

ಮಂಡ್ಯ: ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ಇಬ್ಬರು ಅಧಿಕಾರಿಗಳು 2024ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ,
ಮಂಡ್ಯ ಅಗ್ನಿಶಾಮಕ ಠಾಣೆಯ ಪ್ರಮುಖ ಅಗ್ನಿಶಾಮಕ ಪ್ರಭಾಕರ್ ಶೆಟ್ಟಿ ಮತ್ತು ಪಾಂಡವಪುರ ಅಗ್ನಿಶಾಮಕ ಠಾಣೆಯ ಪ್ರಮುಖ ಅಗ್ನಿಶಾಮಕ ಎನ್.ಎಸ್.ಹರೀಶ್‌ಗೆ ಪ್ರಶಸ್ತಿ ಬಂದಿದೆ. ಇವರಿಗೆ ಇತ್ತೀಚೆಗೆ ಬೆಂಗಳೂರಿನ ಆರ್.ಎ ಮುಂಡ್ಕೂರು ಅಗ್ನಿಶಾಮಕ ಅಕಾಡೆಮಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ರವರು ಚಿನ್ನದ ಪದಕ ನೀಡಿ ಗೌರವಿಸಿದರು.
ಯಾವುದೇ ಅನಾಹುತಗಳು ಸಂಭವಿಸಿದಾಗ ಮೊದಲು ಮುನ್ನುಗ್ಗಿ ಬಂದು ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವ ಅಗ್ನಿಶಾಮಕ ಇಲಾಖೆಯ ಅಧಿಕಾರಿ/ಸಿಬ್ಬಂದಿಯ ಕಾರ್ಯವೈಖರಿ ಮತ್ತು ದಕ್ಷತೆಯನ್ನು ಗುರುತಿಸಿ ಸರ್ಕಾರ ಚಿನ್ನದ ಪದಕ ನೀಡುತ್ತದೆ. ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ ಇಬ್ಬರು ಚಿನ್ನದ ಪದಕ ವಿಜೇತರನ್ನು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮತ್ತು ಸಹೋದ್ಯೋಗಿಗಳು, ಸಾರ್ವಜನಿಕರು ಅಭಿನಂದಿಸಿದ್ದಾರೆ.