾರೆ.


ವಿವಿ ಕಾರ್ಯಸೌಧವಾದ ಕ್ರಾಫರ್ಡ್ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಘಟಿಕೋತ್ಸವ ಸಮಾರಂಭದಲ್ಲಿ ಇವರಿಗೆ ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿ ಪ್ರಮಾಣವನ್ನು ವಿತರಿಸಿದರು.


ಮಹಾರಾಜ ಕಾಲೇಜಿನಲ್ಲಿ ಬಿಎ ಪೂರ್ಣಗೊಳಿಸಿದ ತೇಜಸ್ ಬಳಿಕ ಬಿ.ಪಿ.ಇಎಡ್ ತೇರ್ಗಡೆಯಾದರು. ಬಳಿಕ ಎಂ.ಪಿ.ಇಎಡ್ ಮಾಡಿದ್ದಾರೆ. ಮುಂದೆ ಪಿಎಚ್.ಡಿ ಮಾಡುವ ಗುರಿ ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net